ತಿ.ನರಸೀಪುರ: ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿರುವ ಮಹಿಳೆಯರು ಆರ್ಥಿಕತೆಯಲ್ಲಿ ಮುಂದಡಿಯನ್ನಿಟ್ಟು ಸಾಮಾಜಿಕವಾಗಿಯೂ ಸ್ವಾವಲಂಬಿ ಗಳಾಗುತ್ತಿದ್ದಾರೆ ಎಂದು ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕುಕ್ಕೂರು ಗಣೇಶ್ ಹೇಳಿದರು.
ಪಟ್ಟಣದ ನಂಜನಗೂಡು ರಸ್ತೆಯ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಬದಲಾದಂತೆ ಮಹಿಳೆಯರ ಸಾಮಾಜಿಕ ಬದುಕು ಬದಲಾಗುತ್ತಿದೆ. ಗೃಹಿಣಿಯಾಗಿದ್ದ ಮಹಿಳೆ ಸಂಘಟಿತರಾಗಿದ್ದರಿಂದ ಪುರುಷರಿಗಿಂತಲೂ ಆರ್ಥಿಕ ಪ್ರಗತಿಯಲ್ಲಿ ಸ್ಥಿರತೆ ಸಾಧಿಸಿದ್ದಾರೆ ಎಂದರು.
ಹುಟ್ಟುವ ಪ್ರತಿಯೊಂದು ಮಗುವಿಗೆ ಮೊದಲ ಪಾಠಶಾಲೆಯಾದ ಮನೆಯಲ್ಲಿ ತಾಯಿಯೇ ಮೊದಲ ಗುರುವಾದರೆ, ಬಾಲ್ಯದಲ್ಲಿದ್ದಾಗ ಅಂಗನವಾಡಿ ಕೇಂದ್ರಗಳಲ್ಲಿರುವ ಕಾರ್ಯಕರ್ತೆಯರು ಎರಡನೇ ಗುರುವಾಗಿರುತ್ತಾರೆ. ಅಲ್ಲದೇ ಈಗಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಯನ್ನು ಮಹಿಳೆಯರು ಪಡೆಯುತ್ತಿರುವುದ ರಿಂದ ಮಹಿಳೆ ಮಾತೆಯಲ್ಲದೆ ಗುರು ಕೂಡ ಆಗುತ್ತಿದ್ದಾಳೆ ಎಂದು ಬಣ್ಣಿಸಿದರು.
ವಕೀಲರ ಸಂಘದ ಅಧ್ಯಕ್ಷ ಜಿ.ರಶಂಕರ್ ಮಾತನಾಡಿ, ಕಾನೂನಿನ ರಕ್ಷಣೆ ಸಿಗುತ್ತಿರುವುದರಿಂದ ಮಹಿಯರು ಮೇಲಿನ ದೌರ್ಜನ್ಯಗಳು ಕ್ಷಿಣಿಸಿವೆ. ಹೆಣ್ಣು ಮಕ್ಕಳಿಗೆ ತಾತ್ಸಾರ ಮಾಡದೆ ಶಿಕ್ಷಣವನ್ನು ನೀಡಿದ್ದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮರ್ಥಳಾಗಿ ಉತ್ತಮ ಕೆಲಸವನ್ನು ನಿರ್ವಸಹಿಲಿದ್ದಾರೆ ಎಂದು ತಿಳಿಸಿದರು.
ತಾಪಂ ಸದಸ್ಯರಾದ ಎಂ.ರಮೇಶ್, ರಾಮಲಿಂಗಯ್ಯ, ಎಚ್.ಜವರಯ್ಯ, ಎಂ.ಚಂದ್ರಶೇಖರ, ರತ್ನರಾಜ್, ಪುರಸಭಾ ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಆರ್.ನಾಗರಾಜು, ಎಲ್.ಮಂಜುನಾಥ್, ಸರ್ಕಾರಿ ಸಹಾಯಕ ಅಭಿಯೋಜಕ ರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ವೆಂಕಟಪ್ಪ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷ ಪಿ.ಎಂ.ಸರೋಜಮ್ಮ, ಉಪಾಧ್ಯಕ್ಷೆ ಮಹದೇವಮ್ಮ, ಒಕ್ಕೂಟದ ಅಧ್ಯಕ್ಷೆ ಪ್ರೇಮಕುಮಾರಿ, ಉಪನ್ಯಾಸಕಿ ಅನಿತಾ ಇತರರಿದ್ದರು.