Advertisement
ಚಾಮರಾಜಪೇಟೆಯಲ್ಲಿ ರಾಜಸ್ಥಾನ ಮೂಲದ ಅಮಾಯಕನನ್ನು ಹಿಡಿದು ಕೊಲೆಗೈದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೆಲವೆಡೆ ಗಡ್ಡ ಮೀಸೆ ಬಿಟ್ಟು ಓಡಾಡುವ ಕೂಲಿ ಕಾರ್ಮಿಕರು, ಭಿಕ್ಷುಕರನ್ನು, ಹರಿದ ಬಟ್ಟೆ ಧರಿಸಿ ಓಡಾಡುವ ಮಹಿಳೆಯರನ್ನು ಸಾರ್ವಜನಿಕರು ಕೂಡಲೇ ಹಿಡಿದು ಪೊಲೀಸರಿಗೊಪ್ಪಿಸುತ್ತಿದ್ದಾರೆ. ಅಲ್ಲದೆ, ಅಲ್ಲಲ್ಲಿ ನೂರಾರು ಮಂದಿ ಸೇರಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ.
Related Articles
Advertisement
ಗುರುವಾರ ಮಧ್ಯಾಹ್ನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ವಿಜಯನಗರ ಗುಟ್ಟೆಯಲ್ಲಿ 3 ಜನ ಹೆಣ್ಣು ಮಕ್ಕಳನ್ನು ಸಾರ್ವಜನಿಕರು ಕೂಡಿ ಹಾಕಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯರನ್ನು ರಕ್ಷಿಸಿದ್ದಾರೆ. ಮಹಿಳೆಯರು ಹೂಡಿಯವರಾಗಿದ್ದು, ಹೌಸ್ ಕೀಪಿಂಗ್ ಕೆಲಸ ಮಾಡುತ್ತಾರೆ. ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಶಿವಾಜಿನಗರದಲ್ಲಿ ಉತ್ತರ ಭಾರತ ಮೂಲದ 26 ವರ್ಷದ ಕೂಲಿ ಕಾರ್ಮಿಕನನ್ನು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಗಾಯಗೊಂಡಿದ್ದ ಈತನನ್ನು ಪೊಲೀಸರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆತನನ್ನು ವಿಚಾರಿಸಿದಾಗ ಕೂಲಿ ಕೆಲಸ ಮುಗಿಸಿಕೊಂಡು ದಂಡು ರೈಲ್ವೆ ನಿಲ್ದಾಣ ಮಾರ್ಗದಲ್ಲಿ ನಡೆದು ಬರುತ್ತಿದ್ದು, ಏಕಾಏಕಿ ನಾಲ್ಕೈದು ಮಂದಿ ಮಕ್ಕಳ ಕಳ್ಳ ಎಂದು ಥಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಪುಲಿಕೇಶಿನಗರದ ಫ್ರೆಜರ್‌ಟೌನ್‌ನಲ್ಲಿ ನೇಪಾಳ ಮೂಲದ ದಂಪತಿ ಹಾಗೂ ಯುವತಿಯೊಬ್ಬರ ಮೇಲೆ ಇದೇ ಕಾರಣಕ್ಕೆ ಸಾರ್ವಜನಿಕರು ಹಲ್ಲೆ ನಡೆಸಿದ್ದರು. ಕೂಡಲೇ ಹೊಯ್ಸಳ ಪೊಲೀಸರು ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾರತೀನಗರದಲ್ಲಿ ಕೂಲಿ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದ ನಾಲ್ವರ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿದ್ದು, ಪ್ರಕರಣ ದಾಖಲಾಗಿದೆ.
ಕಾಟನ್‌ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇಬ್ಬರು ಯುವಕರನ್ನು ಮಕ್ಕಳ ಕಳ್ಳರೆಂದು ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ. ರಾಜಕುಮಾರ್ ಹಾಗೂ ಈತನ ಸ್ನೇಹಿತನನ್ನು ಹಿಡಿದು ಮಕ್ಕಳ ಕಳ್ಳರೆಂದು ಹಲ್ಲೆ ನಡೆಸಿದ್ದರು. ಈ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಇಬ್ಬರನ್ನು ರಕ್ಷಿಸಿ, ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ.
ಕಾಲುರಾಮ್ ಮೃತದೇಹ ಹಸ್ತಾಂತರ: ಚಾಮರಾಜಪೇಟೆಯಲ್ಲಿ ಸಾರ್ವಜನಿಕರ ಥಳಿತಕ್ಕೆ ಬಲಿಯಾದ ಕಾಲುರಾಮ್ ಮೃತದೇಹವನ್ನು ಆತನ ದೊಡ್ಡಪ್ಪನ ಪುತ್ರ ಮದನ್‌ಲಾಲ್‌ಗೆ ಶುಕ್ರವಾರ ಹಸ್ತಾಂತರಿಸಲಾಯಿತು. ಬೆಂಗಳೂರಿನಲ್ಲಿ ವಾಸವಿರುವ ರಾಜಸ್ಥಾನ ಮೂಲದ ವ್ಯಕ್ತಿಗಳೆಲ್ಲಾ ಸೇರಿ ವಿಶೇಷ ವಿಮಾನದ ಮೂಲದ ಕಾಲುರಾಮ್ ಮೃತದೇಹವನ್ನು ರವಾನಿಸಲು ಸಹಾಯ ಮಾಡಿದ್ದಾರೆ. ಪುಣೆಯಲ್ಲಿ ಟೈಲ್ಸ್ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಕಾಲುರಾಮ್, ಎರಡು ತಿಂಗಳ ಹಿಂದಷ್ಟೇ ಟೈಲ್ಸ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆ ನಡೆಸಿದರೆ ಜೋಕೆ!: “ರಾಜ್ಯಾದ್ಯಂತ ಹಬ್ಬಿರುವ ಮಕ್ಕಳ ಕಳ್ಳರ ವದಂತಿ ಶುದ್ಧ ಸುಳ್ಳು. ಅಮಾಯಕರ ಮೇಲೆ ಹಲ್ಲೆ ನಡೆಸಬೇಡಿ. ಒಂದು ವೇಳೆ ಅಂತಹ ವ್ಯಕ್ತಿಗಳು ಪತ್ತೆಯಾದರೆ ಕೂಡಲೇ ಹತ್ತಿರದ ಠಾಣೆಗೆ ಮಾಹಿತಿ ನೀಡಿ,’ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಮ್ಮ ಮೊಬೈಲ್‌ಗೆ ನಕಲಿ ವಿಡಿಯೋ, ಫೋಟೋಗಳು ಬಂದರೆ, ಬೇರೆಯವರಿಗೆ ಕಳಿಸದೆ ಡಿಲೀಟ್ ಮಾಡಿ. ಒಂದು ವೇಳೆ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಜರುಗಿಸಲಾಗುವುದು,’ ಎಂದು ಎಚ್ಚರಿಸಿದರು.