Advertisement

ಜೂನಿಯರ್‌ ಕಾಲೇಜು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಸಂಚರಿಸಿ!

12:58 PM Apr 13, 2018 | |

ಸುಳ್ಯ: ನಗರದ ಕೇಂದ್ರ ಭಾಗಕ್ಕೆ ಸಮೀಪದಲ್ಲಿರುವ ಸುಳ್ಯ ಸ.ಪ.ಪೂ. ಕಾಲೇಜು ಮತ್ತು ವಿವೇಕಾನಂದ ಸರ್ಕಲ್‌ ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಆರೋಗ್ಯದ ಹಿತದೃಷ್ಟಿಯಿಂದ ಮೂಗು ಮುಚ್ಚಿಕೊಳ್ಳುವುದು ಅನಿವಾರ್ಯ.

Advertisement

ಇದಕ್ಕೆ ಕಾರಣ ಚರಂಡಿಯಲ್ಲಿ ಗಬ್ಬೆದ್ದು ನಾರುತ್ತಿರುವ ತ್ಯಾಜ್ಯ. ರಸ್ತೆಯ ಇಕ್ಕೆಲಗಳಲ್ಲಿನ ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಬೀಡು ಬಿಟ್ಟು ದುರ್ವಾಸನೆ ಹಬ್ಬಿದೆ. ಜೂನಿಯರ್‌ ಕಾಲೇಜು ರಸ್ತೆಯ ಚರಂಡಿಯಿಂದ ಬರುವ ತ್ಯಾಜ್ಯ ನೀರು, ಕೃಷಿ ಇಲಾಖೆ ಮೂಲಕ ವಿವೇಕಾನಂದ ಸರ್ಕಲ್‌ ಸಂಪರ್ಕಿಸುವ ರಸ್ತೆಯ ಚರಂಡಿಗೆ ಸೇರುತ್ತದೆ. ಆರಂಭದ ಹಂತದಿಂದಲೇ ಅದು ಹರಿದು ಹೋಗದ ಕಾರಣ ಚರಂಡಿ ವಾಸನೆ ಹಬ್ಬಿ, ರೋಗ ಭೀತಿ ಸೃಷ್ಟಿಸಿದೆ.

ನ.ಪಂ., ತಾ.ಪಂ. ಸನಿಹ
ನಗರ ಪಂಚಾಯತ್‌ ಕಚೇರಿಯಿಂದ 100 ಮೀ. ದೂರದಲ್ಲಿರುವ, ತಾ.ಪಂ. ಕಚೇರಿ ಮುಂಭಾಗದಿಂದ 10 ಮೀಟರ್‌ ಸನಿಹದಲ್ಲಿನ ಚರಂಡಿ ಕಥೆಯಿದು. ಎರಡು ಕಚೇರಿಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ದಿನಂಪ್ರತಿ ಓಡಾಟ ನಡೆಸುತ್ತಾರೆ. ಆದರೂ ಅವರ್ಯಾರು ಸಮಸ್ಯೆ ಕುರಿತು ತಲೆ ಕೆಡಿಸಿಕೊಂಡಿಲ್ಲ. ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದು, ಸಮಸ್ಯೆ ಸರಿಪಡಿಸುವಲ್ಲಿ ನ. ಪಂ. ಆಸಕ್ತಿ ಹೊಂದಿಲ್ಲ.

ತೆರೆದ ಚರಂಡಿ
ಜ್ಯೂನಿಯರ್‌ ಕಾಲೇಜು ರಸ್ತೆಯ ಚರಂಡಿಗೆ ಸ್ಲ್ಯಾಬ್‌ ಹಾಸಿಲ್ಲ. ಅದಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಚರಂಡಿ ನಿರ್ವಹಣೆ ಇಲ್ಲದೆ ಪೊದೆ ತುಂಬಿರುವುದೇ ತಾಜ್ಯ ಹರಿಯದೇ ಇರುವುದಕ್ಕೆ ಕಾರಣ. ದಿನಂಪ್ರತಿ ವಸತಿಗೃಹಗಳ, ವಾಣಿಜ್ಯ ಸಂಕೀರ್ಣಗಳ ಕಟ್ಟಡದಿಂದ ಚರಂಡಿಗೆ ಸೇರುವ ತ್ಯಾಜ್ಯ ಅಲ್ಲೇ ಬೀಡು ಬಿಟ್ಟಿದೆ. ಚರಂಡಿ ಸ್ಲಾಬ್‌ ಹಾಸಿ, ತ್ಯಾಜ್ಯ ಹರಿದು ಹೋಗುವಂತೆ ಕ್ರಮ ಕೈಗೊಂಡರೆ ಪರಿಹಾರ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next