Advertisement
ಚಿತ್ರದುರ್ಗ
Related Articles
Advertisement
ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಸ್ಪರ್ಧೆ ಮಾಡಿದ್ದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಈ ಬಾರಿ ಘಟಾನುಘಟಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎಸ್ಟಿ ಮೀಸಲು ಕ್ಷೇತ್ರವಾಗಿದ್ದು, ಬಿಜೆಪಿಯಿಂದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅಖಾಡದಲ್ಲಿದ್ದಾರೆ. ಜೆಡಿಎಸ್‌ನಿಂದ ವೀರಭದ್ರಪ್ಪ ಸ್ಪರ್ಧಿ. ಎನ್.ವೈ.ಗೋಪಾಲಕೃಷ್ಣ ಇಲ್ಲಿ ಮೂರು ಬಾರಿ ಶಾಸಕರಾಗಿದ್ದವರು. ಕಳೆದ ಸಲ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣಕ್ಕೆ ಬಿಜೆಪಿಯಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಎಸ್.ತಿಪ್ಪೇಸ್ವಾಮಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿ ಸೇರಿದ್ದರು. ಕಳೆದ ಚುನಾ ವಣೆಯಲ್ಲಿ ಶ್ರೀರಾಮುಲು ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಅನಂತರ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಹಾದು ಹೋಗಿ ರುವ ಕ್ಷೇತ್ರವಾಗಿದ್ದು ಗೆಲ್ಲುವ ಹಠಕ್ಕೆ ಕಾಂಗ್ರೆಸ್ ಬಿದ್ದಿದೆ. ನಾಯಕ ಹಾಗೂ ದಲಿತ ಮತಗಳು ನಿರ್ಣಾಯಕವಾಗಿವೆ.
ಚಳ್ಳಕೆರೆ
ಎಸ್ಟಿ ಮೀಸಲು ಕ್ಷೇತ್ರವಾಗಿರುವ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯಿಂದ ಸ್ವಯಂ ನಿವೃತ್ತಿ ಪಡೆದಿರುವ ಕಂದಾಯ ಇಲಾಖೆ ಅಧಿಕಾರಿ ಅನಿಲ್‌ಕುಮಾರ್ ಕಣದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡಿದ್ದ ಎಂ.ರವೀಶ್‌ಕುಮಾರ್ ಜೆಡಿಎಸ್ ಅಭ್ಯರ್ಥಿ. ಮಾಜಿ ಸಚಿವ ತಿಪ್ಪೇಸ್ವಾಮಿ ಪುತ್ರ ಕೆ.ಟಿ.ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿದ್ದು, ಕಣ ರಂಗೇರಿದೆ. ನಾಲ್ಕು ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಘುಮೂರ್ತಿ ಸಚಿವರಾಗುತ್ತಾರೆ ಎನ್ನುವ ಉತ್ಸಾಹ ಕಾಂಗ್ರೆಸ್ ಪಾಳಯದಲ್ಲಿದೆ. ಕಳೆದ ಬಾರಿ ಕೈ ತಪ್ಪಿದ್ದ ಚಳ್ಳಕೆರೆಯಲ್ಲೂ ಬಿಜೆಪಿ ಬಾವುಟ ಹಾರಿಸಲು ಬಿಜೆಪಿ ಪಣತೊಟ್ಟಿದೆ. ಇನ್ನೂ ಕುಮಾರ ಸ್ವಾಮಿ ಎರಡು ಚುನಾವಣೆಗಳ ಸೋಲಿನ ಅನುಕಂಪ, ತಂದೆಯ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಮತಯಾಚನೆ ಮಾಡು ತ್ತಿದ್ದಾರೆ. ನಾಯಕ, ಗೊಲ್ಲ, ಒಕ್ಕಲಿಗ, ಲಿಂಗಾಯತ, ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಹಿರಿಯೂರು
ಬಿಜೆಪಿಯಿಂದ ಹಾಲಿ ಶಾಸಕ ಪೂರ್ಣಿಮಾ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಸುಧಾಕರ್ ಅಖಾಡಲ್ಲಿದ್ದಾರೆ. ಜೆಡಿಎಸ್‌ನಿಂದ ನಿವೃತ್ತ ಅಧಿಕಾರಿ ರವೀಂದ್ರಪ್ಪ ಸ್ಪರ್ಧಿಸಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್-ಬಿಜೆಪಿ ನಡುವೆ ಹೋರಾಟ ನಡೆಯುತ್ತಿದ್ದರೂ ಜೆಡಿಎಸ್ ವೋಟ್‌ಬ್ಯಾಂಕ್ ದೊಡ್ಡ ಪ್ರಮಾಣದಲ್ಲಿದೆ. ಈ ಮಧ್ಯೆ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಗನ್ನಾಯಕನಹಳ್ಳಿ ಮಹೇಶ್ ಪಡೆ ಯುವ ಮತಗಳೂ ಮುಖ್ಯವಾಗುತ್ತವೆ. 2013ರಲ್ಲಿ ಡಿ.ಸುಧಾಕರ್ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಂ.ಕೃಷ್ಣಪ್ಪ ಅಲ್ಪ ಮತಗಳ ಅಂತರದಿಂದ ಸೋತಿದ್ದರು. 2018ರಲ್ಲಿ ತಂದೆಯ ಬದಲು ಮಗಳು ಪೂರ್ಣಿಮಾ ಬಿಜೆಪಿಯಿಂದ ಅಖಾಡಕ್ಕಿಳಿದು ಸುಧಾಕರ್ ಮಣಿಸಿ ದ್ದರು. ಈಗ ಮತ್ತೆ ಇಬ್ಬರೂ ಎದುರಾಳಿಗಳಾಗಿದ್ದಾರೆ. ಸುಧಾಕರ್ ಜೈನ ಸಮುದಾಯಕ್ಕೆ ಸೇರಿದ್ದರೂ ಪ್ರಭಾವಿಯಾಗಿದ್ದಾರೆ. ಪೂರ್ಣಿಮಾ ಗೊಲ್ಲ ಸಮಾಜಕ್ಕೆ ಸೇರಿದ್ದು ತಂದೆಯ ಹೆಸರು, ಸಮುದಾಯದ ಬೆಂಬಲವಿದೆ. ಗೊಲ್ಲ, ಒಕ್ಕಲಿಗ, ಮುಸ್ಲಿಂ, ದಲಿತ ಮತಗಳು ಹೆಚ್ಚು ಪ್ರಮಾಣದಲ್ಲಿವೆ.
ಹೊಸದುರ್ಗ
ಬಿಜೆಪಿಯಿಂದ ಬಿಎಸ್‌ವೈ ಆಪ್ತ ಎಸ್.ಲಿಂಗಮೂರ್ತಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಸ್ಪರ್ಧಿಸಿದ್ದಾರೆ. ಗೂಳಿಹಟ್ಟಿ ಶೇಖರ್ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಈ ಮೂರು ಜನರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಸ್.ಲಿಂಗ ಮೂರ್ತಿ ಎರಡು ಬಾರಿ ಸೋತಿದ್ದು, ಅನುಕಂಪದ ಅಲೆ ಯಿದೆ. ಹೊಸಬರಿಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಗೂಳಿಹಟ್ಟಿ ಶೇಖರ್ ಅಭಿವೃದ್ಧಿ ಹಾಗೂ ಬಿಜೆಪಿ ಟಿಕೆಟ್ ತಪ್ಪಿರುವ ವಿಷಯ ಮುನ್ನೆಲೆಗೆ ತಂದಿದ್ದಾರೆ. ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ತಮ್ಮ ಅವಧಿಯ ಕೆಲಸ ಹಾಗೂ ಇದು ನನ್ನ ಕೊನೆಯ ಚುನಾವಣೆ ಎನ್ನುವ ಅಸ್ತ್ರ ಇಟ್ಟುಕೊಂಡಿದ್ದಾರೆ. ಪಕ್ಷೇತರರಾಗಿ ಟಿ.ಮಂಜುನಾಥ್ ಹಾಗೂ ಪಾಂಡುರಂಗಪ್ಪ ಗರಗ್ ಇದ್ದು, ಕಾಂಗ್ರೆಸ್ ಪಕ್ಷದ ಮತ ಸೆಳೆಯುತ್ತಾರೆ ಎನ್ನುವ ಲೆಕ್ಕಾಚಾರವಿದೆ. ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರನ್ನು ಸೋಲಿಸಿದ್ದ ಕ್ಷೇತ್ರ ಎಂಬ ಹಿನ್ನೆಲೆ ಹೊಂದಿರುವ ಇಲ್ಲಿ ಲಿಂಗಾಯತ, ಕುರುಬ, ಗೊಲ್ಲ, ದಲಿತ, ದೇವಾಂಗ, ಉಪ್ಪಾರ ಸಹಿತ ಹಿಂದುಳಿದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಹೊಳಲ್ಕೆರೆ
ಅರೆ ಮಲೆನಾಡು ಹೊಳಲ್ಕೆರೆ ಘಟಾನುಘಟಿಗಳ ಕ್ಷೇತ್ರ. ಇಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಚ್.ಆಂಜನೇಯ, ಬಿಜೆಪಿಯಿಂದ ಹಾಲಿ ಶಾಸಕ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಸಾಂಪ್ರ ದಾಯಿಕ ಎದುರಾಳಿಗಳು. ಮೇಲ್ನೋಟಕ್ಕೆ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿಯಿದ್ದರೂ, ಪಕ್ಷೇತರ ಅಭ್ಯರ್ಥಿ ಡಾ|ಜಯಸಿಂಹ ಲೋಕನಾಥ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ. ಎಸ್ಸಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾದ ಅನಂತರ ಇಲ್ಲಿ ಆಂಜನೇಯ-ಚಂದ್ರಪ್ಪ ಎದುರಾಳಿಗಳಾಗುತ್ತಿದ್ದಾರೆ. ಒಂದೊಂದು ಚುನಾವಣೆಗೆ ಒಬ್ಬೊಬ್ಬರಿಗೆ ಅವಕಾಶ ಕೊಡುವ ಮೂಲಕ ಇಲ್ಲಿನ ಮತದಾರರು ಬುದ್ಧಿವಂತಿಕೆ ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್ ಪರ ಡಿ.ಕೆ.ಶಿವಕುಮಾರ್ ಭರ್ಜರಿ ರೋಡ್ ಶೋ, ಸಮಾವೇಶ ಮಾಡಿ ಹೋಗಿದ್ದರೆ, ಬಿಜೆಪಿ ಪರ ಬಿ.ಎಸ್.ಯಡಿಯೂರಪ್ಪ ಬ್ಯಾಟಿಂಗ್ ಮಾಡಿ ಹೋಗಿದ್ದಾರೆ. ಎರಡೂ ಪಕ್ಷಗಳಲ್ಲಿ ಪûಾಂತರ ಪರ್ವ ಜೋರಾಗಿದೆ. ಜಿ.ಪಂ. ಮಾಜಿ ಅಧ್ಯಕ್ಷ, ಮಾಜಿ ಶಾಸಕ ರಮೇಶ್ ಪುತ್ರ ಶಿವಕುಮಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅದೇ ರೀತಿ ಕಾಂಗ್ರೆಸ್ ತೊರೆದು ಅನೇಕರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಹೊರಗಿನವರು, ಸ್ಥಳೀಯ ಹೊಸಮುಖಕ್ಕೆ ಅವಕಾಶ ಕೊಡಿ ಎಂದು ಡಾ|ಜಯಸಿಂಹ ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳು ದೊಡ್ಡ ಪ್ರಮಾಣದಲ್ಲಿವೆ. ಮಾದಿಗ, ಲಂಬಾಣಿ, ನಾಯಕ, ಕುರುಬ, ಮುಸ್ಲಿಂ, ದಲಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
- ತಿಪ್ಪೇಸ್ವಾಮಿ ನಾಕೀಕೆರೆ