Advertisement

ರಾಜಧಾನಿಯಲ್ಲಿ ರಾಮ ಸ್ಮರಣೆ

12:17 PM Apr 06, 2017 | |

ಬೆಂಗಳೂರು: ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ದಿನವಾದ ರಾಮನವಮಿಯನ್ನು ರಾಜಧಾನಿಯಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ರಾಮನವಮಿ ಪ್ರಯುಕ್ತ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ, ಪೂಜೆ ಏರ್ಪಡಿಸಲಾಗಿತ್ತು.

Advertisement

ರಾಮನವಮಿ ವಿಶೇಷವಾದ ಪಾನಕ, ಮಜ್ಜಿಗೆ, ಕೊಸುಂಬರಿ ಹಂಚಿಕೆ ಎಲ್ಲೆಡೆ ಸಾಮಾನ್ಯವಾಗಿತ್ತು. ದೇವಾಲಯಗಳಲ್ಲಷ್ಟೇ ಅಲ್ಲದೆ ನಗರದ ಬಹುತೇಕ ಬಡಾವಣೆಗಳಲ್ಲಿ ಸಂಘ-ಸಂಸ್ಥೆಗಳಿಂದ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತು. ಜತೆಗೆ  ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲೂ ರಾಮನವಮಿ ಆಚರಿಸಲಾಯಿತು.

ಚಾಮರಾಜಪೇಟೆಯ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ, ವಿಜಯನಗರ, ರಾಜಾಜಿನಗರ, ಜೆ.ಪಿ.ನಗರ, ಜಯನಗರ, ಶಂಕರಮಠ, ಎನ್‌.ಆರ್‌. ಕಾಲೋನಿ, ವಿ.ವಿ.ಪುರದಲ್ಲಿನ ರಾಮಮಂದಿರ ಸೇರಿದಂತೆ ನಗರದ ವಿವಿಧ ದೇವಸ್ಥಾನಗಳಲ್ಲಿ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಲಕ್ಷಾಂತರ ಮಂದಿ ರಾಮ ಭಕ್ತರು ಪಾಲ್ಗೊಂಡಿದ್ದರು.

ಹನುಮಂತನಗರದ ಗುಡ್ಡದ ಶ್ರೀ ರಾಮಾಂಜನೇಯ ಸ್ವಾಮಿ ದೇವಾಲಯದ ಶ್ರೀರಾಮ ಸೇವಾ ಮಂಡಳಿ ವತಿಯಿಂದ ರಾಮನವಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಮೂರು ದಿನಗಳ ರಾಮೋತ್ಸವದ ಅಂಗವಾಗಿ ಪೂಜಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸಾರ ತಂಡದಿಂದ “ಶ್ರೀಕೃಷ್ಣ ಸಂಧಾನ’ ಹಾಸ್ಯ ನಾಟಕ ಹಾಗೂ ಭಾವಗೀತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯನಗರದ ಮಾರುತಿ ಭಕ್ತ ಮಂಡಳಿ ವತಿಯಿಂದ ರಾಮನವಮಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ನಡೆದವು. ರಾಮನವಮಿ ಅಂಗವಾಗಿ ನಗರದ ಪ್ರಮುಖ ದೇವಾಲಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವೇಷಧಾರಿಗಳು ಗಮನ ಸೆಳೆದರು. 

Advertisement

ರಾಷ್ಟ್ರೀಯ ಸಂಗೀತ ಉತ್ಸವ
ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿ ಪ್ರತಿ ವರ್ಷ ರಾಮನವಮಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದು, ಈ ಬಾರಿ ಮಂಡಳಿಯ 79ನೇ ರಾಮನವಮಿ ಆಚರಣೆ ಪ್ರಯುಕ್ತ ರಾಷ್ಟ್ರೀಯ ಸಂಗೀತ ಉತ್ಸವ ಆಯೋಜಿಸಲಾಗಿದೆ. ಕೋಟೆ ಹೈಸ್ಕೂಲ್‌ ಮೈದಾನದಲ್ಲಿ ಈ ಉತ್ಸವಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬುಧವಾರ ಚಾಲನೆ ನೀಡಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ. ದತ್ತ, ಎಡಿಜಿಪಿ ಭಾಸ್ಕರ್‌ರಾವ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌ ಪಾಲ್ಗೊಂಡಿದ್ದರು.

ಮಹದೇವಪುರದಲ್ಲಿ ರಾಮ ರ್ಯಾಲಿ 
ರಾಮನವಮಿ ಪ್ರಯುಕ್ತ ಹೂಡಿಯಲ್ಲಿ ಗ್ರಾಮಸ್ಥರು ಮತ್ತು ಜನ್‌ ಸಹಯೋಗ್‌ ಸಂಘಟನೆ ಸದಸ್ಯರು ರಾಮನ ವಿಗ್ರಹವನ್ನು ಮೆರೆವಣಿಗೆ ಮಾಡಿದರು. ಅಲ್ಲದೆ, ಬೈಕ್‌ ರ್ಯಾಲಿಯನ್ನೂ ನಡೆಸಿದರು.  ಮೆರವಣಿಗೆ ಹೂಡಿ, ಹೋಪ್‌ ಫಾರ್ಮ್, ವೈಟ್‌ಫೀಲ್ಡ್‌, ವರ್ತೂರು ಕೋಡಿ, ಮಾರತ್ತಹಳ್ಳಿ, ದೊಡ್ಡನಕುಂದಿ, ಟಿನ್‌ಪಾಕ್ಟರಿ, ಕೆಆರ್‌ಪುರ ಸೇರಿದಂತೆ ಪ್ರಮುಖ ಕಡೆ ತೆರಳಿತು.  ಕೆಆರ್‌ಪುರ ಮತ್ತು ಮಹದೇವಪುರಗಳಲ್ಲೂ ಹಬ್ಬದ ಸಡಗರ ಮನೆ ಮಾಡಿತ್ತು. ರಸ್ತೆ ಬದಿಯಲ್ಲಿ ಅರವಟಿಕೆಗಳನ್ನು ತೆರದು ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಮತ್ತು ಕೋಸುಂಬರಿ ವಿತರಿಸಲಾಯಿತು. ರಾಮ ಮತ್ತು ಹನುಮನ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next