Advertisement

ರೈತನ ದೇಹದಲ್ಲಿದೆ ಶೇ. 51 ಕೀಟನಾಶಕ: ಪ್ರಕಾಶ್‌ ಕಮ್ಮರಡಿ

10:45 AM Feb 01, 2018 | |

ಮೂಡಬಿದಿರೆ: “ಶ್ರಮಜೀವಿಗಳಾಗಿರುವ ಅನೇಕ ರೈತರಿಗೆ ಕಣ್ಣಿನ ತೊಂದರೆ ಇದೆ. ಮಧುಮೇಹ 420ರ ಗಡಿ ದಾಟಿದರೂ ಅವರಿಗದರ ಅರಿವೇ ಇಲ್ಲ. ರಕ್ತಪರೀಕ್ಷೆ ಮಾಡಿದರೆ ಕೆಲವರಲ್ಲಿ ಕೀಟನಾಶಕಗಳ ಅಂಶ ಶೇ. 51ರಷ್ಟಿದೆ. ಕೆಲವೆಡೆ ಬಾಲ್ಯವಿವಾಹ ಇನ್ನೂ ರೂಢಿಯಲ್ಲಿದೆ. ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಚಿಂತೆಯೇ ಇಲ್ಲ’. ಕೃಷಿಯೊಂದಿಗೆ ಹಾಸುಹೊಕ್ಕಾದ ಇಂತಹ ಗಂಭೀರ ಸಂಗತಿಗಳನ್ನು ಹೊರಗೆಡಹಿದವರು 

Advertisement

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಅವರು. ಕೃಷಿ ಬೆಲೆ ಆಯೋಗ ಬೆಂಗಳೂರು ಮತ್ತು ದ.ಕ. ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ದರೆಗುಡ್ಡೆ ಗ್ರಾಮದಲ್ಲಿ ಬುಧವಾರ ನಡೆದ “ರಾಜ್ಯದ ರೈತರ ಕರಾವಳಿ ರೈತ ಸಮ್ಮಿಲನ’ ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದ ಅವರು ರೈತರ ಆರ್ಥಿಕ ಅಭಿವೃದ್ಧಿಯ ಜತೆಗೆ ಅವರ ದೈಹಿಕ ಆರೋಗ್ಯ, ಮನೋದಾಡ್ಯì, ಪರಿಸರ ಸ್ವಚ್ಛತೆ, ಮಣ್ಣಿನ ಸಾಮರ್ಥ್ಯ ವೃದ್ಧಿ ಮೊದಲಾದ ವಿಷಯಗಳನ್ನು ಸಮಗ್ರ ದೃಷ್ಟಿಯಿಂದ ವಿವೇಚಿಸಿ, ಕಾರ್ಯಚಟುವಟಿಕೆಗಳನ್ನು ನಡೆಸುವುದು ಮುಖ್ಯವಾಗಿದೆ; ಕೃಷಿ ಬೆಲೆ ಆಯೋಗ ಈ ದಿಸೆಯಲ್ಲಿ ಮಹತ್ವದ ಯೋಜನೆ ಹಮ್ಮಿಕೊಂಡಿದೆ’ ಎಂದರು.

ದರೆಗುಡ್ಡೆಯಲ್ಲಿ ಗೊಂಡೆ ಹೂವಿನ ಕೃಷಿ: ದ.ಕ. ಜಿಲ್ಲೆ ಬಹುವಿಧ ಕೃಷಿ ಚಟುವಟಿಕೆ ನಡೆಸಲು ಸೂಕ್ತವಾಗಿದ್ದು ದರೆಗುಡ್ಡೆಯಲ್ಲಿ ಗೊಂಡೆ ಹೂವಿನ ಕೃಷಿ ನಡೆಸಲು ಉತ್ತಮ ವಾತಾವರಣವಿದೆ; ರೈತರು ಮುಂದೆ ಬರಬೇಕು’ ಎಂದು ಡಾ| ಕಮ್ಮರಡಿ ಕರೆ ನೀಡಿದರು.

ದರೆಗುಡ್ಡೆಗೊಲಿದ ಭಾಗ್ಯ: ದರೆಗುಡ್ಡೆಯ ಪ್ರಗತಿಪರ ರೈತ ಕೆಲ್ಲಪುತ್ತಿಗೆ ಜೀವಂಧರ ಚೌಟರ ತೋಟದ ನಡುವೆ ನಡೆದ ಸಭಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಅಭಯಚಂದ್ರ ಮಾತನಾಡಿ, ಮೀನುಗಾರಿಕಾ ಸಚಿವನಾಗಿದ್ದಾಗ ದ.ಕ. ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಕುಮಾರ ಮಗದ, ಕರ್ನಾಟಕ ಪಶುಸಂಗೋಪನೆ, ಮೀನುಗಾರಿಕಾ ವಿ.ವಿ. ವಿಸ್ತರಣಾ ನಿರ್ದೇಶಕ ಎಸ್‌. ಎಂ. ಶಿವಪ್ರಕಾಶ್‌ ಅವರಿತ್ತ ಪ್ರಸ್ತಾವನೆಯನ್ವಯ ದರೆಗುಡ್ಡೆಯನ್ನು ಆರಿಸಲಾಗಿದ್ದು ಇದು ದರೆಗುಡ್ಡೆಯ ರೈತರ ಪಾಲಿನ ಭಾಗ್ಯವಾಗಿದೆ’ ಎಂದರು. ದ.ಕ. ಜಿಲ್ಲೆಯ ಕೃಷಿರಂಗದಲ್ಲಿ ಶೇ. 10ರಷ್ಟು ಮಾತ್ರ ಅಭಿವೃದ್ಧಿ ಕಂಡಿದ್ದು ಮಿಕ್ಕಂತೆ ಸ್ವಾಭಿಮಾನದ ಬದುಕಿಗಾಗಿ ಹರಸಾಹಸ ಪಡುವ ಇಲ್ಲಿನ ರೈತರ ಶಿಸ್ತಿನ ಪ್ರಯತ್ನ ಹಾಗೂ ಎಸ್‌ಕೆಡಿಆರ್‌ಡಿಪಿಯ ಮೂಲಕ ನಡೆದಿರುವ ಕೃಷಿ ಕ್ರಾಂತಿ ಉಲ್ಲೇಖನೀಯ’ ಎಂದು ಅವರು ಹೇಳಿದರು.

ಬದುಕಿಗೆ ಮೂಲಾಧಾರವಾಗಿರುವ ಕೃಷಿ ರಂಗವನ್ನು ವಾಣಿಜ್ಯ ದೃಷ್ಟಿಯಿಂದ ನೋಡುವುದು ಅನಿವಾರ್ಯ ಎಂದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌, ಕೃಷಿ ತಜ್ಞ ಡಾ| ಎಲ್‌. ಸಿ. ಸೋನ್ಸ್‌, ಕರ್ನಾಟಕ ಪಶುವೈದ್ಯಕೀಯ, ಮೀನು ಗಾರಿಕಾ ವಿಜ್ಞಾನಗಳ ವಿ.ವಿ. ವಿಸ್ತರಣಾ ನಿರ್ದೇಶಕ ಎಸ್‌. ಎಂ. ಶಿವಪ್ರಕಾಶ್‌ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಮುಖ್ಯಅತಿಥಿಯಾಗಿದ್ದರು.

Advertisement

ಆರೋಗ್ಯ ತಪಾಸಣೆ, ವ್ಯಕ್ತಿತ್ವ ವಿಕಸನ: ಕಳೆದ ಎರಡು ದಿನಗಳಲ್ಲಿ ಮಣಿಪಾಲ ಕೆಎಂಸಿಯಲ್ಲಿ ರೈತರ ಆರೋಗ್ಯ ತಪಾಸಣೆ ನಡೆಸಿ ಅವರಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬುಧವಾರ ಬೆಳಗ್ಗೆ 9.30ರಿಂದ ದರೆಗುಡ್ಡೆಯ ಪುಷ್ಪದಂತ ನರ್ಸರಿ ತೋಟ ವೀಕ್ಷಿಸಿ ಉಪಾಹಾರ ಸ್ವೀಕರಿಸಿದ ರೈತರು ಬಳಿಕ ಪ್ರಭಾಕರ ಹಾಗೂ ಕೆಲ್ಲಪುತ್ತಿಗೆಗುತ್ತು ಜೀವಂಧರ ಚೌಟರ ಕೃಷಿಯನ್ನು ನೋಡಿ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೋಜನ ಸ್ವೀಕರಿಸಿ ಅಪರಾಹ್ನದ ಬಳಿಕ ಬನ್ನಡ್ಕದಲ್ಲಿ ಡಾ| ಎಲ್‌.ಸಿ. ಸೋನ್ಸ್‌ ಅವರ ತೋಟ ಮತ್ತು ಮೂಡಬಿದಿರೆಯ ಸಾವಿರ ಕಂಬದ ಬಸದಿಯನ್ನು ಸಂದರ್ಶಿಸಿದರು.

ದ.ಕ. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಶಿವಕುಮಾರ ಮಗದ ಸ್ವಾಗತಿಸಿದರು. ವಿವಿಧ ಕೆವಿಕೆ ಮುಖ್ಯಸ್ಥರು, ತೋಟಗಾರಿಕಾ ಅಧಿಕಾರಿ ಪ್ರದೀಪ್‌ ಡಿ’ಸೋಜಾ ಉಪಸ್ಥಿತರಿದ್ದರು. ಮೂಡಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ, ದರೆಗುಡ್ಡೆಯ ಸುಭಾಶ್ಚಂದ್ರ ಚೌಟ ಅತಿಥಿಗಳನ್ನು ಗೌರವಿಸಿದರು. ಜತೆ ಕಾರ್ಯದರ್ಶಿ ಸುಜಾತಾ ರಮೇಶ್‌ ನಿರೂಪಿಸಿದರು.

ಕೆಎಂಸಿ ಆರೋಗ್ಯ ವಿಮೆ: ಈ ಯೋಜನೆಯಡಿ ಹಾವೇರಿ ಹನುಮನ ಮಟ್ಟಿ ತಾಲೂಕಿನ ಕುರ್ದು ವೀರಾಪುರ, ತುಮಕೂರು ಕೊನೆಹಳ್ಳಿ ತಾಲೂಕಿನ ಹುಲ್ಲುಕಟ್‌ಕೊಪ್ಪ, ಕೋಲಾರದ ಬೈಯಪ್ಪನ ಹಳ್ಳಿ, ಚಿತ್ರದುರ್ಗ ಹಿರಿಯೂರು ತಾಲೂಕಿನ ಶಿಡ್ಲಯ್ಯನ ಕೋಟೆ, ರಾಯಚೂರಿನ ಜಕ್ಕಲದಿನ್ನಿ, ಕಲಬುರಗಿಯ ತೆಲ್ಲೂರು, ಬೆಳಗಾವಿ ಅರಭಾವಿಯ ಮುದುವಾಲ, ದ.ಕ. ಜಿಲ್ಲೆಯ ದರೆಗುಡ್ಡೆ ಹಾಗೂ ಉಡುಪಿ ಜಿಲ್ಲೆಯ ಆಯ್ದ ರೈತರು ರೂ. 50,000ದ ಕೆಎಂಸಿಯ ಆರೋಗ್ಯ ವಿಮೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next