ಬೀಜಿಂಗ್: ದಕ್ಷಿಣ ಚೀನ ಸಮುದ್ರದಲ್ಲಿ ಚೀನ ಅತಿಕ್ರಮಣ ಮುಂದುವರಿಸಿರುವ ಬಗ್ಗೆ ಹೊಸ ಉಪಗ್ರಹ ಚಿತ್ರಗಳು ಸಾಕ್ಷ್ಯ ನುಡಿದಿವೆ.
ಜಾಗತಿಕ ವ್ಯಾಪಾರಕ್ಕೆ ಮಹತ್ವವಾಗಿರುವ ದಕ್ಷಿಣ ಚೀನ ಸಮುದ್ರದ ವಿವಾದಿತ ಪ್ರದೇಶದಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿ ಅನೇಕ ಕಾಮಗಾರಿಗಳನ್ನು ಚೀನಾ ನಡೆಸುತ್ತಿದೆ.
ಹೊಸದಾಗಿ ಬಿಡುಗಡೆಯಾಗಿರುವ ಉಪಗ್ರಹ ಚಿತ್ರದಲ್ಲಿ, ದಕ್ಷಿಣ ಚೀನ ಸಮುದ್ರದ ಮಾನವ ನಿರ್ಮಿತ ದ್ವೀಪದಲ್ಲಿ ಚೀನ ಯುದ್ಧ ಹಡಗೊಂದು ಭೂಸುಧಾರಣಾ ಯೋಜನೆಗಳಲ್ಲಿ ಬಳಸುವ ಹೈಡ್ರಾಲಿಕ್ ಅಗೆಯುವ ಯಂತ್ರವನ್ನು ಇಳಿಸುತ್ತಿರುವುದು ಕಂಡುಬಂದಿದೆ. ಕಳೆದ ವರ್ಷ ಈ ಪ್ರದೇಶದಲ್ಲಿ ಮಾನವ ನಿರ್ಮಿತ ದ್ವೀಪವು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಚೀನ ಸಮುದ್ರದ ಹಕ್ಕುಸ್ವಾಮ್ಯದ ಕುರಿತು ಚೀನ ಹಾಗೂ ಫಿಲಿಫೀನ್ಸ್, ತೈವಾನ್, ಮಲೇಷ್ಯಾ, ಇಂಡೋನೇಷ್ಯಾ, ವಿಯೆಟ್ನಾಂ, ಬ್ರೂನೈ ನಡುವೆ ಅನೇಕ ವರ್ಷಗಳಿಂದ ವಾಗ್ವಾದ ಹೆಚ್ಚುತ್ತಿದೆ.
ಈ ಹಿಂದೆ ಈ ಪ್ರದೇಶದಲ್ಲಿ ಚೀನ, ಮಿಲಿಟರಿ ಬಳಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಂದರುಗಳು, ರನ್‌ವೇಗಳನ್ನು ಹಾಗೂ ಇತರೆ ಸೌಕರ್ಯಗಳನ್ನು ನಿರ್ಮಿಸಲು ಬಂಡೆಗಳು, ದ್ವೀಪಗಳು ಮತ್ತು ಇತರೆ ಮಾನವ ನಿರ್ಮಿತ ಭೂಪ್ರದೇಶಗಳನ್ನು ನಿರ್ಮಿಸಿತ್ತು.
ಕಳೆದ ಒಂದು ದಶಕದಲ್ಲಿ ಚೀನದ ನೌಕಾ ಪಡೆಯು ಜನವಸತಿ ಇಲ್ಲದ ಈ ದ್ವೀಪಗಳ ನಾಲ್ಕು ಸ್ಥಳಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.