Advertisement

ಜನರಿಗೆ ಅರಿವು ಮೂಡಿಸಿ ಸಮಸ್ಯೆಗಳಿಗೆ ಸ್ಪಂದಿಸಿ

03:18 PM Feb 24, 2017 | Team Udayavani |

ಜೇವರ್ಗಿ: ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿ ಆರೋಗ್ಯದ ಕುರಿತು ಜನರಿಗೆ ಅರಿವು ಮೂಡಿಸುವುದರ ಮೂಲಕ ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಧಿಸಬೇಕು ಎಂದು ಯುವ ರೆಡ್‌ಕ್ರಾಸ್‌ ಘಟಕದ ಸಂಚಾಲಕ ಡಾ| ವಿಷ್ಣುವರ್ಧನ ಮೂಲಿಮನಿ ಕರೆ ನೀಡಿದರು. 

Advertisement

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಬರ್ಡ್ಸ್‌ ಹಿಲ್‌ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ತಾಲೂಕಿನಲ್ಲಿರುವ ಆರೋಗ್ಯ ಸಮಸ್ಯೆಗಳು, ಪರಿಹಾರ ಹಾಗೂ ಸೌಲಭ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ತಾಲೂಕಿನಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಜನರಿಗೆ ಆರೋಗ್ಯ ಮತ್ತು ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚಾಗಿ ಕಂಡು ಬರುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಗ್ರಾಮದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಹುಡುಕಬೇಕು. 

ಡಾ| ನಂಜುಂಡಪ್ಪ ವರದಿ ಪ್ರಕಾರ ಜೇವರ್ಗಿ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಹೊಂದಿದೆ. ಇದನ್ನು ಹೋಗಲಾಡಿಸಲು ತಾಲೂಕಿನಲ್ಲಿರುವ ಸಂಘ-ಸಂಸ್ಥೆಗಳು, ರಾಜಕೀಯ ಮುಖಂಡರು ಶ್ರಮಿಸಬೇಕು. ಹಿಂದುಳಿದ ತಾಲೂಕು ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಅಳಿಸಬೇಕು.

ಉನ್ನತವಾದ ಹುದ್ದೆಗಳನ್ನು ಹೊಂದುವುದರ ಮೂಲಕ ವಿದ್ಯಾರ್ಥಿಗಳು ತಾಲೂಕಿಗೆ ಕೊಡುಗೆ ನೀಡಬೇಕು. ತಾಲೂಕಿನಲ್ಲಿ ಅನೇಕ ಸಂಘ-ಸಂಸ್ಥೆಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿವೆ. ಕೆಲ್ಲೂರಿನ ಬರ್ಡ್ಸ್‌ ಹಿಲ್‌ ಸಂಸ್ಥೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಶಿಬಿರ, ಬಡವರಿಗೆ ಮನೆ ನಿರ್ಮಾಣದಂತಹ ಅನೇಕ ಸಾಮಾಜಿಕ ಕಾರ್ಯ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

Advertisement

ಕೆಲ್ಲೂರಿನ ಬರ್ಡ್ಸ್‌ ಹೀಲ್‌ ಸಂಸ್ಥೆ ನಿರ್ದೇಶಕ ಬ್ರದರ್‌ ವಿನ್ಸಂಟ್‌ ಪಾಲ್‌ ಮಾತನಾಡಿ, ತಾಲೂಕಿನಲ್ಲಿ ಕೆಲವು ಗ್ರಾಮಗಳಲ್ಲಿ ಫ್ಲೋರೈಡ್‌ ಯುಕ್ತ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಇದರಿಂದ ಜನರಲ್ಲಿ ಕೀಲು ನೋವಿನ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು.

ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿಕೊಡಬೇಕು. ತಾಲೂಕಿನ ಸಾಮಾಜಿಕ ಸಮಸ್ಯೆಗಳಿಗೆ ಸಂಸ್ಥೆ ಸದಾ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಪ್ರವಾಹ ಪೀಡಿತ ಹಂಗರಗಾ(ಕೆ) ಗ್ರಾಮಗಳ ಜನರಿಗೆ 26 ಮನೆ ನಿರ್ಮಿಸಿ ಮಾನವೀಯತೆ ಮೆರೆದಿದೆ. ಅಲ್ಲದೆ ಅಂಗವಿಕಲರಿಗೆ ತ್ರಿಚಕ್ರ ವಾಹನ ಸೇರಿದಂತೆ ಎಚ್‌ಐವಿ, ಟಿಬಿ, ಅಂಗವಿಕಲ ಮಕ್ಕಳಿಗೆ ಉಚಿತ ವೈದ್ಯಕಿಯ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಾಂಶುಪಾಲ ಡಾ| ಮಹಾದೇವ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ| ವಿನಾಯಕ ಜಿ.ಕೆ., ಡಾ| ಶರಣಮ್ಮ ಆವಂಟಿ, ಡಾ| ಗೀತಾರಾಣಿ, ನಾಗರಡ್ಡಿ, ಡಾ| ಕರಿಗೋಳೆಶ್ವರ, ವಿನೋದಕುಮಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಡಾ| ಗಿರೀಶ ರಾಠೊಡ ಸ್ವಾಗತಿಸಿದರು, ಗುರುಪ್ರಕಾಶ ಹೂಗಾರ ನಿರೂಪಿಸಿದರು. ಶಶಿಧರ ಯಡ್ರಾಮಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next