Advertisement

ಮರಳು ಸಮಸ್ಯೆಗೆ ಒಂದೆರಡು ದಿನಗಳಲ್ಲಿ ಕ್ರಮ: ಡಾ|ಜಯಮಾಲಾ

12:30 AM Mar 07, 2019 | |

ಉಡುಪಿ: ಶೀಘ್ರದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಒಂದೆರಡು ದಿನಗಳಲ್ಲಿ ಮರಳು ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿ ಕ್ರಮ ಜರಗಿಸುವರು ಎಂದು ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದರು

Advertisement

ಬುಧವಾರ ತ್ತೈಮಾಸಿಕ ಕೆಡಿಪಿ ಸಭೆ ಬಳಿಕ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿಆರ್‌ಝಡ್‌ ವ್ಯಾಪ್ತಿಯ 8 ದಿಬ್ಬಗಳಲ್ಲಿ ಮರಳು ಗಾರಿಕೆಗೆ ಅನುಮೋದನೆ ಪಡೆಯಲಾಗಿದೆ. ಜಿಲ್ಲಾ ಸಮಿತಿ ಸಭೆ ಸೇರಿ ನಿರ್ಣಯ ತಳೆಯಲಿದೆ. ನಾನ್‌ಸಿಆರ್‌ಝಡ್‌ ವ್ಯಾಪ್ತಿಯ 30 ಬ್ಲಾಕ್‌ಗಳಲ್ಲಿ ಏಳರ ಮರಳನ್ನು ಸರಕಾರಿ ಯೋಜನೆಗಳಿಗೆ ಬಳಸಲಾಗುವುದು. 23 ದಿಬ್ಬಗಳ ಹರಾಜು ಪ್ರಕ್ರಿಯೆಯಲ್ಲಿದೆ. ಮಳೆಗಾಲದೊಳಗೆ ಮರಳು ಖಾಲಿಯಾಗಬೇಕು. ಮರಳು ದಾಸ್ತಾನು, ದರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅರ್ಹರಿಗೆ ಮರಳು ಸಿಗಬೇಕೆಂದು ಚರ್ಚೆಯಾಗಿದೆ ಎಂದರು. 

ಸಿಆರ್‌ಝಡ್‌ ಮರಳುಗಾರಿಕೆ ಕುರಿತು ಸಭೆ ಕರೆಯುತ್ತೇವೆ. ನಾನ್‌ ಸಿಆರ್‌ಝಡ್‌ ವ್ಯಾಪ್ತಿ ಮರಳುಗಾರಿಕೆಗೆ ಲೈವ್‌ ಬಿಡ್‌ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಅಡಿಕೆ ರೋಗಕ್ಕೆ ಪರಿಹಾರ
ಅಡಿಕೆ ಕೊಳೆ ರೋಗಕ್ಕೆ ಸಂಬಂಧಿಸಿ 6,253 ಬೆಳೆಗಾರರಿಗೆ ಪರಿಹಾರ ನೀಡಲಾಗಿದೆ. ಬೇಸಗೆ ಬರುವ ಕಾರಣ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕೂಡಲೇ ಕಾರ್ಯಪಡೆ ಸಭೆ ನಡೆಸಲು ಸೂಚಿಸಿದ್ದೇವೆ. ಸಣ್ಣ ನೀರಾವರಿ ಇಲಾಖೆಯಿಂದ 19 ಕಿಂಡಿ ಅಣೆಕಟ್ಟುಗಳು ಪೂರ್ಣಗೊಂಡಿವೆ. ಎಂಟು ಪ್ರಗತಿಯಲ್ಲಿವೆ. ಕುಂದಾಪುರದ ಆಸ್ಪತ್ರೆಯಲ್ಲಿ ಡಯಲಿಸಿಸ್‌ ಯಂತ್ರ ಕೆಟ್ಟಿದ್ದು ದುರಸ್ತಿಗೆ ಸೂಚಿಸಿದ್ದೇವೆ ಎಂದರು. 

ಥೀಂ ಪಾರ್ಕ್‌ಗೆ 50 ಎಕ್ರೆ ಮೀಸಲು
ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್‌ಗೆ 50 ಎಕರೆ ಜಮೀನು ಮೀಸಲಿಡಲು ನಿರ್ಣ ಯಿಸಲಾಗಿದೆ. ಹಿಂದೆ ಇಲ್ಲಿ ತೋಟಗಾರಿಕಾ ಇಲಾಖೆಯ 110 ಎಕ್ರೆ ಜಾಗವಿತ್ತು. ಈಗ ಬೇರೆ ಬೇರೆ ಇಲಾಖೆಗಳಿಗೆ ಕೊಡುತ್ತ ಕಡಿಮೆಯಾಗಿದೆ. ಮಕ್ಕಳಿಗಾಗಿ ಟಾಯ್‌ ಟ್ರೈನ್‌ ಯೋಜನೆ ಜಾರಿಗೊಳಿಸಲು ಅಲ್ಲೇ ಪಕ್ಕದಲ್ಲಿ 15 ಎಕ್ರೆ ಮೀಸಲು ಇರಿಸಲು ತಿಳಿಸಿದ್ದೇವೆ. ಇಲ್ಲಿಯೇ ಬುಕ್‌ ಪಾರ್ಕ್‌, ಸೌಂಡ್‌ ಆ್ಯಂಡ್‌ ಲೈಟ್‌ ವ್ಯವಸ್ಥೆ ಮಾಡಲಾಗುವುದು. ಫ‌ುಡ್‌ಕೋರ್ಟ್‌, ಶೌಚಾಲಯದಂತಹ ಮೂಲಸೌಕರ್ಯ ಒದಗಿಸಿ ಪ್ರವಾಸೋದ್ಯಮ ಆಕರ್ಷಣೆಗೆ ಕ್ರಮ ಜರಗಿಸಲಾಗುವುದು ಎಂದರು.

Advertisement

ಎಂಡೋ: ಕುಂದಾಪುರದಲ್ಲಿ ಸಭೆ
ಎಂಡೋಸಲ್ಫಾನ್‌ ಸಮಸ್ಯೆ ಕುರಿತು ದ.ಕ., ಉಡುಪಿ, ಉ.ಕ., ಕಾಸರಗೋಡು ಜಿಲ್ಲೆಯ ಜಂಟಿ ಸಭೆ ನಡೆಸಲಾಗುವುದು. ವಿಜ್ಞಾನಿಗಳಿಂದ ಪುನಃ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ತಪ್ಪಿತಸ್ಥ ಕಂಪೆನಿಗೆ ದಂಡ ಹಾಕುವುದೂ ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು. ಕುಂದಾಪುರ ತಾಲೂಕಿನಲ್ಲಿ ಇನ್ನೂ ಅನೇಕ ಸಂತ್ರಸ್ತರಿದ್ದಾರೆ. ಆರೋಗ್ಯ ಇಲಾಖೆಯ ಅಸಡ್ಡೆಯಿಂದ ಅವರು ಪ್ಯಾಕೇಜ್‌ಗೆ ಒಳಪಟ್ಟಿಲ್ಲ ಎಂದು ಸುದ್ದಿಗಾರರು ತಿಳಿಸಿದಾಗ “ಕುಂದಾಪುರದಲ್ಲಿಯೂ ಸಭೆ ಕರೆಯುತ್ತೇನೆ’ ಎಂದರು. 

ದಮನಿತ ಮಹಿಳೆಯರಿಗೆ ನೆರವು ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ದಮನಿತ ಮಹಿಳೆಯರ ಪುನರ್ವಸತಿ ಕೋಶ ತೆರೆಯ ಲಾಗಿದೆ. 11.5 ಕೋ.ರೂ. ಬಿಡುಗಡೆಯಾಗಿದೆ. ಇಂತಹ ಕಾರ್ಯಕ್ರಮ ದೇಶದಲ್ಲಿಯೇ ಪ್ರಥಮ. ರಾಜ್ಯದಲ್ಲಿ ಒಂದು ಲಕ್ಷ ದಮನಿತ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಇಂತಹ ಸಂತ್ರಸ್ತರಿಗಾಗಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ನಡೆಸಲಾಗುವುದು ಎಂದರು.

ಸಕ್ಕರೆ ಮಂತ್ರಿ ಜತೆ ಸಭೆ
ಸಕ್ಕರೆ ಕಾರ್ಖಾನೆ ಬಗ್ಗೆ ಸುದ್ದಿಗಾರರು ಕೇಳಿದಾಗ “ಸಕ್ಕರೆ ಕಾರ್ಖಾನೆ ಕುರಿತು ಸಭೆ ನಡೆಯುತ್ತಲೇ ಇರುತ್ತದೆ. ಸಕ್ಕರೆ ಮಂತ್ರಿಯವರು ಮಾ. 10ರೊಳಗೆ ರಾಜ್ಯ ಮಟ್ಟದ ಸಭೆ ನಡೆಸಬೇಕೆಂದು ಹೇಳಿದ್ದರು. ಈಗ ಆಗುವುದು ಕಷ್ಟ. 10-15 ದಿನಗಳಲ್ಲಿ ಸಭೆ ನಡೆಯುತ್ತದೆ’ ಎಂದರು.

ರಾ.ಹೆ. ಸರ್ವಿಸ್‌ ರಸ್ತೆ ಬೇಡಿಕೆ
ರಾಷ್ಟ್ರೀಯ ಹೆದ್ದಾರಿಯಲ್ಲಿ 11 ಹೊಸ ಸರ್ವಿಸ್‌ ರಸ್ತೆ ಬೇಕೆಂದು ಶಿಫಾರಸು ಮಾಡಿದ್ದೆವು. ಅದನ್ನು ತುರ್ತಾಗಿ ನಿರ್ವಹಿಸಲು ಸಭೆ ಸೂಚಿಸಿದೆ. ಹಿಂ.ವರ್ಗ ಮತ್ತು ಅಲ್ಪಸಂಖ್ಯಾಕರ ನಿಗಮ ದಿಂದ ಗಂಗಾ ಕಲ್ಯಾಣ ಯೋಜನೆಯಡಿಯ ಬೋರ್‌ವೆಲ್‌, ಬಾವಿ, ಬೋರ್‌ವೆಲ್‌ಗ‌ಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಭೆ ನಿರ್ಧರಿಸಿತು ಎಂದು ಜಯಮಾಲಾ ಹೇಳಿದರು. 

ಕೆಡಿಪಿ ಸಭೆಯಲ್ಲಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನಿಲ್‌ ಕುಮಾರ್‌, ಲಾಲಾಜಿ ಮೆಂಡನ್‌, ಜಿ.ಪಂ. ಅಧ್ಯಕ್ಷ  ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಒ ಸಿಂಧು ರೂಪೇಶ್‌, ಎಸ್‌ಪಿ ನಿಶಾ ಜೇಮ್ಸ್‌ ಉಪಸ್ಥಿತರಿದ್ದರು.

ಬಜೆ ಕೃಷಿ ಸಮಸ್ಯೆ:ಚರ್ಚೆ ಆಗ್ಲಿಲ್ವಲ್ಲ !
ಬಜೆ ಅಣೆಕಟ್ಟು ಪ್ರದೇಶದ ಕೃಷಿಕರಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಪ್ರತಿಭಟನೆ ನಡೆದಿದೆ. ಇದರ ಬಗ್ಗೆ ಏನು ನಿರ್ಣಯವಾಯಿತು ಎಂದು ಸಚಿವರನ್ನು ಕೇಳಿದರೆ “ಇದರ ಬಗ್ಗೆ ಚರ್ಚೆಯೇ ಆಗ್ಲಿಲ್ವಲ್ಲ? ನೀವೀಗ ಗಮನಕ್ಕೆ ತಂದಿದ್ದೀರಲ್ಲ. ಗಮನ ಹರಿಸ್ತೇವೆ. ಜಿಲ್ಲಾಧಿಕಾರಿಯವರಿಗೆ ಹೇಳಿದ್ರೂ ಆಗತ್ತೆ. ಹೇಳ್ತೀನಿ ಬಿಡ್ರಿ’ ಎಂದರು. ಇದಕ್ಕೂ ಮುನ್ನ ಶಾಸಕ ಲಾಲಾಜಿ ಮೆಂಡನ್‌ ಅವರು “ಬಜೆ ಬಗ್ಗೆ ಚರ್ಚೆಯಾಗಿದೆ. ಏನೂ ಕ್ರಮ ಕೈಗೊಂಡಿಲ್ಲ. ಇದರಿಂದ ಕುರ್ಕಾಲು ಅಣೆಕಟ್ಟು ಕಾಮಗಾರಿಗೂ ತಡೆಯಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next