Advertisement

ತಾಯಿ ಮಗನನ್ನು ಒಂದು ಮಾಡಿದ ಸಾಮಾಜಿಕ ಜಾಲತಾಣ

08:34 PM Jun 01, 2020 | Sriram |

ಸಾಮಾಜಿಕ ಜಾಲತಾಣಕ್ಕೆ ಒಂದು ಅಗಾಧ ಶಕ್ತಿ ಇದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ಎರಡು ಮನಸ್ಸು, ವ್ಯಕ್ತಿಗಳನ್ನು ಕ್ಷಣ ಮಾತ್ರದಲ್ಲಿ ಒಂದು ಮಾಡುವ ಶಕ್ತಿ ಇದಕ್ಕಿದೆ. ಅಂಥಹದ್ದೇ ಮನ ಮಿಡಿಯುವಂತಹ ಕಥೆಯೊಂದು ದಿಲ್ಲಿಯಲ್ಲಿ ಇತ್ತೀಚೆಗೆ ಲಾಕ್‌ಡೌನ್‌ ಸಮಯದಲ್ಲಿ ನಡೆದಿದೆ. ಮೊದಲ ಹಂತದ ಲಾಕ್‌ಡೌನ್‌ ಜಾರಿಗೂ ಮುನ್ನ ತನ್ನ ತಂದೆ ತಾಯಿಯಿಂದ ಬೇರ್ಪಟ್ಟ ಯುವಕ ಸಾಮಾಜಿಕ ಜಾಲತಾಣದ ಸಹಾಯದಿಂದಾಗಿ ಸತತ 45 ದಿನಗಳ ಬಳಿಕ ತನ್ನ ಹೆತ್ತವರನ್ನು ಸೇರಿದ ಭಾವುಕ ಕತೆಯಿದು.

Advertisement

ವಿಶಾಲ್‌ ಪಾಠಕ್‌ ಎನ್ನುವ ಯುವಕ ದಿಲ್ಲಿಯಲ್ಲಿದ್ದು ಈತನ ತಂದೆ ತಾಯಿ ಬಿಹಾರ್‌ನ ಸಮಿಸ್ತಾಪುರದಲ್ಲಿದ್ದಾರೆ. ಕೋವಿಡ್‌ ದೆಸೆಯಿಂದ ದೇಶವ್ಯಾಪಿ ಲಾಕ್‌ಡೌನ್‌ ಜಾರಿಗೊಂಡ ಕಾರಣ ವಿಶಾಲ್‌ ತನ್ನ ಹೆತ್ತವರನ್ನು ಸಂಧಿಸಲಾಗಿಲ್ಲ. ಇತ್ತ ದ್ವಾರಕಾ ಸೆಕ್ಟರ್‌ 1ರಲ್ಲಿ ವಿಶಾಲ್‌ ತಂಗಿದ್ದ ಬಾಡಿಗೆ ಮನೆಯ ಮಾಲಕರು ಅವನನ್ನು ಇದ್ದಕ್ಕಿಂತ ಮನೆಯಿಂದ ಹೊರ ಹಾಕುತ್ತಾರೆ. ಏನೂ ತೋಚದ 12 ವರ್ಷದ ಬಾಲಕ ಇತ್ತ ಮನೆಗೂ ತೆರಳಲಾಗದೆ ಪಕ್ಕದಲ್ಲೇ ಇದ್ದ ಪಾರ್ಕ್‌ವೊಂದರಲ್ಲಿ ಉಳಿದುಕೊಳ್ಳಬೇಕಾಗುತ್ತದೆ.

ಲಾಕ್‌ಡಾನ್‌ನಿಂದಾಗಿ ಎಲ್ಲಿಗೂ ತೆರಳಲು ಸಾಧ್ಯವಾಗದ ಬಾಲಕ 45ದಿಗಳ ಕಾಲ ಅದೇ ಪಾರ್ಕ್‌ನಲ್ಲಿ ಬೀದಿ ನಾಯಿಗಳ ಜತೆ ಕಾಲ ಕಳೆದಿದ್ದಾನೆ. ಈತನ ಪರಿಸ್ಥಿತಿಯ ಬಗ್ಗೆ ತಿಳಿದ ಪಾರ್ಕ್‌ ಪಕ್ಕದ ನಿವಾಸಿ ಯೋಗಿತಾ ಎನ್ನುವ ಮಹಿಳೆ ಈತನಿಗೆ ದಿನನಿತ್ಯ ಊಟ ನೀಡುತ್ತಿದ್ದರು. ಹೀಗೇ ಮೇ 5ರಂದು ಎಂದಿನಂತೆ ಬೆಳಗ್ಗೆ 10 ಗಂಟೆಯ ವೇಳೆಗೆ ಯೋಗಿತಾ ಅವರು ವಿಶಾಲ್‌ನನ್ನು ಪಾರ್ಕ್‌ನ ಗೇಟ್‌ ಬಳಿಗೆ ಕರೆಯುತ್ತಾರೆ.

ನಾಯಿಗಳೊಂದಿಗೆ ಆಟವಾಡುತ್ತಿದ್ದ ಬಾಲಕ ಗೇಟ್‌ ಬಳಿಗೆ ಬಂದಾಗ ಅಲ್ಲಿ ಅಚ್ಚರಿಯೊಂದು ಕಾದಿತ್ತು. ಅದೇನೆಂದರೆ ಗೇಟ್‌ನ ಅನತಿ ದೂರದಲ್ಲಿ ಆತನ ತಂದೆ ತಾಯಿ ನಿಂತಿದ್ದರು. ವಿಶಾಲ್‌ ತುಂಬ ದಿನಗಳ ನಂತರ ತನ್ನ ತಂದೆ ತಾಯಿಯನ್ನು ಕಂಡಿದ್ದರಿಂದ ಆನಂದಕ್ಕೆ ಪಾರವೇ ಇರಲಿಲ್ಲ. ತಾಯಿಯ ಬಳಿಗೋಡಿ ಕಣ್ಣಿರಿಡುತ್ತ ತನ್ನವರನ್ನು ಮತ್ತೆ ಸೇರಲು ಸಹಾಯ ಮಾಡಿದ ಯೋಗಿತಾ ಅವರಿಗ ಧನ್ಯವಾದ ತಿಳಿಸಿದ್ದಾನೆ.

ಬಾಲಕನನ್ನು ಆತನ ಹೆತ್ತವರ ಬಳಿ ಸೇರಿಸಲು ಯೋಗಿತಾ ಅವರ ಜಾಣ್ಮೆಯ ನಡೆ ಮತ್ತು ಸಹೃದಯ ಗುಣವನ್ನು ಇಲ್ಲಿ ಮೆಚ್ಚಲೇ ಬೇಕು. ಲಾಕ್‌ಡೌನ ಸಮಯಲ್ಲಿ ಯೋಗಿತಾ ಅವರು ಏಪ್ರಿಲ್‌ ಕೊನೆಯಲ್ಲಿ ಪಾರ್ಕ್‌ಗೆ ಭೇಟಿ ನೀಡಿದ್ದಾಗ ಬಾಲಕನ ಪರಿಸ್ಥಿತಿ ಅರಿತು ಅವನನ್ನು ವಿಚಾರಿಸಿದ್ದಾರೆ. ಆಗ ಆತನ ತಂದೆ ತಾಯಿ ಬಾಲಕನನ್ನು ಮನೆಯಲ್ಲೇ ಬಿಟ್ಟು ಸಂಬಂಧಿಕರೊಬ್ಬರ ಮದುವೆಗೆಂದು ಬಿಹಾರ್‌ಗೆ ತೆರಳಿದ್ದು ವಿಶಾಲ್‌ನ ಪರೀಕ್ಷೆಯ ಕಾರಣ ಮಾರ್ಚ್‌ 22ಕ್ಕೆ ಮರಳುವವರಿದ್ದರು. ಆದರೆ ಅದೇ ಸಮಯಕ್ಕೆ ಕೋವಿಡ್-19ದಿಂದ ದೇಶವ್ಯಾಪಿ ಲಾಕ್‌ಡೌನ್‌ ವಿಧಿಸಿ ರೈಲು ಸೇವೆ ರದ್ದಾದ ಕಾರಣಕ್ಕೆ ಅವರು ಅಲ್ಲೇ ಉಳಿಯುವಂತಾಯಿತು. ಈ ವಿಷವನ್ನು ಯೋಗಿತಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ್ಡಿದ್ದರು. ಅಲ್ಲದೇ ಅವನಿಗೆ ದಿನವೂ ಊಟ ಒದಗಿಸುತ್ತಿದ್ದರು. ಕೆಲದಿನಗಳ ಅನಂತರ ಯೋಗೀತಾ ಅವರ ಸ್ನೇಹಿತೆ ಸ್ನೇಹಾ ಎನ್ನುವವರು ಈ ವಿಷಯವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡು ಹಿರಿಯ ಐಪಿಸ್‌ ಅಧಿಕಾರಿ ಅರುಣ ಬೊತ್ರಾ ಅವರನ್ನು ಟ್ಯಾಗ್‌ ಮಾಡಿದ್ದಾರೆ.

Advertisement

ಅರುಣ್‌ ಬೊತ್ರಾ ಅವರು ಈಗಾಗಲೆ ಸಾಮಾಜಿಕ ಜಾಲತಾಣದ ಮೂಲಕ ಅನೇಕರ ಕಷ್ಟಕ್ಕೆ ಸ್ಪಂದಿಸಿರುವ ಸಹೃದಯಿ. ಈ ಸುದ್ದಿ ತಿಳಿದ ಬೊತ್ರಾ ತತ್‌ಕ್ಷಣವೇ ಸಹಾಯಕ್ಕೆ ಮುಂದಾಗಿದ್ದು ತನ್ನ ಬ್ಯಾಚ್‌ಮೇಟ್‌ ಬಿಹಾರ್‌ ವಲಯದ ಅಧಿಕಾರಿ ಸಂಜಯ್‌ ಕುಮಾರ್‌ ಅವರನ್ನು ಸಂಪರ್ಕಿಸಿದ್ದಾರೆ. ಅನಂತರ ಅವರು ಸಮಸಿuಪುರದ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದಾರೆ.

ಅನಂತರ ಪಾಲಕರನ್ನು ಪತ್ತೆ ಹಚ್ಚಿದ ಬೊತ್ರಾ ಮತ್ತು ಕುಮಾರ್‌ ಅವರು ತಮ್ಮ ಹಣದಲ್ಲಿ ಸಮಸ್ತಿಪುರದಿಂದ ಹೊಸದಿಲ್ಲಿಗೆ ರೈಲು ಟೀಕೆಟ್‌ ಒದಗಿಸಿ. ಅನಂತರ ಅವರನ್ನು ವಿಶಾಲ್‌ ತಂಗಿದ್ದ ಪಾರ್ಕ್‌ಗೆ ತೆರಳಲು ಟ್ಯಾಕ್ಸಿ ಒದಗಿಸುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಸಾಮಾಜಿಕ ಜಲತಾಣಕ್ಕೆ ಅಗಾಧವಾದ ಶಕ್ತಿ ಇದೆ. ಅದು ಯಾವುದೇ ಗಡಿ, ಗುಡ್ಡಗಳ ಹಂಗಿಂಲ್ಲದೇ ಎಲ್ಲೋ ಇರುವಂತ ಜನರನ್ನು ಒಂದು ಮಾಡುತ್ತದೆ. ಇದರಿಂದಾಗಿ ನಾವು ಕೇವಲ ಮೂರು ದಿನಗಳಲ್ಲಿ ಬಿಹಾರದಿಂದ ಅವರನ್ನು ದಿಲ್ಲಿಗೆ ಕರೆತರಲು ಸಾಧ್ಯವಾಯಿತು. ಇದರಲ್ಲಿ ನಾಗರಿಕರು, ಸಂಜಯ್‌ ಕುಮಾರ್‌ ಮತ್ತು ಅಲ್ಲಿನ ಪೊಲೀಸ್‌ ಸಿಬಂದಿ ಸಹಕಾರವೂ ಸೇರಿದೆ ಎಂದು ಅರುಣ್‌ ಬೋತ್ರಾ ಹೇಳಿದ್ದಾರೆ.

ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾದಾಗಿನಿಂದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡು ಲಕ್ಷಾಂತರ ಜನರು ಹಲವಾರು ರೀತಿಯಲ್ಲಿ ತೊಂದರೆಗೀಡಾಗಿದ್ದಾರೆ. ಹೀಗೆ ಇಲ್ಲಿ ತೊಂದರೆಗೀಡಾಗಿದ್ದ ಬಾಲಕನನ್ನು ತಂದೆ ತಾಯಿ ಬಳಿ ಸೇರಿಸಿ ಯೋಗಿತಾ, ಸ್ನೇಹಾ, ಐಪಿಎಸ್‌ ಅಧಿಕಾರಿಗಳು ಮಾನವಿಯತೆ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣವನ್ನೂ ಹೀಗೂ ಬಳಸಬಹುದೆಂಬುದಕ್ಕೆ ಇದು ಒಂದು ಉತ್ತಮ ನಿದರ್ಶನ.

-ಶಿವಾನಂದ, ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next