ಬೆಂಗಳೂರು: ಅನ್ನಭಾಗ್ಯ ಯೋಜನೆ ಯಡಿ ಬಿಪಿಎಲ್ ಕಾರ್ಡ್‌ದಾರರಿಗೆ ಆಹಾರ ಧಾನ್ಯಗಳ ಜತೆ ಬೇಳೆಕಾಳು ನೀಡುವ ರಾಜ್ಯದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಫೆಬ್ರವರಿಯಿಂದಲೇ ಜಾರಿಯಾಗಲಿದ್ದು, ಮೊದಲ 3 ತಿಂಗಳು ಹೆಸರುಕಾಳು ಆ ನಂತರ ತೊಗರಿಬೇಳೆ ದೊರೆಯಲಿದೆ.
ಹೆಸರುಕಾಳು ಪ್ರತಿ ಕೇಜಿಗೆ 33 ರೂ, ತೊಗರಿಬೇಳೆ 40 ರೂ. ದರದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ನೀಡಲಾಗುವುದು. ಒಂದು ಕುಟುಂಬಕ್ಕೆ ಒಂದು ಕೇಜಿ ದೊರೆಯಲಿದೆ. ಕ್ರಮವಾಗಿ 3 ತಿಂಗಳು ಹೆಸರು ಕಾಳು, ಮೂರು ತಿಂಗಳು ತೊಗರಿಬೇಳೆಯಂತೆ ವರ್ಷವಿಡೀ ನೀಡಲಾಗುವುದು. ಬಿಪಿಎಲ್ ಪಡಿತರ ಕಾರ್ಡ್‌ಗಳಿಗೆ ಬೇಳೆಕಾಳು ವಿತರಣೆ ಹಾಗೂ ಆನ್‌ಲೈನ್‌ನಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಮಂಗಳವಾರ ವಿಧಾನಸೌಧದ ಬಾಂಕ್ವೆಂಟ್ ಸಭಾಂಗಣದಲ್ಲಿ ಚಾಲನೆ ನೀಡಲಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಹಾರ ಸಚಿವ ಯು.ಟಿ. ಖಾದರ್, ಬಿಪಿಎಲ್ ಪಡಿತರ ಚೀಟಿ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ, ಸಬ್ಸಿಡಿ ದರದಲ್ಲಿ ಹೆಸರುಕಾಳು ನೀಡುವ, ಮುಕ್ತ ಮಾರುಕಟ್ಟೆಯಲ್ಲಿ ಬಿಳಿ ಸೀಮೆಎಣ್ಣೆ ಮಾರಾಟ ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲೇ ಕೂಪನ್ ವಿತರಣೆ ಯೋಜನೆಯನ್ನು ಮುಖ್ಯ ಮಂತ್ರಿಯವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಬಿಪಿಎಲ್ ಪಡಿತರ ಚೀಟಿ ವಿತರಣೆಯಲ್ಲಿನ ಅನಗತ್ಯ ವಿಳಂಬ ತಪ್ಪಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲಿದ್ದು, ಅರ್ಜಿ ಸಲ್ಲಿಸಿದ 25 ದಿನಗಳೊಳಗಾಗಿ ಪರಿಶೀಲಿಸಿ, ಹೊಸ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಗ್ರಾಮ ಪಂಚಾಯಿತಿ, ಗ್ರಾಹಕರ ಸೇವಾ ಕೇಂದ್ರ, ನೆಮ್ಮದಿ ಕೇಂದ್ರ, ಪಾಲಿಕೆ ವ್ಯಾಪ್ತಿಯಲ್ಲಿನ ಬೆಂಗಳೂರು ಓನ್, ಕರ್ನಾಟಕ ಓನ್ ಕೇಂದ್ರಗಳಲ್ಲಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿಗಳಲ್ಲೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಆಹಾರ ಇಲಾಖೆ ಸಿದ್ದತೆ ನಡೆಸಿದೆ. ಪಡಿತರ ಕೂಪನ್ ಅನ್ನು ಇನ್ನೂ ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಪಡಿತರ ಬದಲಿಗೆ ನಗದು ನೀಡುವ ಸಂಬಂಧ ಇಲಾಖೆ ಅಗತ್ಯ ಸಾಫ್ಟ್ವೇರ್ ಸಿದ್ಧಪಡಿಸಿದೆ. ಆದರೆ, ಆ ಯೋಜನೆ ಜಾರಿಯ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲವೆಂದು ಸ್ಪಷ್ಟಣೆ ನೀಡಿದ ಅವರು, ಬೇಡಿಕೆ ಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ಚಿಂತನೆ ನಡೆಸಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಡಿತರ ಪ್ರಮಾಣ ಹೆಚ್ಚಳಕ್ಕೆ ಚಿಂತನೆ
ಯೂನಿಟ್‌ಗೆ ಪ್ರಸ್ತುತ ನೀಡುತ್ತಿರುವ ಪಡಿತರ ಪ್ರಮಾಣವನ್ನು 5 ರಿಂದ 8 ಕೇಜಿಗೆ ಹೆಚ್ಚಿಸುವ ಚಿಂತನೆ ಇದೆ. 1 ಯೂನಿಟ್‌ಗೆ 8 ಕೇಜಿ, ಎರಡಕ್ಕೆ 16 ಕೇಜಿ ಮತ್ತು ಮೂರು ಯೂನಿಟ್‌ಗೆ 24 ಕೇಜಿ ಪಡಿತರ ನೀಡುವ ಸಂಬಂಧ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಿಎಂ ಜತೆಗೆ ಚರ್ಚಿಸಲಾಗುವುದು. ನ್ಯಾಯಬೆಲೆ ಅಂಗಡಿಗಳಿಂದ ಪ್ರತಿ ತಿಂಗಳ ವಿತರಣೆ ಮತ್ತು ಉಳಿದ ದಾಸ್ತಾನಿನ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದ ಕಾರಣ ಜನವರಿ ತಿಂಗಳ ಪಡಿತರ ವಿತರಣೆಯಲ್ಲಿ ವ್ಯತ್ಯಯವಾಗಿದ್ದು ಫೆ.5ರ ವರೆಗೆ ಪಡಿತರ ವಿತರಣೆಗೆ ಸೂಚಿಸಲಾಗಿದೆ. ಫೆಬ್ರವರಿ ತಿಂಗಳ ಪಡಿತರ ವಿತರಣೆ 10ರಿಂದ ಆರಂಭಿಸಲಾಗುವುದು.
-ಯು.ಟಿ.ಖಾದರ್, ಆಹಾರ ಸಚಿವ