ನವದೆಹಲಿ: ಯುಪಿಎ ಅವಧಿಯಲ್ಲಿ(2016ಕ್ಕೂ ಮೊದಲು) ಭಾರತೀಯ ಸೇನಾಪಡೆ ಯಾವುದೇ ಸರ್ಜಿಕಲ್ ದಾಳಿ ನಡೆಸಿದ ಬಗ್ಗೆ ಮಾಹಿತಿ ಇಲ್ಲ ಎಂದು ಜಮ್ಮು ಮೂಲದ ಆರ್ ಟಿಐ ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಕ್ಷಣಾ ಸಚಿವಾಲಯ ಈ ಉತ್ತರ ನೀಡಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಸರ್ಕಾರ ಆರು ಬಾರಿ ಸರ್ಜಿಕಲ್ ದಾಳಿ ನಡೆಸಿರುವುದಾಗಿ ಇತ್ತೀಚೆಗೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅಲ್ಲದೇ ಯುಪಿಎ ಅವಧಿಯಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯನ್ನು ಯಾವತ್ತೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ ಎಂದು ಕಾಂಗ್ರೆಸ್ ಹೇಳಿತ್ತು.
ಸರ್ಜಿಕಲ್ ದಾಳಿ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ವಾಕ್ಸಮರ ನಡೆಯುತ್ತಿರುವ ನಡುವೆಯೇ, ಆರ್ ಟಿಐ ಕಾರ್ಯಕರ್ತರು ಕೇಳಿದ ಪ್ರಶ್ನೆಗೆ ರಕ್ಷಣಾ ಸಚಿವಾಲಯ ಉತ್ತರ ನೀಡಿದೆ.
2004ರಿಂದ 2014ರ ನಡುವೆ ನಡೆದ ಸರ್ಜಿಕಲ್ ದಾಳಿ ಕುರಿತ ಮಾಹಿತಿ ನೀಡುವಂತೆ ಜಮ್ಮು ಮೂಲದ ಆರ್ ಟಿಐ ಕಾರ್ಯಕರ್ತ ರೋಹಿತ್ ಚೌಧರಿ ಅರ್ಜಿ ಸಲ್ಲಿಸಿದ್ದರು. 2016ರ ಸೆಪ್ಟೆಂಬರ್ 29ರಂದು ಭಾರತೀಯ ಸೇನಾಪಡೆ ಗಡಿ ನಿಯಂತ್ರಣ ರೇಖೆಯಲ್ಲಿ ದಾಳಿಯನ್ನು ನಡೆಸಿತ್ತು. ಅದನ್ನು ಹೊರತು ಪಡಿಸಿ 2016ಕ್ಕೂ ಮೊದಲು ಯಾವುದೇ ಸರ್ಜಿಕಲ್ ಸ್ಟ್ರೈಕ್ ನಡೆಸಿಲ್ಲ ಎಂದು ತಿಳಿಸಿದೆ.