ದಾವಣಗೆರೆ: ಭವಿಷ್ಯದಲ್ಲಿ ಹಲವಾರು ಕ್ಷೇತ್ರದಲ್ಲಿ ಬಳಸಲ್ಪಡುವ ಐಒಟಿ ತಂತ್ರಜ್ಞಾನದ ಬಳಕೆಯ ಪ್ರಭಾವ ಸಮಾಜದ ಮೇಲೆ ಹೆಚ್ಚಾಗಲಿದೆ ಎಂದು ಐರ್ಲೆಂಡ್‌ನ ಗ್ಯಾಲವೆಯ ರಾಷ್ಟ್ರೀಯ ವಿಶ್ವವಿದ್ಯಾಲಯ ಐಒಟಿ ಸ್ಟ್ರೀಮ್ ಪ್ರೊಸೆಸ್ಸಿಂಗ್ ವಿಭಾಗದಮುಖ್ಯಸ್ಥ ಡಾ| ಮಾರ್ಟಿನ್ ಸೆರೆನೂ ಅಭಿಪ್ರಾಯಪಟ್ಟಿದ್ದಾರೆ.
ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ IoT Enabled Smart City & well being… ವಿಷಯ ಕುರಿತ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಐಒಟಿ ತಂತ್ರಜ್ಞಾನದ ಬಳಕೆಯ ಎಲ್ಲಾ ಕ್ಷೇತ್ರದಲ್ಲಿ ಸಾಮಾನ್ಯ ಎನ್ನುವಂತಾಗಲಿದೆ.
ವಿದ್ಯಾರ್ಥಿಗಳು ಈ ತಂತ್ರಜ್ಞಾನದ ಬಗ್ಗೆ ಸಮಗ್ರ ಮಾಹಿತಿ ಪಡೆಯಬೇಕು ಎಂದರು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಎನ್ನುವುದು ಸುಲಭವಾಗಿ ದೊರಕುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ. ಸತತ ಪರಿಶ್ರಮ, ಆಳವಾದ ಅಧ್ಯಯನ ಮೂಲಕ ಜೀವನದ ಗುರಿ ಸಾಧಿಸಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್. ನಾರಾಯಣಪ್ಪ ಮಾತನಾಡಿ,ದಾವಣಗೆರೆಯ ಅಭಿವೃದ್ಧಿಗಾಗಿ ನಗರಪಾಲಿಕೆ ಹಲವು ಯೋಜನೆ ಹಮ್ಮಿಕೊಂಡಿದೆ. ಐಒಟಿ ತಂತ್ರಜ್ಞಾನವನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಎಲ್ಲಾ ರಂಗದಲ್ಲಿ ಬಹು ಮುಖ್ಯವಾದ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ| ಪಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ| ಬಿ.ಆರ್. ಶ್ರೀಧರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ವರ್ಗದವರು ಇದ್ದರು. ಸಿ.ಪಿ. ಹರ್ಷಿತಾ ಸ್ವಾಗತಿಸಿದರು. ಪ್ರೊ| ವಿಕಾಸ್ ಎತ್ನಳ್ಳಿ ನಿರೂಪಿಸಿದರು.