ಪಣಜಿ/ರಾಂಚಿ: ಗೋವಾದಲ್ಲಿ 11 ಕಾಂಗ್ರೆಸ್ ಶಾಸಕರ ಪೈಕಿ 8 ಮಂದಿ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ.
ಪ್ರತೀ ಶಾಸಕನಿಗೂ 40-50 ಕೋಟಿ ರೂ.ಗಳ ಆಮಿಷವೊಡ್ಡಲಾಗಿದೆ ಎಂದು ಕಾಂಗ್ರೆಸ್ ನಾಯಕ, ಗೋವಾ ಉಸ್ತುವಾರಿ ದಿನೇಶ್ ಗುಂಡೂ ರಾವ್ ಆರೋಪಿಸಿದ್ದಾರೆ. ಇದನ್ನು ಬಿಜೆಪಿ ತಳ್ಳಿಹಾಕಿದೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಗುರುವಾರ ಗೋವಾಗೆ ಧಾವಿಸಿದ್ದ ದಿನೇಶ್ ಗುಂಡೂರಾವ್ ಪಕ್ಷದ ಶಾಸಕರು ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. “ಇಷ್ಟೆಲ್ಲ ಹಣ ಕೊಟ್ಟು ಶಾಸಕರನ್ನು ಖರೀದಿಸುತ್ತಿರುವ ಬಿಜೆಪಿಗೆ ಈ ಹಣ ಎಲ್ಲಿಂದ ಬರುತ್ತದೆ? ಅವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಗೋವಾ ಘಟಕದ ಅಧ್ಯಕ್ಷ ಸದಾನಂದ ಶೇಟ್ ಮಾತನಾಡಿ, “ಕಾಂಗ್ರೆಸ್ ನಿರ್ನಾಮವಾಗುತ್ತಿದೆ ಎಂಬುದನ್ನು ಅರಿತು, ಯಾವುದೇ ಷರತ್ತು ಇಲ್ಲದೆಯೇ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದಾರೆ ಎಂದಿದ್ದಾರೆ.
ಎರಡು ರೀತಿಯ ಜನರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ಒಂದು, ಪಕ್ಷದಲ್ಲಿ ಹುದ್ದೆ, ಅಧಿಕಾರ ಎಲ್ಲ ವನ್ನೂ ಗಳಿಸಿದವರು. ಉದಾ: ಗುಲಾಂ ನಬಿ ಆಜಾದ್‌ರಂಥವರು. ಎರಡನೆ ಯದ್ದು, ತನಿಖಾ ಸಂಸ್ಥೆಗಳ ಹಿಡಿತಕ್ಕೆ ಸಿಲುಕಿದವರು. ಉದಾ: ಹಿಮಾಂತ ಬಿಸ್ವಾ ಶರ್ಮಾ. ಬಿಜೆಪಿ ಸೇರಿದೊಡನೆ ಎಲ್ಲ ಆರೋಪಗಳಿಂದಲೂ ಅವರು ಮುಕ್ತರಾದರು.
-ಜೈರಾಂ ರಮೇಶ್, ಕಾಂಗ್ರೆಸ್ ಹಿರಿಯ ನಾಯಕ
ಮೋದಿಜೀ ಅವರನ್ನು ಹೊರತುಪಡಿಸಿ ಬೇರ್ಯಾರಿಗೂ ಈ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂದು ಅರಿತು ಕಾಂಗ್ರೆಸ್ ಶಾಸಕರೆಲ್ಲ ಬಿಜೆಪಿಗೆ ಸೇರುತ್ತಿದ್ದಾರೆ. ನಾವು ಯಾವ ಶಾಸಕನನ್ನೂ ಸಂಪರ್ಕಿಸಿ, ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಅವರೇ ಸ್ವಇಚ್ಛೆಯಿಂದ ಬಂದಿದ್ದಾರೆ.
-ಪ್ರಮೋದ್ ಸಾವಂತ್, ಗೋವಾ ಸಿಎಂ