Advertisement

ಲಾಕಪ್‌ ಡೆತ್‌ ಪ್ರಕರಣದಲ್ಲಿ ಪೇದೆಗಳ ವಿರುದ್ಧ ಎಫ್ಐಆರ್‌

11:47 AM Mar 03, 2017 | |

ಬೆಂಗಳೂರು: ಜೀವನ್‌ಭೀಮಾ ನಗರ ಪೊಲೀಸ್‌ ಠಾಣೆಯಲ್ಲಿ 2015ರ ಮಾರ್ಚ್‌ 19ರಂದು ನಡೆದಿದ್ದ ಲಾಕಪ್‌ ಡೆತ್‌ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ತನಿಖಾ ತಂಡ, ಠಾಣೆಯ ನಾಲ್ವರು ಕಾನ್‌ಸ್ಟೆಬಲ್‌ಗ‌ಳ ವಿರುದ್ಧ ಎಫ್ಐಆರ್‌ ದಾಖಲಿಸಿದೆ. 

Advertisement

ಉದ್ಯಮಿಯೊಬ್ಬರ ಮನೆಯಲ್ಲಿ ಮೂರು ಲಕ್ಷ ರೂ. ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಮಾರ್ಚ್‌ 19ರಂದು ಅಪಾರ್ಟ್‌ಮೆಂಟ್‌ ನ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ಜಾರ್ಖಾಂಡ್‌ ಮೂಲದ ಮಹೇಂದ್ರ ಎಂಬಾತನನ್ನು ಜೀವನ್‌ ಬೀಮಾನಗರದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮಹೇಂದ್ರ ಆ ದಿನ ರಾತ್ರಿ ಠಾಣೆಯ ಸೆಲ್‌ನಲ್ಲೇ ಮೃತಪಟ್ಟಿದ್ದ. ಅಂದಿನ ಪೊಲೀಸ್‌ ಆಯುಕ್ತರು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಆ ದಿನ ರಾತ್ರಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ಗ‌ಳಾದ ಏಜಾಜ್‌ ಅಹ್ಮದ್‌, ಸಿದ್ದಪ್ಪ, ಮೋಹನ್‌ ರಾಮ್‌, ಕೇಶವಮೂರ್ತಿ ವಿರುದ್ಧ ಉದ್ದೇಶಪೂರ್ವಕವಲ್ಲದ ಹತ್ಯೆಯ ಸೆಕ್ಷನ್‌ 304 ಅನ್ವಯ ಎಫ್ಐಆರ್‌ ದಾಖಲಿಸಿದೆ. ಅಲ್ಲದೆ, ಸದ್ಯದಲ್ಲೇ ಅವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಸಿಎಡಿ ಅಧಿಕಾರಿಗಳು ತಿಳಿಸಿದ್ದಾರೆ.

ಅಮಾನತು ಮಾಡಲಾಗಿತ್ತು: ಲಾಕಪ್‌ ಡೆತ್‌ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇಲೆ ಇನ್ಸ್‌ಪೆಕ್ಟರ್‌ ಹಿತೇಂದ್ರ, ಸಬ್‌ ಇನ್ಸ್‌ಪೆಕ್ಟರ್‌ ರಾಜಶೇಖರ್‌, ಕಾನ್‌ಸ್ಟೆಬಲ್‌ ಗಳಾದ ಏಜಾಜ್‌ ಅಹ್ಮದ್‌, ಸಿದ್ದಪ್ಪ, ಮೋಹನ್‌ ರಾಮ್‌, ಕೇಶವಮೂರ್ತಿ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಕಾನ್‌ಸ್ಟೆಬಲ್‌ ಗಳ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಪ್ರಕರಣದಲ್ಲಿ ಇನ್ಸ್‌ಪೆಕ್ಟರ್‌ ಮತ್ತು ಸಬ್‌ ಇನ್‌ Õಪೆಕ್ಟರ್‌ಗಳನ್ನು ಕೈ ಬಿಟ್ಟಂತಾಗಿದೆ.  

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಮಹೇಂದ್ರ ಸಾವು 
ಆರೋಪಿ ಮಹೇಂದ್ರ ಸಾವಿನ ನಿಸ್ಪಕ್ಷಪಾತ ತನಿಖೆಗೆ ಒತ್ತಡ ಹೆಚ್ಚಾಗುತ್ತಿದ್ದಂತೆ ಪ್ರಕರಣದ ತನಿಖೆ ಸಿಐಡಿ ಅಧಿಕಾರಿಗಳ ಹೆಗಲಿಗೆ ಬಿದ್ದಿತ್ತು. ಈ ಸಂಬಂಧ ತನಿಖೆ ನಡೆಸುತ್ತಿದ್ದ ಸಿಐಡಿ ತನಿಖಾ ತಂಡ , ಎರಡು ದಿನಗಳ ಹಿಂದೆ  ಮಹೇಂದ್ರ ಸಾವಿನ ಕುರಿತು ವಿಧಿವಿಜ್ಞಾನ ಪ್ರಯೋಗಾಲಯ ನೀಡಿದ ವರದಿ ಪರಿಶೀಲಿಸಿದೆ.

Advertisement

ಮಹೇಂದ್ರ “ಸಿಕಲ್‌ ಸೆಲ್‌’ ಎಂಬ ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಗೊತ್ತಾಗಿದೆ. ಪೊಲೀಸರ ವಿಚಾರಣೆ ವೇಳೆ ಮಹೇಂದ್ರ ಕುಸಿದು ಬಿದ್ದು ಮೃತಪಟ್ಟಿದ್ದ. ಈ ನಿಟ್ಟಿನಲ್ಲಿ ತನಿಖಾ ತಂಡ ಮಹೇಂದ್ರನನ್ನು ವಿಚಾರಣೆ ನಡೆಸಿದ್ದ ನಾಲ್ವರು ಕಾನ್‌ಸ್ಟೆಬಲ್‌ಗ‌ಳ ವಿರುದ್ಧ ಎಫ್ಐಆರ್‌ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next