Advertisement

ಅಪಾಯದಲ್ಲಿವೆ ನದೀ ತೀರದ ಅಂಗಡಿಗಳು​​​​​​​

12:30 AM Mar 23, 2019 | |

ಸಸಿಹಿತ್ಲು: ಸರ್ಫಿಂಗ್‌ನಿಂದ ಪ್ರವಾಸೋದ್ಯಮ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಮುಂಡ ಬೀಚ್‌ನಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ನದಿ ಕೊರೆತ ಉಂಟಾಗಿ ಪಂಚಾಯತ್‌ ನಿರ್ಮಿಸಿದ ಅಂಗಡಿ ಕೋಣೆಗಳು ಅಪಾಯದ ಅಂಚಿಗೆ ಸಿಲುಕಿವೆ.

Advertisement

ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಸಸಿಹಿತ್ಲು ಬೀಚ್‌ ಪ್ರದೇಶದಲ್ಲಿ ಹಳೆಯಂಗಡಿ ಗ್ರಾ.ಪಂ. ಬೀಚ್‌ ಅಭಿವೃದ್ಧಿ ಸಮಿತಿಯನ್ನು ರಚಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿವೆ. ಆದರೆ ಕೊರೆತ ತಡೆಗೆ ಇಲಾಖೆಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಹಿಂದೆ ಸಮುದ್ರ ಕೊರೆತ ಕಂಡುಬಂದಾಗ ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಸಹಕಾರದಲ್ಲಿ ಬೃಹತ್‌ ಕಲ್ಲುಗಳ ಶಾಶ್ವತ ತಡೆಗೋಡೆ ನಿರ್ಮಿಸಲಾಗಿತ್ತು. ಆ ವೇಳೆ ನಂದಿನಿ ಹಾಗೂ ಶಾಂಭವಿ ನದಿ ಸಂಗಮಿಸುವ ಅಳಿವೆಯಲ್ಲಿ ನದಿ ಕೊರೆತಕ್ಕೆ ಪರಿಹಾರ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದರೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಹೀಗಾಗಿ ಈ ಭಾಗದಲ್ಲಿದ್ದ ಗಾಳಿ ಮರಗಳು, ಪಂಚಾಯತ್‌ ಪ್ರವಾಸಿಗರ ಅನುಕೂಲಕ್ಕಾಗಿ ಹಾಕಿದ್ದ ಕಲ್ಲು ಬೆಂಚುಗಳು, ವಿದ್ಯುತ್‌ ಕಂಬಗಳು ಎಲ್ಲವೂ ನದಿಯ ಪಾಲಾಗಿದೆ.

ನದಿಯ ಹೂಳನ್ನು ತೆಗೆದರೆ ಅಲೆಗಳ ರಭಸ ಕಡಿಮೆಯಾಗಿ ಮೀನುಗಾರಿಕೆ ದೋಣಿಗಳು ನೇರವಾಗಿ ಒಳ ಪ್ರವೇಶಿಸಲು ಸಾಧ್ಯವಾಗುತ್ತದೆ ಎನ್ನುವುದು ಸ್ಥಳೀಯ ಮೀನುಗಾರರ ಅಭಿಪ್ರಾಯ. ಬಂದರು ಮತ್ತು ಮೀನುಗಾರಿಕೆ ಇಲಾಖೆ ಹಾಗೂ ಜನಪ್ರತಿನಿಧಿ ಗಳು ತತ್‌ಕ್ಷಣ ಸ್ಪಂದಿಸದಿದ್ದಲ್ಲಿ ಮುಂದೆ ಮುಂಡ ಬೀಚ್‌ ಸಂಪೂರ್ಣ ನದಿಯ ಪಾಲಾಗಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಸೂಪರ್‌ ಮೂನ್‌: ಉಬ್ಬರದಲೆ
ಗುರುವಾರದ ಸೂಪರ್‌ ಮೂನ್‌ ಪರಿಣಾಮ ಕರಾವಳಿ ಯಲ್ಲಿ ಸಮುದ್ರದಲೆಗಳು ಸಾಮಾನ್ಯಕ್ಕಿಂತ ಬಿರುಸಾಗಿದ್ದವು. ಗಾಳಿ ಕೂಡ ರಭಸವಾಗಿತ್ತು. ಆದರೆ ಎಲ್ಲೂ ತೊಂದರೆಯಾದುದು ವರದಿಯಾಗಿಲ್ಲ.

Advertisement

ಕೊರೆತಕ್ಕೆ ಪಂ. ಅಸಹಾಯಕ
ಮುಂಡ ಬೀಚ್‌ ಪ್ರದೇಶವು ಸಂಪೂರ್ಣ ವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸೇರಿದೆ. ಕೊರೆತವನ್ನು ನಿರ್ವಹಿಸಲು ಗ್ರಾ.ಪಂ.ಗೆ ಸಾಧ್ಯವಿಲ್ಲ, ಇಲಾಖೆಯ ಗಮನಕ್ಕೆ ತಂದಿದ್ದೇವೆ. ಶಾಶ್ವತ ಪರಿಹಾರ ಕಾಣಬೇಕು.
– ಅನಿತಾ ಕ್ಯಾಥರೀನ್‌
ಹಳೆಯಂಗಡಿ ಗ್ರಾ.ಪಂ. ಪ್ರಭಾರ ಪಂ. ಅಭಿವೃದ್ಧಿ ಅಧಿ ಕಾರಿ

ತತ್‌ಕ್ಷಣ ಸ್ಪಂದಿಸಲಿ
ಬೀಚನ್ನು ಅತ್ಯಾಕರ್ಷಕವಾಗಿ ರೂಪಿಸಲು ಗ್ರಾ.ಪಂ. ಅಭಿವೃದ್ಧಿ ಸಮಿತಿಯ ಮೂಲಕ ಸತತ ಪ್ರಯತ್ನ ನಡೆಸುತ್ತಿದೆ. ಆದಾಯ ಇಲ್ಲದಿದ್ದರೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ಇಲಾಖೆಗಳ ಮುಕ್ತ ಸಹಕಾರ ಬೇಕು, ತತ್‌ಕ್ಷಣ ಸ್ಪಂದಿಸಲು ಮನವಿ ಮಾಡಿದ್ದೇವೆ.
-ಎಚ್‌. ವಸಂತ ಬೆರ್ನಾಡ್‌ 
ಅಧ್ಯಕ್ಷರು, ಬೀಚ್‌ ಅಭಿವೃದ್ಧಿ ಸಮಿತಿ 

Advertisement

Udayavani is now on Telegram. Click here to join our channel and stay updated with the latest news.

Next