Advertisement
ಪ್ರತಿ ತಿಂಗಳ ಮೊದಲ ವಾರದಲ್ಲಿ ಮೆಸ್ಕಾಂ ಸಿಬಂದಿ ಮನೆ ಬಾಗಿಲಿಗೇ ಬಂದು ಮೀಟರ್ ಓದಿ ಬಿಲ್ ನೀಡುತ್ತಾರೆ. ಅಲ್ಲದೆ, ಪಾವತಿಗೆ ಸಾಕಷ್ಟು ಸಮಯಾವಕಾಶವನ್ನೂ ನೀಡಲಾಗುತ್ತದೆ. ಆದರೆ ಸ್ವಲ್ಪ ಆರಾಮವಾಗಿ ಬಿಲ್ ಪಾವತಿಸುವ ಎಂದು ಕೊನೆಯ ದಿನದವರೆಗೂ ಕಾದರೆ ಬಿಲ್‌ನಲ್ಲಿ ಅಚ್ಚಾಗಿರುವ ಅಕ್ಷರಗಳೇ ಕಾಣದಾಗಿರುತ್ತವೆ.
ಕೆಲವೊಮ್ಮ ಅನಿವಾರ್ಯವಾಗಿ ಬಿಲ್ ಪಾವತಿ ಮಾಡುವುದು ತಡ ವಾದರೆ, ಎಷ್ಟು ಬಿಲ್ ಬಂದಿದೆ ಎಂಬುದೇ ತಿಳಿಯುವುದಿಲ್ಲ. ಇದರಿಂದಾಗಿ ಮುಂದಿನ ತಿಂಗಳಿನ ಬಿಲ್ ಬರುವವರೆಗೂ ಕಾಯಬೇಕಾಗುತ್ತದೆ ಎನ್ನುತ್ತಾರೆ ಶರ್ಬತ್‌ಕಟ್ಟೆ ನಿವಾಸಿ ಲವೀನಾ ಡಿ’ಸೋಜಾ. ಅಲ್ಲದೆ, ವಿದ್ಯುತ್ ಬಿಲ್‌ನಲ್ಲಿ ದಾಖಲಾಗುವ ಮಾಪನ, ಓದಿದ ವಿವರ ಮತ್ತು ಲೆಕ್ಕಾಚಾರಗಳ ವಿವರ ಅಡಿ ಮೇಲಾಗಿ ಮುದ್ರಿತಗೊಂಡಿರುತ್ತವೆ. ಇದರಿಂದ ಬಿಲ್‌ನಲ್ಲಿ ಏನಿದೆ ಎಂಬುದೇ ಗ್ರಾಹಕರಿಗೆ ಓದಲು ಅಸಾಧ್ಯವಾಗಿ ಗೊಂದಲಗಳಾಗುತ್ತಿವೆ. ಎರಡು ವರ್ಷಗಳಿಂದ ಇದೇ ಸಮಸ್ಯೆ ಎನ್ನುತ್ತಾರವರು. ಕಳಪೆ ಗುಣಮಟ್ಟದ ಪೇಪರ್
ವಿದ್ಯುತ್ ಮತ್ತು ನೀರಿನ ಬಿಲ್ ಬಹು ಬೇಗನೇ ಅಳಿಸಿ ಹೋಗುವುದರಿಂದ ಬಿಲ್ ನೀಡಿದ ತತ್‌ಕ್ಷಣ ಅದರಲ್ಲಿ ಮೊತ್ತದ ಸಂಖ್ಯೆಯನ್ನು ಪೆನ್‌ನಲ್ಲಿ ಬರೆದಿಡಬೇಕಾದ್ದು ಅನಿವಾರ್ಯ. ಬಿಲ್ ಮುದ್ರಿಸಲು ಬಳಸಲಾಗುತ್ತಿರುವ ಕಳಪೆ ಗುಣಮಟ್ಟದ ಕಾಗದವೇ ಅದಕ್ಕೆ ಕಾರಣ ಎಂಬುದು ಗ್ರಾಹಕರ ವಾದ.
Related Articles
Advertisement
ಕಾಗದದ ಗುಣಮಟ್ಟ ಸರಿಯಾಗಿಲ್ಲದಿರುವುದನ್ನು ಮೆಸ್ಕಾಂ ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದು, ಈಗ ಬಳಸಲಾಗುತ್ತಿರುವ ಥರ್ಮಲ್ ಕಾಗದದ ಬದಲಾಗಿ ಗುಣಮಟ್ಟದ ಕಾಗದವನ್ನು ಮುಂದಿನ ದಿನಗಳಲ್ಲಿ ಬಿಲ್ ಮುದ್ರಿಸಲು ಬಳಸಲಾಗುವುದು ಎಂದು ತಿಳಿಸಿದ್ದಾರೆ.
ನಿರ್ದೇಶ ನೀಡಲಾಗಿದೆವಿದ್ಯುತ್ ಬಿಲ್‌ನಲ್ಲಿರುವ ಅಕ್ಷರಗಳು ಅಳಿಸಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಅಚ್ಚಾಗುವ ಕಾಗದದ ಗುಣಮಟ್ಟದಲ್ಲಿ ಸ್ವಲ್ಪ ತೊಂದರೆಯಾಗಿದೆ. ಮಂಗಳೂರು ಭಾಗದಲ್ಲಿ ಬಂದಿರುವ ದೂರುಗಳನ್ನಾಧರಿಸಿ ಈಗಿರುವ ಥರ್ಮಲ್ ಪೇಪರ್ ಬದಲಾಗಿ ಗುಣಮಟ್ಟದ ಪೇಪರ್ ಖರೀದಿಸಲು ಸಂಬಂಧಪಟ್ಟ ಕಾರ್ಯಕಾರಿ ಅಭಿಯಂತರರಿಗೆ ನಿರ್ದೇಶ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ.
– ರಘುಪ್ರಕಾಶ್,
ನಿರ್ದೇಶಕ (ತಾಂತ್ರಿಕ) ಮೆಸ್ಕಾಂ ವಿಶೇಷ ವರದಿ