ಚಿಕ್ಕಬಳ್ಳಾಪುರ: ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಮತದಾರರಿಗೆ ಸೀರೆ, ಮದ್ಯ, ಹಣ ನೀಡುವ ಮಾಫಿಯಾ ರಾಜಕಾರಣಿಗಳಿಗೆ ಮತ ಹಾಕದೇ ಸಾರ್ವಜನಿಕರ ಸಮಸ್ಯೆಗಳನ್ನು ವಿಧಾನಸಭೆ ಕಲಾಪಗಳಲ್ಲಿ ಚರ್ಚೆ ಮಾಡುವಂತಹ ವ್ಯಕ್ತಿಯನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಬಿಎಸ್ಪಿಗೆ ಮತ ನೀಡುವಂತೆ ಬಿಎಸ್ಪಿ ಅಭ್ಯರ್ಥಿ ದೇವನಹಳ್ಳಿ ಡಿ.ಆರ್.ನಾರಾಯಣಸ್ವಾಮಿ ಮನವಿ ಮಾಡಿದರು.
ತಾಲೂಕಿನ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಭಾನುವಾರ ಉಪಚುನಾವಣೆ ಹಿನ್ನೆಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಉಪ ಚುನಾವಣೆಯಲ್ಲಿ ಮತದಾರರು ಹಣ, ಆಮಿಷಕ್ಕೆ ಒಳಗಾಗದೆ ಕ್ಷೇತ್ರದ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಸೂಕ್ತ ವ್ಯಕ್ತಿಗೆ ಮತದಾನ ಮಾಡಿ ಎಂದರು. ಅನರ್ಹ ಶಾಸಕರು ವ್ಯಾಪಾರದ ದೃಷ್ಟಿಯಿಂದ ಅಲೋಚನೆ ಮಾಡುತ್ತಾರೆ. ವಿನಾಃ ಸಾರ್ವಜನಿಕರ ಕುಂದುಕೊರತೆ ಬಗ್ಗೆ ಕನಿಷ್ಠ ಆಸಕ್ತಿ ತೋರುತ್ತಿಲ್ಲ. ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಸುರಿದು ಮತ ಗಳಿಸಿದ ನಂತರ ಯಾರೂ ಅವರನ್ನು ಪ್ರಶ್ನಿಸುವಂತಿಲ್ಲ ಎಂದರು.
ಸಹೋದರತೆ ಸಿದ್ಧಾಂತ: ಸತತ ಬರಗಾಲಕ್ಕೆ ತುತ್ತಾಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ, ಶಾಶ್ವತ ಕುಡಿಯುವ ನೀರಾವರಿ ಯೋಜನೆ ಜಾರಿ ಮತ್ತು ಎಲ್ಲಾ ಸಮಾಜದ ಬಂಧುಗಳನ್ನು ಸಹೋದರತೆಯ ಸಿದ್ಧಾಂತದ ಮೇಲೆ ಒಂದುಗೂಡಿಸಿ ಸಮ ಸಮಾಜ ನಿರ್ಮಿಸುವ ಉದ್ದೇಶ ಹೊಂದಿರುವ ಏಕೈಕ ಪಕ್ಷ ಬಿಎಸ್ಪಿ. ಈ ಬಾರಿ ಜನರು ಬಿಎಸ್ಪಿ ಪಕ್ಷಕ್ಕೆ ಆದ್ಯತೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳಿಗಿಂತ ಬಿಎಸ್ಪಿ ಅಭ್ಯರ್ಥಿಯನ್ನು ಎಲ್ಲಾ ಸಮುದಾಯ ಜನ ಬೆಂಬಲಿಸಲಿದ್ದಾರೆ.
ಕ್ಷೇತ್ರದ ಜನತೆ ಬಿಜೆಪಿ ಮತ್ತು ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿದ್ದಾರೆ ಎಂದರು. ಪ್ರಚಾರ ಸಭೆಯಲ್ಲಿ ಬಿಎಸ್ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಪಿ.ವಿ.ನಾಗಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಅಪ್ಸರ್ ಪಾಷಾ, ಉಪಾಧ್ಯಕ್ಷರಾದ ಬಾಗೇಪಲ್ಲಿ ವೆಂಕಟೆಶ್, ದೇವಪ್ಪ, ಜಿಲ್ಲಾ ಸಂಯೋಜಕ ಎಂ.ಮುನಿಕೃಷ್ಣಯ್ಯ, ಕಾರ್ಯದರ್ಶಿ ಕೆ. ಮೂರ್ತಿ, ಕಾರ್ಯಕರ್ತರಾದ ಬಾಲಕೃಷ್ಣ, ಹರೀಶ, ತಮಟೆ ಮೂರ್ತಿ, ಮೂರ್ತಿ, ಬಾಲಕೃಷ್ಣಪ್ಪ, ಮಂಜುನಾಥ, ಶಿವಪ್ಪ ಉಪಸ್ಥಿತರಿದ್ದರು.
ಚಿಕ್ಕಬಳ್ಳಾಪುರ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸುಳ್ಳು ಭರವಸೆಗಳನ್ನು ನೋಡಿ ಕ್ಷೇತ್ರದ ಜನ ಮೋಸ ಹೋಗಿದ್ದಾರೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳು ಈ ಬಾರಿ ಬಿಎಸ್ಪಿಯನ್ನು ಬೆಂಬಲಿಸಲಿದ್ದಾರೆ. ಈ ಬಾರಿ ಬಿಎಸ್ಪಿ ಅಭ್ಯರ್ಥಿ ಗೆಲುವು ಖಚಿತ.
-ಡಿ.ಆರ್.ನಾರಾಯಣಸ್ವಾಮಿ, ಬಿಎಸ್ಪಿ ಅಭ್ಯರ್ಥಿ