Advertisement

ನಗರ ವ್ಯಾಪ್ತಿಯಲ್ಲಿ ಸರಕಾರಿ ನಿವೇಶನ 1.75 ಸೆಂಟ್ಸ್‌ಗೆ ಇಳಿಕೆ

08:14 PM Sep 13, 2021 | Team Udayavani |

ಮಹಾನಗರ: ನಗರ ಪ್ರದೇಶದಲ್ಲಿ ನಿವೇಶನರಹಿತರಿಗೆ ಮನೆ ನಿರ್ಮಾಣಕ್ಕೆ ಸರಕಾರದಿಂದ ನೀಡುವ ಜಾಗದಮಿತಿ ಯನ್ನು 1.25 ಸೆಂಟ್ಸ್‌ಗೆ ಇಳಿಕೆ ಮಾಡಿದ್ದು, ಇದಕ್ಕೆ ಹೊಂದಿಕೊಂಡು ಮನೆ ನಿರ್ಮಾಣ ಮಾಡುವುದು ಫಲಾನುಭವಿಗಳಿಗೆ ಸವಾಲು ಆಗಿ ಪರಿಣಮಿಸಿದೆ.

Advertisement

ಸುಮಾರು ಎರಡು ದಶಕಗಳ ಹಿಂದೆ ನಿವೇಶನರಹಿತರಿಗೆ ಸರಕಾರದಿಂದ ತಲಾ 5 ಸೆಂಟ್ಸ್‌ ಜಾಗ ವಿತರಣೆಯಾಗುತ್ತಿತ್ತು. ಇದು ಅನಂತರದಲ್ಲಿ 3 ಸೆಂಟ್ಸ್‌ಗೆ ಇಳಿಕೆಯಾಯಿತು. ಇದೀಗ ಮತ್ತಷ್ಟು ಇಳಿಕೆಯಾಗಿ 1.75 ಸೆಂಟ್ಸ್‌ಗೆ ಅಂದರೆ 20 x 30 ನಿವೇಶನಕ್ಕೆ ಅಂದರೆ 500 ಚದರ ಅಡಿ) ನಿಗದಿಯಾಗಿದೆ.

ಮನೆ ನಿರ್ಮಾಣಕ್ಕೆ ಕನಿಷ್ಠ ಎರಡೂವರೆ ಸೆಂಟ್ಸ್‌ನಿಂದ ಮೂರು ಸೆಂಟ್ಸ್‌ (ಸುಮಾರು 1200 ಚದರ ಅಡಿ ಜಾಗ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ದೊಡ್ಡ ನಗರಗಳಲ್ಲಿ 30 x 40 (1200 ಚದರ ಅಡಿ) ನಿವೇಶನಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತಿತ್ತು. ಮುಂದೆ ಜಾಗ ಲಭ್ಯತೆಯ ಸಮಸ್ಯೆಯಿಂದ 20 x30 ನಿವೇಶನಕ್ಕೆ ಇಳಿಕೆ ಕಂಡಿತು. ಇದು ಸರಕಾರಿ ನಿವೇಶನ ವಿಸ್ತೀರ್ಣ ಇಳಿಕೆ ದೊಡ್ಡ ನಗರಗಳಲ್ಲಿ ಇದು ಹೊಂದಿಕೆಯಾಗುತ್ತದೆಯಾದರೂ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಪ್ರದೇಶಕ್ಕೆ ಇದಕ್ಕೆ ಒಗ್ಗಿಕೊಳ್ಳಲು ಕಷ್ಟಸಾಧ್ಯವಾಗುತ್ತಿದ್ದು, ಫಲಾನುಭವಿಗಳಿಗೆ ಸಂಕಷ್ಟದ ಪರಿಸ್ಥಿತಿಯನ್ನು ತಂದೊಡ್ಡಿದೆ.

ಜಾಗದ ಸಮಸ್ಯೆ:

ಏರುತ್ತಿರುವ ಜನಸಂಖ್ಯೆ ಹಾಗೂ ನಗರ ಪ್ರದೇಶಗಳಲ್ಲಿ ಜಾಗ ಲಭ್ಯತೆಯ ಕೊರತೆ ವಿಸ್ತೀರ್ಣ ಮಿತಿ ಇಳಿಕೆಗೆ ಕಾರಣವಾಗಿದೆ. ಪ್ರಸ್ತುತ ಸರಕಾರದಿಂದ ನಿವೇಶನ ರಹಿತರಿಗೆ ಮಂಜೂರು ಆಗುವ ಜಾಗದಲ್ಲಿ ಒಂದು ಎಕರೆಯಲ್ಲಿ 40 ನಿವೇಶನಗಳನ್ನು ನೀಡಬೇಕು ಎಂಬ ನಿಯಮ ಇದೆ. ಇದರಲ್ಲಿ ಮನೆಗಳಿಗೆ ಪೂರಕವಾಗಿ ರಸ್ತೆ, ಚರಂಡಿ ಸೌಲಭ್ಯಗಳನ್ನು ನಿರ್ಮಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಕೋಶದ ನಿರ್ದೇಶಕಿ ಗಾಯತ್ರಿ ನಾಯಕ್‌ ತಿಳಿಸಿದ್ದಾರೆ.

Advertisement

ಒಂದು ಎಕರೆಯಲ್ಲಿ 40 ನಿವೇಶನಗಳು ಅಂದರೆ ಜಾಗ ಮತ್ತು ಚರಂಡಿಗೆ ಜಾಗ ಮೀಸಲಿರಿಸಿದರೆ ಮನೆ ನಿರ್ಮಾಣಕ್ಕೆ ಲಭ್ಯವಾಗುವ ಜಾಗ 1.75ರಿಂದ 2 ಸೆಂಟ್ಸ್‌ ಜಾಗ. ರಾಜೀವ್‌ ಗಾಂಧಿ ವಸತಿ ಯೋಜನೆ ಸಹಿತ ಸರಕಾರದ ವಸತಿ ಯೋಜನೆಗಳಲ್ಲಿ ಇದೀಗ ಜಿಪ್ಲಸ್‌ ಮಾದರಿಗೆ ಒತ್ತು ನೀಡಲಾಗುತ್ತಿದ್ದು, ಇಲ್ಲೂ ಮನೆ ವಿಸ್ತೀರ್ಣವನ್ನು ಇದಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ ಪ್ರಸ್ತುತ ಕೋರ್‌ ಏರಿಯಾ ಅಂದರೆ ನಗರ ಪ್ರದೇಶಗಳಲ್ಲಿ 20 x30 ಚದರ ಅಡಿ, ಬಫರ್‌ ಜಾಗದಲ್ಲಿ 30 x40 (1200 ಚದರ ಅಡಿ) ನಿವೇಶನಗಳನ್ನು ನೀಡಲಾಗುತ್ತದೆ. 94ಸಿಸಿ ಹಾಗೂ 94 ಸಿಯಲ್ಲಿ ಪ್ರಸ್ತುತ ನಿರ್ಮಿಸಿರುವ ಮನೆ ಇರುವ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಲಾಗುತ್ತದೆ ಎಂದು ಮಂಗಳೂರು ತಹಶೀಲ್ದಾರ್‌ ಗುರುಪ್ರಸಾದ್‌ ತಿಳಿಸಿದ್ದಾರೆ.

500 ಚದರ ಅಡಿಯ ಇಕ್ಕಟ್ಟು  :

500 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಾಣ ಅತ್ಯಂತ ಇಕ್ಕಟ್ಟಿನ ವಿಚಾರವಾಗಿದೆ. ಕೇವಲ ಸಣ್ಣಮನೆಯೊಂದನ್ನು ಮಾತ್ರ ಇಲ್ಲಿ ನಿರ್ಮಿಸಬಹುದಾಗಿದೆ. ಇದರಲ್ಲಿ ಶೌಚಾಲಯವೂ ಒಳಗೊಳ್ಳಬೇಕಾಗುತ್ತದೆ. ಮನೆಯ ಮುಂದೆ ಯಾವುದೇ ಜಾಗ ಇರುವುದಿಲ್ಲ.

ಇದರಲ್ಲಿ ಸಣ್ಣ ಕುಟುಂಬಕ್ಕೂ ತಕ್ಕಮಟ್ಟಿಗೂ ಜೀವಿಸುವುದು ಅತ್ಯಂತ ಕಷ್ಟ ಎಂಬುದು ಮನೆ ನಿರ್ಮಾಣ ಕೆಲಸ ನಿರ್ವಹಿಸುತ್ತಿರುವ ನಿರ್ಮಾಣಗಾರರೋರ್ವರ ಅಭಿಪ್ರಾಯ.

ಪ್ರಸ್ತುತ ನಗರ ಪ್ರದೇಶದಲ್ಲಿ ಮನೆನಿವೇಶನಗಳಿಗೆ ಸರಕಾರದ ವತಿಯಿಂದ ಮಂಜೂರು ಮಾಡುವ 1.75 ಸೆಂಟ್ಸ್‌ ಜಾಗದಲ್ಲಿ ಸಣ್ಣ ಕುಟುಂಬವೊಂದು  ಜೀವಿಸಲು ಯೋಗ್ಯವಾದ ಮನೆ ನಿರ್ಮಾಣ ಕಷ್ಟ ಸಾಧ್ಯ. ಆದುದರಿಂದ ಪ್ರಸ್ತುತ ನಡೆಯುವ ವಿಧಾನಸಭೆ ಅಧಿವೇಶನ ದಲ್ಲಿ ಸರಕಾರದ ಗಮನ ಸೆಳೆದು ಇದನ್ನು ಕನಿಷ್ಠ 2.75 ಸೆಂಟ್ಸ್‌ಗೆ  ಏರಿಕೆ ಮಾಡಬೇಕು ಎಂಬುದಾಗಿ ಆಗ್ರಹಿಸುತ್ತೇನೆ. -ಸಂಜೀವ ಮಠಂದೂರು, ಶಾಸಕರು

-ಕೇಶವ ಕುಂದರ್‌

 

Advertisement

Udayavani is now on Telegram. Click here to join our channel and stay updated with the latest news.

Next