ಮುಂಬಯಿ: ಹಲಾಲ್, ಹಿಜಾಬ್ ವಿಚಾರದ ಬಳಿಕ ಹಿಂದೂಪರ ಸಂಘಟನೆಗಳು ಇದೀಗ ಕರ್ನಾಟಕದಲ್ಲಿ ಆಜಾನ್ ವಿರೋಧಿಸುವ ಅಭಿಯಾನಕ್ಕೆ ಮುಂದಾಗಿದ್ದು, ನೆರೆಯ ಮಹಾರಾಷ್ಟ್ರದಲ್ಲಿಯೂ ಆಜಾನ್ ವಿವಾದ ಹೊಸ ರೂಪ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಜಿಮ್‌ನಲ್ಲಿ ಮಹಿಳೆ ಸಾವು ಹೃದಯಾಘಾತದಿಂದ ಅಲ್ಲ: ಅಸಲಿ ಕಾರಣ ಬಯಲು
ಮಸೀದಿಗಳಲ್ಲಿ ಮೈಕ್ ಬಳಸಿ ಆಜಾನ್ ಕೂಗುವ ವೇಳೆಯಲ್ಲಿಯೇ ಅದಕ್ಕೆ ಪ್ರತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹನುಮಾನ್ ಚಾಲೀಸಾ ಪಠಿಸುವಂತೆ ಮಹಾರಾಷ್ಟ್ರದ ಬಿಜೆಪಿ ಮುಖಂಡರೊಬ್ಬರು ಆಫರ್ ನೀಡಿರುವುದಾಗಿ ವರದಿ ವಿವರಿಸಿದೆ.
ಹನುಮಾನ್ ಚಾಲೀಸಾ ಅಭಿಯಾನದ ಮುಂದುವರಿದ ಭಾಗವಾಗಿ ಒಂದು ವೇಳೆ ಯಾರಿಗಾದರೂ ದೇವಸ್ಥಾನದಲ್ಲಿ ಮೈಕ್ ನ ಅಗತ್ಯವಿದ್ದರೆ ಅದನ್ನು ಉಚಿತವಾಗಿ ನೀಡುವುದಾಗಿ ಆಫರ್ ಕೊಟ್ಟಿದೆ. ಈ ವಿಚಾರದಲ್ಲಿ ಎಲ್ಲಾ ಹಿಂದೂಗಳು ಒಗ್ಗಟ್ಟಿನ ಧ್ವನಿ ಎತ್ತಬೇಕಾಗಿದೆ. ಜೈಶ್ರೀರಾಮ್, ಹರ, ಹರ ಮಹಾದೇವ್ ಘೋಷಣೆ ಮೊಳಗಬೇಕು ಎಂದು ಕೋಟ್ಯಧಿಪತಿ ಉದ್ಯಮಿ, ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಸೀದಿಗಳಲ್ಲಿ ಮೈಕ್ ನಿಷೇಧಿಸಬೇಕೆಂದು ಬಿಜೆಪಿ ಮತ್ತು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ್ ನಿರ್ಮಾಣ್ ಸೇನಾ ಆಗ್ರಹಿಸಿದ ನಂತರ ಈ ಆಫರ್ ನೀಡಲಾಗಿದೆ ಎಂದು ವರದಿ ಹೇಳಿದೆ. ಮುಸ್ಲಿಮರು ಮಸೀದಿಗಳಲ್ಲಿ ಮೈಕ್ ಬಳಸಿ ಆಜಾನ್ ಕೂಗುವ ವೇಳೆ ಹಿಂದೂಗಳು ಕೂಡಾ ಮೈಕ್ ನಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು ಎಂದು ರಾಜ್ ಠಾಕ್ರೆ ಇತ್ತೀಚೆಗೆ ಮುಂಬಯಿಯಲ್ಲಿ ನಡೆದ ಗುಡಿ ಪಡ್ವಾ ಕಾರ್ಯಕ್ರಮದಲ್ಲಿ ಕರೆ ಕೊಟ್ಟಿದ್ದರು.
ದೇಶದ ಅತೀ ಶ್ರೀಮಂತವಾದ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಸಮೀಪಿಸುತ್ತಿರುವಾಗಲೇ ಆಜಾನ್ ವಿವಾದದ ಕಿಡಿ ಹೊತ್ತಿರುವುದು ಆಡಳಿತಾರೂಢ ಶಿವಸೇನಾ ಮತ್ತು ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ ಎಂದು ವರದಿ ತಿಳಿಸಿದೆ.