Advertisement

ಕೋವಿಡ್‌ ಕಾಲದಲ್ಲಿ ನೊಂದವರಿಗೆ ಆಸರೆ!

02:52 PM Feb 04, 2022 | Team Udayavani |

ಸಿಂಧನೂರು: ಕೊರೊನಾದಿಂದಾಗಿ ಕೌಟುಂಬಿಕವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳನ್ನು ಗುರುತಿಸಿ ಅವರಿಗೆ ವೃತ್ತಿಪರ ಕೌಶಲ್ಯ ಹೇಳಿಕೊಡುವ ಮೂಲಕ ಸದ್ದಿಲ್ಲದೇ ಆಸರೆ ಒದಗಿಸಲಾಗಿದೆ.

Advertisement

ಆರ್ಥಿಕವಾಗಿ ಮಹಿಳೆಯರು ಕೂಡ ದುಡಿಮೆಯ ಮಾರ್ಗ ಕಂಡುಕೊಳ್ಳಲಿಕ್ಕೆ ಈ ಉಚಿತ ತರಬೇತಿ ಪೂರಕವಾಗಿದೆ. ಬೆಂಗಳೂರಿನ ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ನಿರ್ದೇಶನಾಲಯ, ಪಾಟೀಲ್‌ ಅಕಾಡೆಮಿ ಸಹಭಾಗಿತ್ವದಲ್ಲಿ ಎರಡು ತಿಂಗಳ ಕಾಲ ತಾಲೂಕಿನ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಕಷ್ಟಕ್ಕೆ ಸಿಲುಕಿದವರು, ಆರ್ಥಿಕವಾಗಿ ದುರ್ಬಲರನ್ನು ಗುರುತಿಸಿ, ಅವರಿಗೆ ತರಬೇತಿ ಕಲ್ಪಿಸಲಾಗಿದೆ.

ವೃತ್ತಿಪರ ತರಬೇತಿಗೆ ಬೇಡಿಕೆ

ಬಡ ಮಹಿಳೆಯರಿಗೆ ಉಚಿತವಾಗಿ ಈ ತರಬೇತಿ ನೀಡುತ್ತಿದ್ದು, ಇಲ್ಲಿನ ದುದ್ದುಪುಡಿ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಶಿಬಿರಕ್ಕೆ 20 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಮದುವೆ ಸೇರಿದಂತೆ ಇತರ ಶುಭ ಸಂದರ್ಭದಲ್ಲಿ ಮೆಹಂದಿ ಹಾಕುವುದಕ್ಕೂ ಬೇಡಿಕೆಯಿದೆ. ಗೌರವ ಸಂಭಾವನೆಯೂ ದೊರೆಯುತ್ತದೆ. ಇನ್ನು ಬ್ಯೂಟಿಷಿಯನ್‌ ತರಬೇತಿ ಪಡೆದವರು ಮನೆಯಲ್ಲೇ ಕೇಂದ್ರ ಆರಂಭಿಸಬಹುದು. ಆರ್ಥಿಕವಾಗಿ ತೊಂದರೆ ಎದುರಿಸುತ್ತಿದ್ದವರಿಗೆ ಇದೊಂದು ಉತ್ತಮ ಮಾರ್ಗವೆನಿಸಿದೆ. ಕಳೆದ ತಿಂಗಳಿಂದ ತರಬೇತಿ ನಡೆಯುತ್ತಿದ್ದು, ಉಚಿತವಾಗಿಯೇ ಎಲ್ಲ ವ್ಯವಸ್ಥೆ ಒದಗಿಸಲಾಗಿದೆ.

ಕಿಟ್‌ ವಿತರಣೆ

Advertisement

ತರಬೇತಿ ಪೂರ್ಣಗೊಂಡ ಬಡ ಮಹಿಳೆಯರಿಗೆ ಅನುಕೂಲವಾಗಲು ಬ್ಯೂಟಿಷಿಯನ್‌ ಕಿಟ್‌ ಒದಗಿಸಲಾಗುತ್ತದೆ. ಅವರು ಆ ಕಿಟ್‌ ಬಳಸಿಕೊಂಡು ಮನೆಯಲ್ಲೇ ದುಡಿಮೆ ಆರಂಭಿಸಬಹುದು. ವೃತ್ತಿಪರ ಕೋರ್ಸ್‌ ಕಲಿಸಿದರೆ, ಯಾವುದೇ ನಷ್ಟವಿಲ್ಲ. ಮಹಿಳೆಯರ ಸ್ವಾವಲಂಬನೆಗೂ ಅನುಕೂಲವೆಂಬ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಬೋರ್ಸ್ ಕಂಪನಿ ಸಹಭಾಗಿತ್ವದಲ್ಲಿ ಈಗಾಗಲೇ ಕೇರ್‌ ಗಿವರ್‌ ತರಬೇತಿ ನೀಡಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿ ಸಿ ಕೌಶಲ್ಯ ತಿಳಿಸಲಾಗಿತ್ತು. ಬಿಪಿ, ಶುಗರ್‌, ಕೋವಿಡ್‌ ಪರೀಕ್ಷೆಯಂತಹ ಪ್ರಾಥಮಿಕ ತರಬೇತಿ ನೀಡಿದ್ದರಿಂದ ಹಲವು ಮಹಿಳೆಯರು ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇದೀಗ ಬ್ಯೂಟಿಷಿಯನ್‌, ಮೆಹಂದಿ ತರಬೇತಿ ನೀಡುತ್ತಿದ್ದು, ಮಹಿಳೆಯರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಆರ್ಥಿಕ ದುರ್ಬಲ ಮಹಿಳೆಯರಿಗೆ ಸಣ್ಣ ಪ್ರಮಾಣದಲ್ಲಿ ಸಹಾಯ ಮಾಡಬೇಕೆಂಬ ಉದ್ದೇಶದಿಂದ ತರಬೇತಿ ಶಿಬಿರ ನಡೆಸಲಾಗಿದೆ. ಉಚಿತವಾಗಿಯೇ ಬ್ಯೂಟಿಷಿಯನ್‌ ಕಿಟ್‌ ವಿತರಿಸಲಾಗುತ್ತದೆ. -ಆರ್‌.ಸಿ. ಪಾಟೀಲ್‌,ಕಾರ್ಯದರ್ಶಿ, ದುದ್ದುಪುಡಿ ಮಹಾವಿದ್ಯಾಲಯ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next