Advertisement
ವೈದ್ಯರೇ ಹೇಳುವ ಪ್ರಕಾರ ಸೋಂಕು ವೇಗದಲ್ಲಿ ಹರಡುತ್ತಿದೆಯಾದರೂ ತೀವ್ರತೆ ಅಷ್ಟಾಗಿಲ್ಲ. ಜಿಲ್ಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ನಿತ್ಯ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟುತ್ತಿದೆ. ಜಿಲ್ಲೆಯಲ್ಲಿ ಈಗ ಕೇವಲ 15 ಜನ ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ, 30 ಜನ ಖಾಸಗಿ ಹೋಟೆಲ್, ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಉಳಿದಂತೆ 1055 ಸೋಂಕಿತರು ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.
Related Articles
Advertisement
ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಸಾಕಷ್ಟು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ಮಕ್ಕಳ ಘಟಕ ಸಿದ್ಧಪಡಿಸಲಾಗಿತ್ತು. ಸುಮಾರು 150 ಬೆಡ್‌ಗಳು, 60 ಐಸಿಯು ಬೆಡ್ ಸಿದ್ಧಪಡಿಸಿದ್ದರೆ, ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಸಂಸ್ಥೆಯವರು ಕೂಡ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ 20 ಬೆಡ್ ದೇಣಿಯಾಗಿ ನೀಡಿತ್ತು. ಆದರೆ, ಮೂರನೇ ಅಲೆಯಲ್ಲಿ ಮಕ್ಕಳಲ್ಲಿ ಅಂಥ ಲಕ್ಷಣಗಳು ಕಂಡು ಬಂದಿಲ್ಲ. ಬದಲಿಗೆ ಎಲ್ಲ ವರ್ಗದ ಜನರಲ್ಲಿಯೇ ಜ್ವರ, ನೆಗಡಿ, ಕೆಮ್ಮು, ಮೈ-ಕೈ ನೋವಿನಂತ ಲಕ್ಷಣಗಳು ಕಂಡು ಬರುತ್ತಿದ್ದು, ಪರೀಕ್ಷೆಗೆ ಒಳಪಟ್ಟಾಗ ಪಾಸಿಟಿವ್ ವರದಿ ಬರುತ್ತಿವೆ. ಅನೇಕರು ಒಂದು ವಾರ ಮನೆಯಲ್ಲಿ ಐಸೊಲೇಶನ್‌ಗೆ ಒಳಗಾಗಿ ಗುಣಮುಖರಾಗುತ್ತಿದ್ದಾರೆ. ಆದರೂ ಜಿಲ್ಲಾಡಳಿತ ತನ್ನ ಎಚ್ಚರಿಕೆಯಲ್ಲಿ ತಾನಿದ್ದು, ಸುಮಾರು 4708 ಬೆಡ್‌ಗಳ ಸಿದ್ಧತೆ ಮಾಡಿಕೊಂಡಿದೆ.
ರಿಮ್ಸ್‌ನಲ್ಲಿ 620 ಸಾಮಾನ್ಯ ಬೆಡ್, 75 ಐಸಿಯು, 75 ವೆಂಟಿಲೇಟರ್ ಬೆಡ್ ಗಳ ವ್ಯವಸ್ಥೆ ಮಾಡಿದ್ದರೆ, ಒಪೆಕ್‌ನಲ್ಲಿ 300 ಸಾಮಾನ್ಯ, 10 ಐಸಿಯು, 10 ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ನವೋದಯ ಮೆಡಿಕಲ್ ಕಾಲೇಜಿನಲ್ಲಿ 835 ಸಾಮಾನ್ಯ ಬೆಡ್, 114 ಐಸಿಯು ಹಾಗೂ 14 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ 84 ಖಾಸಗಿ ಆಸ್ಪತ್ರೆಗಳಲ್ಲಿ 2373 ಸಾಮಾನ್ಯ ಬೆಡ್‌ಗಳಿದ್ದರೆ, 408 ಐಸಿಯು, 26 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ತಾಲೂಕು ಆಸ್ಪತ್ರೆಗಳಲ್ಲಿ ತಲಾ 100ರಂತೆ 400 ಸಾಮಾನ್ಯ ಬೆಡ್‌ಗಳು, 24 ಐಸಿಯು ಹಾಗೂ 20 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಆರು ಸಮದಾಯ ಆರೋಗ್ಯ ಕೇಂದ್ರಗಳಲ್ಲಿ 180 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಈಗ ಯಾವುದೇ ಬೆಡ್‌ಗಳ ಅನಿವಾರ್ಯತೆ ಅಷ್ಟಾಗಿ ಬಂದಿಲ್ಲ. ಹೋಂ ಐಸೋಲೇಷನ್ ಹಾಗೂ ಕಾಂಟಾಕ್ಟ್ ಟ್ರೇಸಿಂಗ್ ತಂಡಗಳು ಮಾತ್ರ ಸಕ್ರಿಯವಾಗಿ ಕೆಲಸ ಮಾಡುತ್ತಿವೆ.
ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ಒಳಪಟ್ಟ ಬಹುತೇಕರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಲಕ್ಷಣಗಳು ಇದ್ದಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸುತ್ತಿದ್ದೇವೆ. ಪ್ರತಿ ತಾಲೂಕು ಕೇಂದ್ರದಲ್ಲಿ ವಾರ್ ರೂಂ ಮಾಡಲಾಗಿದೆ. ಐಸೋಲೇಷನ್ ತಂಡದವರು ನಿತ್ಯ ಸೋಂಕಿತರಿಗೆ ಕರೆ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸುತ್ತಿದ್ದಾರೆ. ಯಾವುದೇ ಲಕ್ಷಣಗಳು ಇಲ್ಲದವರಿಗೆ ಬಿ ಕಾಂಪ್ಲೆಕ್ಸ್, ವಿಟಮಿನ್ ಸಿ ಮಾತ್ರೆ ನೀಡಲಾಗುತ್ತಿದೆ. ನಗರ ಭಾಗದಲ್ಲಿ ಸೋಂಕು ಹೆಚ್ಚಾಗಿದ್ದರಿಂದ ಪ್ರತಿ ಆರೋಗ್ಯ ಕೇಂದ್ರಕ್ಕೆ 2 ತಂಡ ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಅಗತ್ಯವಿದ್ದಲ್ಲಿ ತಂಡ ರಚಿಸಲಾಗುತ್ತಿದೆ. -ಡಾ| ನಾಗರಾಜ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ