Advertisement

ಕ್ಲೀನ್ ಬೌಲ್ಡ್ ಆದ ಇಮ್ರಾನ್: ವಿಶ್ವಾಸಮತ ಕಳೆದುಕೊಂಡು ಪಟ್ಟ ಬಿಟ್ಟ ಪಾಕ್ ಪ್ರಧಾನಿ

08:56 AM Apr 10, 2022 | Team Udayavani |

ಇಸ್ಲಮಾಬಾದ್: ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಪಾಕಿಸ್ಥಾನದ ರಾಜಕೀಯ ಇದೀಗ ಒಂದು ಹಂತ ತಲುಪಿದೆ. ಪ್ರಧಾನಿ ಇಮ್ರಾನ್ ಖಾನ್ ಅವರು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾಗಿ, ಪ್ರಧಾನಿ ಪಟ್ಟವನ್ನು ತ್ಯಜಿಸಿದ್ದಾರೆ.

Advertisement

ಮಧ್ಯರಾತ್ರಿ ನಡೆದ ವಿಶ್ವಾಸಮತ ಮಂಡನೆಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಸದಸ್ಯರು ಮತ ಹಾಕಿದರು. ಪ್ರಧಾನಿ ಇಮ್ರಾನ್ ಖಾನ್ ಮತದಾನದ ಸಮಯದಲ್ಲಿ ಗೈರುಹಾಜರಾಗಲು ನಿರ್ಧರಿಸಿದರೆ, ಅವರ ಪಕ್ಷದ ಶಾಸಕರು ವಾಕ್‌ಔಟ್ ನಡೆಸಿದರು. 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ 174 ಶಾಸಕರು ಮತ ಚಲಾಯಿಸುವುದರೊಂದಿಗೆ ಅಂತಿಮವಾಗಿ ಅವಿಶ್ವಾಸ ಮತವನ್ನು ಅಂಗೀಕರಿಸಲಾಯಿತು.

ಸುಪ್ರೀಂ ಕೋರ್ಟ್ ಆದೇಶದಂತೆ ಶನಿವಾರ ಇಮ್ರಾನ್ ಖಾನ್ ಅವಿಶ್ವಾಸ ಗೊತ್ತುವಳಿ ಎದುರಿಸಬೇಕತ್ತು. ಆದರೆ ಸ್ಪೀಕರ್ ನೆರವಿನಿಂದ ಇಡೀ ದಿನ ಕಣ್ಣಾಮುಚ್ಚಾಲೆಯಾಡಿದ ಇಮ್ರಾನ್ ರಾತ್ರಿಯ ತನಕವೂ ಮತದಾನ ನಡೆಸಲಿಲ್ಲ.

ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್‌ ಖೈಸರ್‌ ಅವರನ್ನು ಒತ್ತಾಯಿಸತೊಡಗಿದರು. ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

ಇದನ್ನೂ ಓದಿ:ಶ್ರೀಲಂಕಾ ಅರಾಜಕತೆ : ಪ್ರತಿಭಟನೆ ಹತ್ತಿಕ್ಕಲು ಅರ್ಬನ್‌ ಪಾಕ್‌ಗೆ ಬೀಗ

Advertisement

ಅನಂತರ ಸದನ ಸಮಾವೇಶಗೊಂಡಾಗ ರಮ್ಜಾನ್‌ ಇರುವ ಕಾರಣ ಇಫ್ತಾರ್‌ ಬಳಿಕ ಮತದಾನ ನಡೆಸುತ್ತೇನೆ ಎಂದು ಭರವಸೆ ನೀಡಿ ಮತ್ತೆ ಕಲಾಪವನ್ನು ಮುಂದೆ ಹಾಕಿದರು. ಇಷ್ಟೆಲ್ಲ ಆಗುತ್ತಿದ್ದರೂ ಇಮ್ರಾನ್‌ ಖಾನ್‌ ಮಾತ್ರ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆದರೆ ಈ ಬೆಳವಣಿಗೆಗಳ ನಡುವೆಯೇ ಅವರು ರಾತ್ರಿ 9ಕ್ಕೆ ಸಂಪುಟ ಸಭೆ ಕರೆದರು.

ಇಫ್ತಾರ್‌ ಮುಗಿಯುತ್ತಿದ್ದಂತೆ ಮತದಾನ ಆರಂಭವಾಗುತ್ತದೆ ಎಂದು ನಂಬಿದ್ದ ವಿಪಕ್ಷಗಳಿಗೆ ಮತ್ತೆ ನಿರಾಶೆಯಾಯಿತು. ಸ್ಪೀಕರ್‌ ಮತ್ತೆ ಕಲಾಪವನ್ನು ಮುಂದೂಡಿದರು. ಹೀಗಾಗಿ ರಾತ್ರಿಯಿಡೀ ಪಾಕ್‌ ಸಂಸತ್ತಿನಲ್ಲಿ ಹೈಡ್ರಾಮಾ ಸೃಷ್ಟಿಯಾಗುವ ಲಕ್ಷಣ ಗೋಚರಿಸಿತು.

ನಂತರ ಮತದಾನ ನಡೆದು ಇಮ್ರಾನ್ ಖಾನ್ ಸರ್ಕಾರ ಸೋಲನುಭವಿಸಿತು. ಅವರ ಸರ್ಕಾರವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತವನ್ನು ಕಳೆದುಕೊಳ್ಳುವ ಮೊದಲೇ, ಇಮ್ರಾನ್ ಖಾನ್ ಪ್ರಧಾನಿ ನಿವಾಸವನ್ನು ಖಾಲಿ ಮಾಡಿದರು. ಈ ಮೂಲಕ ಪಾಕಿಸ್ಥಾನದ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕ ರಾಜಕೀಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲೇ ಕ್ಲೀನ್ ಬೌಲ್ಡ್ ಆದರು.

Advertisement

Udayavani is now on Telegram. Click here to join our channel and stay updated with the latest news.

Next