ಭೋಪಾಲ್: 2020ರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ವೆಬ್ ಸರಣಿ “ಪಂಚಾಯತ್” ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಚಿತ್ರೀಕರಿಸಲಾಗಿತ್ತು. ಈ ವೆಬ್ ಸರಣಿಯ ಕಥೆ ಕೆಲವು ಗ್ರಾಮಗಳಲ್ಲಿ ನಿಜ ಜೀವನದಲ್ಲಿಯೂ ನಡೆಯುತ್ತಿದ್ದು, ಅದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ!
ಇದನ್ನೂ ಓದಿ:ಉತ್ತರ ಪ್ರದೇಶದ ಮಹಿಳೆಯರಿಗೆ ರಕ್ಷಾ ಬಂಧನ ಗಿಫ್ಟ್ ನೀಡಿದ ಸಿಎಂ ಯೋಗಿ ಆದಿತ್ಯನಾಥ್
ಮಹಿಳಾ ಜನಪ್ರತಿನಿಧಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದರು ಕೂಡಾ ಅಧಿಕಾರವನ್ನು ಮಾತ್ರ ಪುರುಷರು ಚಲಾಯಿಸುತ್ತಿರುವ ಕಥೆ ಈ ವೆಬ್ ಸರಣಿಯದ್ದಾಗಿತ್ತು. ಅದೇ ರೀತಿ ಮಧ್ಯಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಮಹಿಳೆಯರು ಗೆದ್ದಿದ್ದರು ಕೂಡಾ ಅದರಲ್ಲಿ ಕೆಲವರು ಪತಿ ಪ್ರಮಾಣವಚನ ಸ್ವೀಕರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಜೈಸಿನಗರ್ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಸರ್ ಪಂಚ್ ಸೇರಿದಂತೆ 21 ಮಂದಿ ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದರು. ಇವರಲ್ಲಿ 10 ಮಹಿಳಾ ಸದಸ್ಯರಾಗಿದ್ದಾರೆ.
ಇದೀಗ ಪ್ರಮಾಣವಚನ ಸ್ವೀಕಾರದ ವಿಡಿಯೋ ವೈರಲ್ ಆಗಿದ್ದು, ಹತ್ತು ಮಂದಿ ಮಹಿಳಾ ಸದಸ್ಯರಲ್ಲಿ ಕೇವಲ ಮೂವರು ಮಹಿಳೆಯರು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದು, ಇನ್ನುಳಿದ ಏಳು ಮಹಿಳಾ ಸದಸ್ಯರ ಬದಲು ಅವರ ಪತಿ ಪ್ರಮಾಣವಚನ ಸ್ವೀಕರಿಸಿರುವುದು ವಿವಾದಕ್ಕೀಡಾಗಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಪತ್ರಕರ್ತರು ಜೈಸಿನಗರ್ ಗ್ರಾಮಪಂಚಾಯತ್ ಕಾರ್ಯದರ್ಶಿ ಆಶಾ ರಾಮ್ ಸಾಹು ಅವರನ್ನು ಪ್ರಶ್ನಿಸಿದಾಗ, ಪತ್ನಿಯರ ಬದಲು ಪತಿ ಪ್ರಮಾಣವಚನ ಸ್ವೀಕರಿಸಿರುವುದನ್ನು ಸಮರ್ಥಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಮಹಿಳೆಯರು ಆಯ್ಕೆಯಾಗುವ ಗ್ರಾಮ ಪಂಚಾಯ್ತಿಗಳಿಗೆ ಮಾತ್ರ 15 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದ ಎರಡು ತಿಂಗಳ ಬಳಿಕ ಪತ್ನಿ ಬದಲು ಪತಿ ಪ್ರಮಾಣವಚನ ಸ್ವೀಕರಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.