ಇಸ್ಲಾಮಾಬಾದ್: ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ವಿಪಕ್ಷಗಳ ಆರೋಪದ ನಡುವೆಯೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ:ಸಂಸತ್ ಕಲಾಪಕ್ಕೆ ಅಡ್ಡಿ: ಕಾಂಗ್ರೆಸ್ ಪಕ್ಷದ ಮುಖವಾಡ ಬಯಲುಗೊಳಿಸಿ: ಸಂಸದರಿಗೆ ಮೋದಿ
ಪಾಕಿಸ್ತಾನ ಅಕ್ರಮಿತ ಕಾಶ್ಮೀರ ವಿಧಾನಸಭೆಯಲ್ಲಿ ಒಟ್ಟು 53 ಸದಸ್ಯರನ್ನೊಳಗೊಂಡಿದ್ದು, ಇದರಲ್ಲಿ 45 ಸದಸ್ಯರನ್ನು ಮಾತ್ರ ನೇರವಾಗಿ ಆಯ್ಕೆಯಾಗುತ್ತಾರೆ. ಒಟ್ಟು 45 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಪ್ ಪಕ್ಷ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ್ ಪೀಪಲ್ಸ್ ಪಕ್ಷ 11 ಸ್ಥಾನದಲ್ಲಿ, ಪಾಕಿಸ್ತಾನ್ ಮುಸ್ಲಿಮ್ ಲೀಗ್ ಆರು ಕ್ಷೇತ್ರಗಳಲ್ಲಿ, ಉಳಿದ ಕ್ಷೇತ್ರದಲ್ಲಿ ಪ್ರಾದೇಶಿಕ ಪಕ್ಷ ಜಯ ಸಾಧಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಕೋಟ್ಲಿ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಹೊರತುಪಡಿಸಿ, ಇನ್ನುಳಿದಂತೆ ಶಾಂತಿಯುತವಾಗಿ ಚುನಾವಣೆ ನಡೆದಿತ್ತು ಎಂದು ವರದಿ ತಿಳಿಸಿದೆ. ನಾವು ಮುಕ್ತವಾಗಿ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿದ್ದೇವೆ ಎಂದು ಪಾಕ್ ಸರ್ಕಾರ ಹೇಳಿರುವುದಾಗಿ ಡಾನ್ ವರದಿ ವಿವರಿಸಿದೆ.
ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಾವಿರಾರು ಮಂದಿ ಪಾಕಿಸ್ತಾನ ಸೇನೆ ವಿರುದ್ಧ ಬೀದಿಯಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.