Advertisement

ಹಳೆ ನೋಟಿಂದ ಫೈಲ್‌ ರೆಡಿ

08:45 AM Jan 08, 2018 | Karthik A |

ಚೆನ್ನೈ: ನೋಟು ಅಪಮೌಲ್ಯದಿಂದ ಕಪ್ಪುಹಣ ಹೊಂದಿರುವವರ ಜೀವನ ಸಂಕಷ್ಟಕ್ಕೀಡಾಗಿತ್ತು. ಆದರೆ ಕೆಲವು ಅಪರಾಧಿಗಳು ಇದರಲ್ಲೂ ಜೀವನ ನಿರ್ವಹಣೆಯನ್ನು ಕಲಿತಿದ್ದಾರೆ! ತಮಿಳುನಾಡಿನ ಪುಳಲ್‌ ಕೇಂದ್ರೀಯ ಜೈಲಿನಲ್ಲಿ ಕೈದಿಗಳು ಅಪಮೌಲ್ಯಗೊಂಡ ನೋಟುಗಳನ್ನು ಬಳಸಿ ಸ್ಟೇಷನರಿ ತಯಾರಿಸಿದ್ದಾರೆ.

Advertisement

ಆರ್‌ಬಿಐ ಈ ಜೈಲಿಗೆ ಸುಮಾರು 70 ಟನ್‌ ರದ್ದಾದ ನೋಟುಗಳನ್ನು ಕಳುಹಿಸುವುದಾಗಿ ಹೇಳಿತ್ತು. ಈ ಪೈಕಿ ಸದ್ಯ ಒಂಬತ್ತು ಟನ್‌ಗಳಷ್ಟನ್ನೇ ಜೈಲು ಅಧಿಕಾರಿಗಳು ಸ್ವೀಕರಿಸಿದ್ದಾರೆ. ಇದನ್ನೇ ಬಳಸಿಕೊಂಡ ಸುಮಾರು 25-30 ಕೈದಿಗಳು ಫೈಲ್‌ ಪ್ಯಾಡ್‌ಗಳನ್ನು ನಿರ್ಮಿಸಿದ್ದಾರೆ. ಇದನ್ನು ರಾಜ್ಯ ಸರಕಾರದ ಇಲಾಖೆಗಳು ಮತ್ತು ಇತರ ಕಚೇರಿಗಳಲ್ಲಿ ಬಳಸುವುದಕ್ಕೆ ನೀಡಲಾಗಿದೆ. ದಿನವೊಂದಕ್ಕೆ ಸುಮಾರು 1 ಸಾವಿರ ಫೈಲ್‌ ಪ್ಯಾಡ್‌ಗಳನ್ನು ತಯಾರಿಸಲಾಗುತ್ತಿದೆ. ಇದನ್ನು ಕೊಳೆಸಿ, ಮೋಲ್ಡ್‌ಗೆ ಹಾಕಿ ಗಟ್ಟಿ ಮಾಡಲಾಗುತ್ತದೆ. ಅನಂತರ ಪ್ಯಾಡ್‌ಗಳನ್ನಾಗಿ ಕತ್ತರಿಸಲಾಗುತ್ತದೆ. ಇಡೀ ಪ್ರಕ್ರಿಯೆಯಲ್ಲಿ ಯಂತ್ರಗಳ ಬಳಕೆ ಅತ್ಯಂತ ಕಡಿಮೆ.

ಸರಕಾರಿ ಕಚೇರಿಗಳಲ್ಲಿ ಕಡತಗಳ ಮೇಲ್ಭಾಗದಲ್ಲಿ ದಪ್ಪನೆಯ ಮುಚ್ಚಳದ ರೀತಿ ಇದನ್ನು ಬಳಸಲಾಗುತ್ತದೆ. ಇದರ ಮೇಲೆ ಕಡತದ ಸಂಕ್ಷಿಪ್ತ ವಿವರ ಇರುತ್ತದೆ. ಎರಡು ಪ್ಯಾಡ್‌ಗಳನ್ನು ಜೋಡಿಸಲು ಬಟ್ಟೆಯ ತುಂಡನ್ನು ಬಳಸಲಾಗುತ್ತದೆ. ಈ ಪ್ಯಾಡ್‌ಗಳನ್ನು ತಯಾರಿಸುವ ಕೈದಿಗಳಿಗೆ 160 ರಿಂದ 200 ರೂ. ಕೂಲಿ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next