ಮಿಜಾರು: ಡಿಜಿಟಲ್ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡು ಅದನ್ನು ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಐಟಿಸಿ ಇನ್‌ಫೂಟೆಕ್ ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆನಂದ್ ತಲ್ವಾರ್ ಹೇಳಿದರು.
ಅವರು ಶನಿವಾರ ಮೂಡಬಿದಿರೆಯ ಬಡಗ ಮಿಜಾರ್‌ನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಎಂಜಿನಿಯರಿಂಗ್ (ಮೈಟ್)ನ ವಾರ್ಷಿಕ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು.
ಬದಲಾದ ಪರಿಸ್ಥಿತಿಯಲ್ಲಿ ತಂತ್ರಜ್ಞಾನ ಮತ್ತು ವ್ಯವಹಾರ ಜತೆಯಾಗಿ ಹೋಗಬೇಕಾಗಿದೆ. ಡಿಜಿಟಲ್ ತಂತ್ರಜ್ಞಾನವು ಈ ದಿಶೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡಿಜಿಟಲ್ ಕ್ರಾಂತಿಗೆ ವಿದ್ಯಾರ್ಥಿಗಳು ಒಗ್ಗಿ ಕೊಳ್ಳುವುದು ಅವಶ್ಯ ಎಂದವರು ಹೇಳಿದರು.
ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಕಳೆದ 10 ವರ್ಷಗಳ ಅವಧಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಲವಾರು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದು, ಈ ಮೂಲಕ ಸಂಸ್ಥೆಯು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ. ಮುಂದಿನ ವರ್ಷಗಳಲ್ಲಿ ಸಂಶೋಧನೆ ಮತ್ತು ಪೇಟೆಂಟ್‌ಗೆ ಆದ್ಯತೆ ನೀಡಲಾಗುವುದು ಎಂದವರು ಹೇಳಿದರು. ಹಳೆ ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಿದ್ದು, ಅವರು ಅಧಿಕ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಜಿ.ಎಲ್. ಈಶ್ವರ ಪ್ರಸಾದ್ ಅವರು 2016- 17ನೇ ಸಾಲಿನ ವರದಿಯನ್ನು ಮಂಡಿಸಿದರು. ಉಪ ಪ್ರಾಂಶುಪಾಲ ಡಾ| ಸಿ.ಆರ್. ರಾಜಶೇಖರ್ ಸ್ವಾಗತಿಸಿ ಸಿಎಸ್‌ಇ ವಿಭಾಗದ ಮುಖ್ಯಸ್ಥ ಡಾ| ನಾಗೇಶ್ ಎಚ್.ಆರ್. ವಂದಿಸಿದರು.
ಮೈಟ್‌ನ ಸಲಹೆಗಾರ ಪ್ರೊ| ಜಿ.ಆರ್. ರೈ, ರಾಜಲಕ್ಷ್ಮೀ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷೆ ಸವಿತಾ ಚೌಟ ಉಪಸ್ಥಿತರಿದ್ದರು. ಆಯೆಶಾ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃ ತಿಕ ಕಾರ್ಯಕ್ರಮಗಳನ್ನು ಫಝಿಲಾ ಮತ್ತು ಅನಿಶಾ ಅವರು ನಿರ್ವಹಿಸಿದರು.