ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ಇಡೀ ತಿಂಗಳು ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರ ಮಾತ್ರ ಪ್ರದರ್ಶಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ನ.1ರಂದು ಪುರಭವನದಿಂದ ಸ್ವಾತಂತ್ರ ಉದ್ಯಾನದವರೆಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದೆ.
ವರ್ಷದ ಎಲ್ಲ ದಿನಗಳಲ್ಲೂ ಚಿತ್ರಮಂದಿರಗಳಲ್ಲಿ ಹಾಗೂ ಮಾಲ್‌ಗಳಲ್ಲಿ ಕನ್ನಡ ಚಲನಚಿತ್ರಗಳಿಗಿಂತ ಪರಭಾಷಾ ಚಿತ್ರಗಳೇ ಹೆಚ್ಚು ಪ್ರದರ್ಶನಗೊಳ್ಳುತ್ತವೆ. ನವೆಂಬರ್ ಕನ್ನಡಿಗರ ನಾಡಹಬ್ಬ ಆಚರಣೆ ಮಾಸವಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ತಿಂಗಳು ರಾಜ್ಯದ ಎಲ್ಲ ಚಿತ್ರಮಂಂದಿರಗಳು ಹಾಗೂ ಮಾಲ್‌ಗಳು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮೀಸಲಿಡಬೇಕು. ಈ ಮೂಲಕ ಗೌರವ ಸಲ್ಲಿಸಬೇಕು ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಚ್.ಬಿ. ನಟರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಬಂಧ ಈಗಾಗಲೇ ರಾಜ್ಯದ ಎಲ್ಲ ಚಿತ್ರಮಂದಿರಗಳ ಮಾಲೀಕರೊಂದಿಗೆ ಹಾಗೂ ಮಾಲ್‌ಗಳ ಮುಖ್ಯಸ್ಥರಿಗೆ ಒಕ್ಕೂಟದಿಂದ ಮನವಿ ಮಾಡಲಾಗಿದೆ ಎಂದ ಅವರು, ನಾಮಫಲಕಗಳಲ್ಲೂ ಶೇ. 60ರಷ್ಟು ಕನ್ನಡ ಇರಬೇಕು. ಈ ಬಗ್ಗೆ ಕರ್ನಾಟಕ ವಾಣಿಜ್ಯ ಮಂಡಳಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಒಂದು ವೇಳೆ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಪರಭಾಷೆಯ ಚಿತ್ರಗಳು ಹೆಚ್ಚಾಗಿ ಪ್ರದರ್ಶನಗೊಂಡರೆ ಮಸಿ ಬಳಿಯಲಾಗುವುದು. ಇಡೀ ರಾಜ್ಯದ ಚಲನಚಿತ್ರಮಂದಿರಗಳಲ್ಲಿ ಯಾವ ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ ಎಂದು ತಿಳಿದುಕೊಳ್ಳಲು ಒಕ್ಕೂಟದ ಕಾರ್ಯಕರ್ತರು ಚಲನಚಿತ್ರಮಂದಿಗರಳಲ್ಲಿ ಕಾವಲು ಕಾಯಲಿದ್ದಾರೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ನಾಡಿನ ನೆಲ, ಜಲ ಹಾಗೂ ಇಲ್ಲಿನ ಸಂಪತ್ತು ಬಳಸಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅವರಾರಿಗೂ ಕನ್ನಡಿಗರು ಯಾವುದೇ ತೊಂದರೆ ನೀಡುತ್ತಿಲ್ಲ. ಆದರೆ, ಪ್ರತಿ ಬಾರಿ ಅವರಿಂದ ಕನ್ನಡಿಗರು ತೊಂದರೆ ಅನುಭವಿಸುತ್ತಿದ್ದಾರೆ. ಇದು ನಿಲ್ಲಬೇಕು. ಅನ್ಯ ಭಾಷಿಕರು ಈ ನೆಲದಲ್ಲಿ ಜೀವಿಸುವಾಗ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ತೊಂದರೆ ನೀಡಬಾರದು. ಇಲ್ಲಿನ ಸಂಸ್ಕೃತಿ, ಭಾಷೆಯನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.