ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ಆರೋಪದ ಅಡಿಯಲ್ಲಿ ಬಂಧಿತರಾಗಿರುವ ಮೂವರು ಪಾಕ್ ಪ್ರಜೆಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳು ಮುಂದುವರಿಸಿವೆ. ಈ ನಡುವೆ ಪಾಕ್ ಪ್ರಜೆಗಳ ಬಂಧನಕ್ಕೆ ನೆರವಾದ ಕಾರು ಕದ್ದ ಮಾಲಾಗಿದ್ದು, ಕಾರಿನ ನಿಜವಾದ ಮಾಲೀಕನ್ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ಆರೋಪಿ ಶಿಹಾಬ್‌ಗ ಟಿ.ಎ 67-ಎವೈ, 1569 ನಂಬರ್‌ನ ಸ್ವಿಪ್ಟ್ ಕಾರು ನೀಡಿದ್ದ ಸಂಬಂಧ ಕುಮಾರಸ್ವಾಮಿ ಪೊಲೀಸ್ ಠಾಣೆಯ ಪೇದೆ ಇರ್ಫಾನ್‌ನನ್ನು ಬಂಧಿಸಲಾಗಿದೆ. ಆದರೆ ಕಾರಿನ ಮಾಲೀಕತ್ವದ ಬಗ್ಗೆ ಶಿಹಾಬ್ ಮತ್ತು ಇರ್ಫಾನ್ ಇಬ್ಬರೂ ನೀಡುತ್ತಿರುವ ಹೇಳಿಕೆಗಳು ತದ್ವಿರುದ್ಧವಾಗಿವೆ.
ಆರೋಪಿಗಳು ಹೇಳುವಂತೆ ಹರಿಪ್ರಸಾದ್ ಎಂಬಾತ ಕಾರು ಪಡೆದುಕೊಂಡಿರುವುದಾಗಿ ಹೇಳುತ್ತಾರೆ. ಅದರಂತೆ ಕಾರಿನ ನಿಜವಾದ ಮಾಲೀಕತ್ವ ಪರಿಶೀಲಿಸಲು ತೆರಳಿದ್ದ ತನಿಖಾಧಿಕಾರಿಗಳಿಗೆ ತಮಿಳುನಾಡಿನ ಆರ್‌ಟಿಒ ಅಧಿಕಾರಿ ಬೇರೆಯದ್ದೇ ಮಾಹಿತಿ ನೀಡಿದ್ದಾರೆ. ಈ ನಂಬರ್‌ನ ಕಾರು ಹರಿಪ್ರಸಾದ್ ಹೆಸರಿನಲ್ಲಿರಲಿಲ್ಲ. ಬದಲಿಗೆ ಪ್ರಸನ್ನ ಎಂಬುವವರ ಹೆಸರಲ್ಲಿದೆ ಎಂದು ಹೇಳಿದ್ದಾರೆ.
ಆದರೆ ಇದೇ ನಂಬರ್‌ನ ಕಾರಿನ ಬಗ್ಗೆ ಕೇರಳ ಸಾರಿಗೆ ಇಲಾಖೆಗೆ ನೀಡಿ ಮಾಹಿತಿ ಕೇಳಿದಾಗ, ಕಾರು ಕಾರುವನೂರ್ ಜಿಲ್ಲೆಯ ಅಬ್ದುಲ್ಲಾ ಎಂ.ಪಿ ಹೆಸರಿನಲ್ಲಿ ನೋಂದಣಿಯಾಗಿರುವುದು, ಮತ್ತು ಈ ಕಾರು ಹಾಗೂ ಆರೋಪಿಗಳ ಬಳಿಯಿರುವ ಕಾರು ಒಂದೇ ಆಗಿರುವುದು ಪತ್ತೆಯಾಗಿದೆ.
ಕಳವುವಾಗಿದ್ದ ಈ ಕಾರಿಗೆ ತಮಿಳುನಾಡಿನ ನೋಂದಣಿ ಸಂಖ್ಯೆ ಅಂಟಿಸಲಾಗಿದೆ. ಆ ಕಾರನ್ನು ಪಡೆದುಕೊಂಡಿರುವ ಪೇದೆ ಇರ್ಫಾನ್, ಆರೋಪಿ ಶಿಹಾಬ್‌ಗ ಕೊಟ್ಟಿದ್ದಾನೆ . ಆದರೆ ಇರ್ಫಾನ್ ಬಳಿಗೆ ಕಾರು ಹೇಗೆ ಬಂತು ಎಂಬುದನ್ನು ಪತ್ತೆಹಚ್ಚಬೇಕಿದೆ ಎಂದು ಮೂಲಗಳು ತಿಳಿಸಿವೆ.
ಇಡೀ ಪ್ರಕರಣದಲ್ಲಿ ಶಿಹಾಬ್ ಬಳಿಯಿದ್ದ ಕಾರು ಹರಿಪ್ರಸಾದ್ ಎಂಬಾತನದ್ದು ಎಂದು ಹೇಳಲಾಗಿತ್ತು. ಆದರೆ ಹರಿಪ್ರಸಾದ್ ಎಂಬಾತನ ಹೆಸರನ್ನು ತಮಿಳುನಾಡು ಹಾಗೂ ಕೇರಳ ಆರ್‌ಟಿಓ ಅಧಿಕಾರಿಗಳು ಉಲ್ಲೇಖೀಸಿಲ್ಲ. ಹೀಗಿದ್ದರೂ ಹರಿಪ್ರಸಾದ್ ಎಂಬಾತನ ಹೆಸರು ಕಲ್ಪಿಸಿ ಕಥೆ ಹೆಣೆದಿದ್ದು ಏಕೆ ಎಂಬುದು ನಿಗೂಢವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.