Advertisement

ಮೂಲಸೌಕರ್ಯ, ವಿವಿಧ ಸೌಲಭ್ಯ ಪಡೆಯಲು ಸಂಕಷ್ಟ

10:06 AM Jul 28, 2018 | Team Udayavani |

ಮಹಾನಗರ: ಕರಾವಳಿಯಲ್ಲಿ  ಬಹುಜನರ ಜೀವನಾಧಾರವಾಗಿರುವ ಮೀನುಗಾರಿಕೆಗೆ ಸೂಕ್ತ ಮೂಲ ಸೌಕರ್ಯ ಕಲ್ಪಿಸಬೇಕಿರುವ ಮೀನುಗಾರಿಕೆ ಇಲಾಖೆಯಲ್ಲಿ ಅಗತ್ಯದಷ್ಟು ಸಿಬಂದಿ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಇಲಾಖೆಗೆ ಒಟ್ಟು 43 ಹುದ್ದೆ ಮಂಜೂರಾಗಿದ್ದು, ಆ ಪೈಕಿ ಭರ್ತಿಯಾದದ್ದು, ಕೇವಲ 16 ಮಾತ್ರ. ಅಂದರೆ, ಇನ್ನೂ 27 ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಇಲಾಖೆಗಳಲ್ಲಿ ಆಗಬೇಕಾಗಿರುವ ಬಹಳಷ್ಟು ಕೆಲಸಗಳಿಗೆ ಹಿನ್ನಡೆಯಾಗಿದ್ದು, ಇತ್ತ ಮೀನುಗಾರರು ಕೂಡ ತಮ್ಮ ಸವಲತ್ತು ಗಳನ್ನು ಪಡೆದುಕೊಳ್ಳಲು ಸಂಕಷ್ಟ ಅನುಭವಿಸುತ್ತಿದ್ದಾರೆ.

Advertisement

ಉಪ ನಿರ್ದೇಶಕರ ಹುದ್ದೆ ಖಾಲಿ
ಮೀನುಗಾರಿಕ ರಾಜ್ಯ ವಲಯದಲ್ಲಿ ಒಟ್ಟು 13 ಹುದ್ದೆಗಳ ಪೈಕಿ 5 ಹುದ್ದೆ ಭರ್ತಿಯಾಗಿ 8 ಖಾಲಿಯಿದೆ. ಅದರಲ್ಲಿಯೂ ಮೀನುಗಾರಿಕ ಉಪ ನಿರ್ದೇಶಕರ ಹುದ್ದೆ ಖಾಲಿ ಇದ್ದು, ಸದ್ಯ ಹಂಗಾಮಿ ಉಪನಿರ್ದೇಶಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಂತೆಯೇ ದೋಣಿ ಮತ್ತು ಸಲಕರಣೆ ವಿಭಾಗದಲ್ಲಿ ಮೀನುಗಾರಿಕ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇವೆ. ಹಾಗಾಗಿ ಬೋಟ್‌ಗಳ ನವೀಕರಣಕ್ಕೆ ಸಂಬಂಧಪಟ್ಟಂತಹ ಕೆಲಸಗಳು ನಡೆಯಬೇಕಾದರೆ ತುಂಬಾ ಸಮಯಬೇಕು. ಮೀನುಗಾರಿಕ ಜಿಲ್ಲಾ ವಲಯ ಶ್ರೇಣಿ 1ರಲ್ಲಿ ಒಟ್ಟು 12 ಹುದ್ದೆಗಳ ಪೈಕಿ 7 ಹುದ್ದೆಗಳು ಖಾಲಿ ಇವೆ. ಮೀನುಗಾರಿಕ ತಾಲೂಕು ವಲಯ ಶ್ರೇಣಿ 2ರಲ್ಲಿ 11 ಹುದ್ದೆಗಳಲ್ಲಿ 7 ಹುದ್ದೆಗಳು ಭರ್ತಿಯಾಗಲು ಬಾಕಿ ಇವೆ. ಮೀನುಗಾರಿಕ ದೋಣಿ ಮತ್ತು ಸಲಕರಣೆ ವಿಭಾಗದಲ್ಲಿ 7 ಹುದ್ದೆಗಳಲ್ಲಿ 5 ಹುದ್ದೆ ಖಾಲಿ ಇವೆ. ಒಟ್ಟಾರೆಯಾಗಿ ನಾಲ್ಕು ವಿಭಾಗಗಳಲ್ಲಿ 43 ಹುದ್ದೆಗಳ ಪೈಕಿ 27 ಹುದ್ದೆಗಳು ಖಾಲಿ ಇವೆ.

ಮೀನುಗಾರಿಕ ಇಲಾಖೆಯಲ್ಲಿ ಹುದ್ದೆ ಭರ್ತಿ ಮಾಡುವಂತೆ ಕೆಲವು ವರ್ಷಗಳಿಂದ ಇಲಾಖೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿತ್ತು. ಅದರಂತೆ ಕಳೆದ ವರ್ಷ ರಾಜ್ಯಮಟ್ಟದ ಮೀನುಗಾರಿಕ ಇಲಾಖೆಯಲ್ಲಿ ಕೆಲವೊಂದು ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಆದರೂ ಅರ್ಧದಷ್ಟೂ ಹುದ್ದೆ ತುಂಬಿಕೊಂಡಿಲ್ಲ ಎಂಬುವುದು ವಾಸ್ತವ.

ಯೋಜನೆ ಸಮರ್ಪಕ ಜಾರಿಯಾಗುವುದಿಲ್ಲ
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಉಳಿತಾಯ ಪರ್ಯಾಯ ಯೋಜನೆಯ ಲಾಭ ಸಮರ್ಪಕವಾಗಿ ಮೀನುಗಾರರಿಗೆ ಸಿಗುತ್ತಿಲ್ಲ. ಮೂರು ವರ್ಷಗಳಿಂದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳದ ಮೀನುಗಾರರು ಹೆಚ್ಚಿನವರಿದ್ದಾರೆ. ಈ ಬಗ್ಗೆ ಮೀನುಗಾರಿಕ ಇಲಾಖೆಯನ್ನು ಕೇಳಿದರೆ ಸಿಬಂದಿ ಕೊರತೆ ಇದೆ ಎಂಬ ನೆಪ ಹೇಳುತ್ತಾರೆ. ಅದೇ ರೀತಿ ಯಶಸ್ವಿನಿ ಯೋಜನೆಯ ಮರು ನವೀಕರಣ, ಬೋಟ್‌ಗಳಿಗೆ ಪರಿಹಾರ, ಮೀನುಗಾರಿಕ ಮಾರುಕಟ್ಟೆ ಸೇರಿದಂತೆ ಇನ್ನಿತರ ಕಾರ್ಯಗಳು ಇನ್ನೂ ಬಾಕಿ ಇವೆ ಎನ್ನುತ್ತಾರೆ ಮೀನುಗಾರಿಕ ಮುಖಂಡರು.

ಮೂರು ಹುದ್ದೆ ಏಜೆನ್ಸಿ ಮೂಲಕ ಭರ್ತಿ
ಮೀನುಗಾರಿಕ ಇಲಾಖೆಯ ರಾಜ್ಯ ವಲಯದಲ್ಲಿ ತತ್‌ಕ್ಷಣಕ್ಕೆ ಮೂರು ಹುದ್ದೆಗಳನ್ನು ಭರ್ತಿ ಮಾಡಲು ಏಜೆನ್ಸಿಯ ಮೂಲಕ ಬಾಹ್ಯ ಮೂಲದಿಂದ (ಔಟ್‌ ಸೋರ್ಸ್‌)ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ ಜವಾನ, ಡೇಟಾ ಎಂಟ್ರಿ ಆಪರೇಟರ್‌ ಮತ್ತು ಕ್ಲೀನಿಂಗ್‌ ಹುದ್ದೆಗಳನ್ನು ಭರ್ತಿ ಮಾಡಿದೆ.

Advertisement

ಸರಕಾರಕ್ಕೆ ಪತ್ರ ಬರೆಯಲಾಗಿದೆ
ಮೀನುಗಾರಿಕೆ ಇಲಾಖೆಯಲ್ಲಿ 43 ಹುದ್ದೆಗಳಲ್ಲಿ 27 ಹುದ್ದೆ ಖಾಲಿ ಇವೆ. ಕೆಲವೊಂದು ಹುದ್ದೆಗಳನ್ನು ಏಜೆನ್ಸಿ ಮೂಲಕ ಭರ್ತಿ ಮಾಡಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿ ಕೆಲವು ವರ್ಷಗಳ ಹಿಂದೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.
– ಮಹೇಶ್‌ ಕುಮಾರ್‌,
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ (ಹಂಗಾಮಿ)

ಕೂಡಲೇ ಭರ್ತಿ ಮಾಡಿ
ಮೀನುಗಾರಿಕ ಇಲಾಖೆಯಲ್ಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಇಲ್ಲವಾದರೆ ಮೀನುಗಾರರಿಗೆ ಸಿಗಬೇಕಾದ ಅನೇಕ ಸವಲತ್ತು ಸಿಗುವಲ್ಲಿ ವಿಳಂಬವಾಗುತ್ತದೆ. ಮೀನುಗಾರಿಕೆ‌ ಸಚಿವರ ಗಮನಕ್ಕೆ ಈ ವಿಚಾರವನ್ನು ತಂದಿದ್ದೇವೆ. ಈ ಬಗ್ಗೆ ಗಮನಹರಿಸುತ್ತೇನೆ ಎಂಬ ಭರವಸೆ ನೀಡಿದ್ದಾರೆ.
– ವಾಸುದೇವ ಬೋಳೂರು,
ಕರಾವಳಿ ಮೀನುಗಾರರ ಕ್ರಿಯಾ ಸಮಿತಿ
ಪ್ರಧಾನ ಕಾರ್ಯದರ್ಶಿ

‡ ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next