Advertisement
ಸಿಬಂದಿಗೆ ವೇತನ ಕೊಡಲೂ ಆಗದ ಪರಿಸ್ಥಿತಿಗೆ ಪಾಕಿಸ್ಥಾನ ಬಂದಿರುವುದಂತೂ ನಿಚ್ಚಳವಾಗಿದೆ. ಇದರ ಜತೆಗೆ ದೇಶದ ಬೇಡಿಕೆಗಳನ್ನು ಈಡೇರಿಸಬೇಕಾದರೆ 2021ರಿಂದ 2023ರ ಅವಧಿಯಲ್ಲಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಸುಮಾರು 51 ಬಿಲಿಯನ್ ಡಾಲರ್ ಸಾಲ ತರಬೇಕು. ವಿಶೇಷವೆಂದರೆ ಸದ್ಯ ಪಾಕಿಸ್ಥಾನಕ್ಕೆ ಸಾಲ ಕೊಡಲು ಜಗತ್ತಿನ ಯಾವುದೇ ಹಣಕಾಸು ಸಂಸ್ಥೆಗಳು ಮುಂದೆ ಬರುತ್ತಿಲ್ಲ!
ಇತ್ತೀಚೆಗಷ್ಟೇ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು, ಜನಪರ ಯೋಜನೆಗಳಿಗಾಗಿ ನಮ್ಮಲ್ಲಿ ಹಣವೇ ಇಲ್ಲ ಎಂದು ಹೇಳುವ ಮೂಲಕ ದೇಶದ ಆರ್ಥಿಕ ದುಃಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದರು. ವಿದೇಶಿ ಸಾಲ ದುಪ್ಪಟ್ಟಾಗಿದ್ದು, ದೇಶದಲ್ಲಿ ಸರಿಯಾಗಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಇದು ಒಂದು ರೀತಿಯ ರಾಷ್ಟ್ರೀಯ ಭದ್ರತೆಯ ವಿಚಾರವಾದಂತೆ ಆಗಿದೆ. ಹೀಗಾಗಿ ಜನರ ಕಲ್ಯಾಣಕ್ಕಾಗಿ ಹಣ ವೆಚ್ಚ ಮಾಡಲೂ ಸಾಧ್ಯವಾಗುತ್ತಿಲ್ಲ. ವಿದೇಶದಿಂದ ಸಾಲ ತರಲು ಪ್ರಯತ್ನ ನಡೆಯುತ್ತಿದೆ ಎಂದಿದ್ದರು. ಹೆಚ್ಚುತ್ತಲೇ ಇದೆ ಹಣದುಬ್ಬರ
ದೇಶದಲ್ಲಿ ಹಣದುಬ್ಬರದ ಪ್ರಮಾಣ ಹೆಚ್ಚಾಗುತ್ತಿದೆ. ಏಷ್ಯಾದಲ್ಲೇ ಅತ್ಯಂತ ಹೆಚ್ಚು ಹಣದುಬ್ಬರವಿರುವುದು ಪಾಕಿಸ್ಥಾನದಲ್ಲಿ. ಇಲ್ಲಿ ಶೇ.8.9ರಷ್ಟು ಹಣದುಬ್ಬರವಿದೆ. ಹೀಗಾಗಿ ತೈಲೋತ್ಪನ್ನಗಳಿಂದ ಹಿಡಿದು, ಸೋಪ್‌ನ ವರೆಗೆ ಎಲ್ಲ ವಸ್ತುಗಳ ದರ ಏರಿಕೆಯಾಗುತ್ತಿದೆ. 2018ರಲ್ಲಿ ಶೇ.4.7, 2019ರಲ್ಲಿ ಶೇ.6.8, 2020ರಲ್ಲಿ ಶೇ.10.7, 2021ರಲ್ಲಿ ಶೇ.8.9 ಮತ್ತು 2022ರಲ್ಲಿ ಶೇ.7.5 ಹಣದುಬ್ಬರ ಪ್ರಮಾಣ ಇದೆ. ಇಲ್ಲಿ ಆರ್ಥಿಕ ವರ್ಷ ಶೇ.8.9ರಷ್ಟು ಹಣದುಬ್ಬರ ಪ್ರಮಾಣವಿದೆ. ಮಧ್ಯಮ ವರ್ಗವಂತೂ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದಾರೆ. ಇದರ ನಡುವೆಯೇ ಪ್ರಧಾನಿ ಇಮ್ರಾನ್ ಖಾನ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಲು ಅವಕಾಶ ಮಾಡಿಕೊಡಿ. ಭಾರತ, ಬಾಂಗ್ಲಾ, ನೇಪಾಲಕ್ಕೆ ಹೋಲಿಕೆ ಮಾಡಿದರೆ, ನಮ್ಮಲ್ಲೇ ಪೆಟ್ರೋಲ್‌ಗೆ ಕಡಿಮೆ ದರವಿದೆ. ಆರ್ಥಿಕತೆ ಸರಿಹೋಗಬೇಕು ಎಂದಾದರೆ, ತೈಲೋತ್ಪನ್ನಗಳ ದರ ಹೆಚ್ಚಿಸುವುದೊಂದೇ ಇರುವ ಮಾರ್ಗ ಎಂದು ಹೇಳಿದ್ದಾರೆ.
Related Articles
Advertisement
ಸುಳ್ಳಾಯಿತೇ ನಯಾ ಪಾಕಿಸ್ಥಾನ? ಈಗ ಪಾಕಿಸ್ಥಾನದ ಜನರಲ್ಲಿ ಇಮ್ರಾನ್ ಖಾನ್ ಹುಟ್ಟಿಸಿದ್ದ ನಯಾ ಪಾಕಿಸ್ಥಾನದ ಕಲ್ಪನೆಯೇ ಮರೆಯಾಗಿದೆ. ಆರ್ಥಿಕತೆ ತೀವ್ರರೀತಿಯಲ್ಲಿ ಕುಸಿದಿರುವುದು ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಮುಖೀ ಯಾಗಿರುವುದು ಜನರಿಗೆ ತೀರಾ ಬೇಸರ ಹುಟ್ಟಿಸಿದೆ. 2018ರ ಚುನಾವಣೆಗೂ ಮುನ್ನ ಇಮ್ರಾನ್ ಅವರ ನಯಾ ಪಾಕಿಸ್ಥಾನದ ಮಾತುಗಳನ್ನು ನಂಬಿ ಮತ ಹಾಕಿದ್ದ ಜನತೆಯಲ್ಲಿ ಭ್ರಮನಿರಸನ ಉಂಟಾಗಿದೆ. ಅಷ್ಟೇ ಅಲ್ಲ, ಈ ನಯಾ ಪಾಕಿಸ್ಥಾನವೆಂದರೆ, ಸಿಬಂದಿಗೆ ವೇತನ ಕೊಡದೇ ಇರುವುದಾ ಎಂದು ಸೆರ್ಬಿಯಾ ದೇಶದ ಪಾಕ್ ರಾಯಭಾರ ಕಚೇರಿಯ ಸಿಬಂದಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಕುಸಿಯುತ್ತಿರುವ ಜಿಡಿಪಿ
2018ರಲ್ಲಿ ಪಾಕಿಸ್ಥಾನದ ಜಿಡಿಪಿ ಶೇ.5.8ರಷ್ಟಿತ್ತು. ವರ್ಷದ ನಂತರ ಇದು ಶೇ.0.99ರಷ್ಟು ಇಳಿಕೆಯಾಯಿತು. 2020ರಲ್ಲಿ ಇದು ಶೇ.0.33ಕ್ಕೆ ಇಳಿಕೆಯಾಯಿತು. ಇದರಿಂದಾಗಿಯೇ ವಿತ್ತೀಯ ಕೊರತೆ ಮತ್ತು ಕರೆಂಟ್ ಅಕೌಂಟ್‌ನಲ್ಲಿ ಭಾರೀ ಪ್ರಮಾಣದ ಕೊರತೆ ಕಾಣಿಸುತ್ತಿದೆ. ಸಾಮಾನ್ಯವಾಗಿ ಈ ಎರಡನ್ನು ರಫ್ತು ಮತ್ತು ಆಮದಿಗೆ ಬಳಸಿಕೊಳ್ಳಲಾಗುತ್ತದೆ. ರಕ್ಷಣೆಗೆ ಬಂದೀತೇ ಐಎಂಎಫ್?
ಸದ್ಯ ಆರ್ಥಿಕತೆಯ ರಕ್ಷಣೆಗಾಗಿ ಪಾಕಿಸ್ಥಾನ ಸರಕಾರ, ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಬಳಿ 6 ಬಿಲಿಯನ್ ಡಾಲರ್ ಅನ್ನು ಸಾಲದ ರೂಪದಲ್ಲಿ ಕೇಳಿದೆ. ಆದರೆ ಐಎಂಎಫ್ ಪಾಕಿಸ್ಥಾನದ ಮುಂದೆ ಕೆಲವೊಂದು ಷರತ್ತುಗಳನ್ನು ಇಟ್ಟಿದೆ. ಅಂದರೆ ಜಿಎಸ್‌ಟಿ ಸುಧಾರಣೆ ಮತ್ತು ಸಾರ್ವಜನಿಕ ಸಾಲವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಪ್ರಮುಖ ಷರತ್ತು ಇಡಲಾಗಿದೆ. ಈ ಬಗ್ಗೆ ಐಎಂಎಫ್ ಅಧಿಕಾರಿಗಳು ಮತ್ತು ಪಾಕಿಸ್ಥಾನದ ನಡುವೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ 1 ಬಿಲಿಯನ್ ಡಾಲರ್ ನೀಡುವ ಸಾಧ್ಯತೆ ಇದೆ. ಉಳಿದ ಹಣ ಅನಂತರದಲ್ಲಿ ಸಿಗುವ ಸಂಭವವಿದೆ. ಫಾರೆಕ್ಸ್ ಮತ್ತು ಕರೆನ್ಸಿ ಸಮಸ್ಯೆ
ಹೆಚ್ಚುತ್ತಿರುವ ಹಣದುಬ್ಬರ, ಕರೆಂಟ್ ಅಕೌಂಟ್ ಮತ್ತು ಟ್ರೇಡ್ ಡಿಫಿಸಿಟ್, ವಿದೇಶಿ ಮೀಸಲು ಕಡಿತ ಮತ್ತು ಅಮೆರಿಕದ ಡಾಲರ್ ವಿರುದ್ಧ ಕುಸಿಯುತ್ತಿರುವ ಪಾಕಿಸ್ಥಾನದ ರೂಪಾಯಿ. ಸದ್ಯ ಪಾಕಿಸ್ಥಾನ ಎದುರಿಸುತ್ತಿರುವ ಪ್ರಮುಖ ಸವಾಲುಗಳು ಇವು. ಹಣದುಬ್ಬರದ ಏರಿಕೆಯಿಂದಾಗಿ ಪಾಕಿಸ್ಥಾನದ 263 ಬಿಲಿಯನ್ ಡಾಲರ್ ಆರ್ಥಿಕತೆಗೆ ಪೆಟ್ಟಾಗಿದೆ. 2018ರ ಮೊದಲಿಗಿಂತಲೂ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಇನ್ನು ಪಾಕಿಸ್ಥಾನದಲ್ಲಿರುವ ವಿದೇಶಿ ಮೀಸಲು 22.773 ಬಿಲಿಯನ್ ಡಾಲರ್‌ನಷ್ಟಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ಥಾನ (ಕೇಂದ್ರ ಬ್ಯಾಂಕ್) ಹೇಳುವ ಪ್ರಕಾರ, ಇದರಲ್ಲಿ 16.254 ಬಿಲಿಯನ್ ಡಾಲರ್‌ನಷ್ಟು ವಿದೇಶಿ ಮೀಸಲನ್ನು ತನ್ನ ಬಳಿಯೇ ಇರಿಸಿಕೊಂಡಿದೆ. ವೇತನ ನೀಡಲೂ ಆಗುತ್ತಿಲ್ಲ
ಪಾಕಿಸ್ಥಾನದ ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಲೂ ಕಷ್ಟವಾಗಿದೆ. ಸೆರ್ಬಿಯಾದಲ್ಲಿರುವ ಪಾಕ್ ರಾಯಭಾರ ಕಚೇರಿ ಮತ್ತು ಅಮೆರಿಕದ ರಾಯಭಾರ ಕಚೇರಿಯ ಸಿಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ಸೆರ್ಬಿಯಾ ರಾಯಭಾರ ಕಚೇರಿ ಟ್ವಿಟರ್ ಅಕೌಂಟ್‌ನಲ್ಲಿ ಈ ಬಗ್ಗೆ ಗಮನ ಸೆಳೆದ ಮೇಲೆ ಇಡೀ ಜಗತ್ತಿಗೆ ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ಕುರಿತಂತೆ ಅರ್ಥವಾಗತೊಡಗಿದೆ. ವಿಶ್ವಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದಲೂ ಸಾಲವಿಲ್ಲ
ಪಾಕಿಸ್ಥಾನದ ಆರ್ಥಿಕ ದುಃಸ್ಥಿತಿಯಿಂದಾಗಿ ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಕೂಡ ಸಾಲ ನೀಡಲು ಒಪ್ಪಿಲ್ಲ. ಇಮ್ರಾನ್ ಖಾನ್ ನೇತೃತ್ವದ ಸರಕಾರ, ಸರಿಯಾಗಿ ಹಣಕಾಸು ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣ ನೀಡಿ ಸಾಲ ನೀಡಲು ನಿರಾಕರಿಸುತ್ತಿವೆ. ಆದರೆ ಈಗಾಗಲೇ ಇರುವ ಯೋಜನೆಗಳಿಗೆ ಸಾಲ ನೀಡುವುದನ್ನು ಮುಂದುವರಿಸುತ್ತೇವೆ ಎಂದು ಈ ಎರಡೂ ಬ್ಯಾಂಕ್‌ಗಳು ಹೇಳಿವೆ. ಸಾಲಕ್ಕೆ ಚೀನದಿಂದಲೂ ನಕಾರ
ಬಾಧ್ಯತೆಗಳ ಆಧಾರದ ಮೇಲೆ 3 ಬಿಲಿಯನ್ ಡಾಲರ್ ಸಾಲ ನೀಡುವಂತೆ ಪಾಕಿಸ್ಥಾನ, ಚೀನ ಮುಂದೆ ಮಂಡಿಯೂರಿದೆ. ಆದರೆ ಈಗಾಗಲೇ ಬಹಳಷ್ಟು ಪ್ರಮಾಣದ ಸಾಲ ನೀಡಿರುವ ಚೀನ ಕೂಡ ಈ ಬಾರಿ ಕೈಎತ್ತಿದೆ. ಸ್ವತಂತ್ರ ಇಂಧನ ಉತ್ಪಾದಕ ಸಂಸ್ಥೆ ನಿರ್ಮಾಣ ಮಾಡಿಕೊಂಡು ನಮಗೆ 3 ಬಿಲಿಯನ್ ಡಾಲರ್ ಸಾಲ ನೀಡಿ ಎಂಬುದು ಪಾಕ್‌ನ ಬೇಡಿಕೆ. ಆದರೆ ಚೀನ ಬ್ಯಾಂಕ್‌ಗಳು ಮಾತ್ರ ಮತ್ತೆ ಮತ್ತೆ ಸಾಲ ಕೊಡಲು ಸಾಧ್ಯವಿಲ್ಲ
ಎಂದು ಹೇಳಿವೆ. ಎರಡು ವರ್ಷಗಳಿಗೆ 51.6
ಬಿಲಿಯನ್ ಡಾಲರ್ ಬೇಕು
ಮುಂದಿನ ಎರಡು ವರ್ಷ ದೇಶದಲ್ಲಿ ಸರಕಾರ ನಡೆಸುವುದರಿಂದ ಹಿಡಿದು, ಜನರ ಕಲ್ಯಾಣಕ್ಕಾಗಿ ಸುಮಾರು 51 ಬಿಲಿಯನ್ ಡಾಲರ್ ಹಣ ಬೇಕು. ಅದರಲ್ಲೂ ಈ ಪ್ರಮಾಣದ ಹಣವನ್ನು ಹೊರಗಿನವರೇ ನೀಡಬೇಕು. ಈಗಾಗಲೇ ವಿಶ್ವಬ್ಯಾಂಕ್ ಮತ್ತು ಎಡಿಬಿ ಸಾಲ ನೀಡಲು ನಿರಾಕರಿಸಿರುವುದರಿಂದ ಅವುಗಳ ಬಾಗಿಲು ಬಂದ್ ಆಗಿದೆ. ಐಎಂಎಫ್ ಮಾತ್ರ 6 ಬಿಲಿಯನ್ ಡಾಲರ್ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸೌದಿ ಅರೆಬಿಯಾ ಸರಕಾರ, ಪಾಕಿಸ್ಥಾನ ಸರಕಾರದ ವಿರುದ್ಧದ ಸಿಟ್ಟನ್ನು ಕೊಂಚ ಕಡಿಮೆ ಮಾಡಿಕೊಂಡಿದ್ದು ಇದೂ 3 ಬಿಲಿಯನ್ ಡಾಲರ್ ಹಣ ನೀಡಲು ಒಪ್ಪಿದೆ. ಆದರೆ ಉಳಿದ ಹಣವನ್ನು ಎಲ್ಲಿಂದ ತರುವುದು ಎಂಬುದೇ ಪಾಕಿಸ್ಥಾನ ಸರಕಾರಕ್ಕೆ ಗೊತ್ತಾಗುತ್ತಿಲ್ಲ. ಪಾಕಿಸ್ಥಾನ ಮಾಧ್ಯಮ ವರದಿಗಳ ಪ್ರಕಾರ, 2021-22ಕ್ಕೆ 23.6 ಬಿಲಿಯನ್ ಡಾಲರ್ ಮತ್ತು 2022-23ಕ್ಕೆ 28 ಬಿಲಿಯನ್ ಡಾಲರ್ ಹಣ ಬೇಕು. ಈ ಹಣವನ್ನು ಯಾರು ಸಾಲದ ರೂಪದಲ್ಲಿ ನೀಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.