Advertisement

ಹೊಸ ನೀತಿಯಿಂದ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ

01:04 PM Oct 11, 2021 | Team Udayavani |

ಪ್ರಸಕ್ತ ಸಾಲಿ ನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿಕೊಂಡಿರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯಕ್ರಮದಲ್ಲಿನ ಹೊಸ ವಿಷಯಗಳ ಕುರಿತು “ಉದಯವಾಣಿ’ಯು ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ..

Advertisement

ಪಂಚ ಪ್ರಶ್ನೆಗಳು
1.ಎನ್‌ಇಪಿ ಅನುಷ್ಠಾನಕ್ಕೆ ಸಿದ್ಧತೆ ಹೇಗಿದೆ?
2.ಎನ್‌ಇಪಿ ಅನುಷ್ಠಾನಕ್ಕೆ ಸಂಬಂ ಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಯಾವುವು?
3.ಎನ್‌ಇಪಿ ಅನುಷ್ಠಾನದ ಅನಂತರ ಪಠ್ಯಕ್ರಮದಲ್ಲಿ ಆಗಬಹುದಾದ ಬದಲಾವಣೆ ಏನು?
4.ಎನ್‌ಇಪಿಯಲ್ಲಿ ಮೂರು ವರ್ಷವೂ ಎಕ್ಸಿಟ್‌ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಇದೆಯೇ?
5.ಎನ್‌ಇಪಿ ಅನುಷ್ಠಾನದ ಅನಂತರ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೇಗೆ ಸುಧಾರಿಸ ಲಿದೆ ಮತ್ತು ಉಪನ್ಯಾಸಕರ ಕೊರತೆ ಅನುಷ್ಠಾನಕ್ಕೆ ಅಡ್ಡಿಯಾಗಲಿದೆಯೇ?

ಉನ್ನತ ಭವಿಷ್ಯಕ್ಕೆ ಭದ್ರ ಬುನಾದಿ
1 ದಾವಣಗೆರೆ ವಿವಿಯಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಎರಡು ಹಂತಗಳ ಪ್ರಕ್ರಿಯೆ ಮುಗಿದಿವೆ. ಈಗಾಗಲೇ ಪದವಿ ತರಗತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅ.16ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ವರ್ಷ ನಮ್ಮ ವಿವಿಯಲ್ಲಿ ಸ್ನಾತಕ ಪದವಿಯ ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಿಜ್ಞಾನ ವಿಭಾಗದಲ್ಲಿ ಗಣಿತಶಾಸ್ತ್ರ, ಕಂಪ್ಯೂಟರ್‌ ವಿಜ್ಞಾನ, ಬಿಬಿಎ, ಬಿಕಾಂ ಪ್ರಥಮ ವರ್ಷದ ತರಗತಿಗಳು ಆರಂಭವಾಗಲಿವೆ. ಒಟ್ಟಾರೆ ಎನ್‌ಇಪಿ ಕುರಿತು ವಿಚಾರ ಸಂಕಿರಣ, ಆನ್‌ಲೈನ್‌ ಸಭೆ ಮೂಲಕ ಸಾಕಷ್ಟು ಚರ್ಚೆ ಮಾಡಲಾಗಿದೆ.
2 ಎನ್‌ಇಪಿಯ ಮೂಲ ಉದ್ದೇಶ, ಅದರ ಕಲಿಕೆ, ಪ್ರಯೋಜನಗಳು, ವಿಷಯಗಳ ಆಯ್ಕೆ ಸೇರಿ ಎಲ್ಲ ಮಾಹಿತಿಯನ್ನು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಚಾರ್ಯರು, ವಿವಿ ಪ್ರಾಧ್ಯಾಪಕರಿಗೆ ಮೂರು ಬಾರಿ ನಾಲ್ಕು ಹಂತದಲ್ಲಿ ತರಬೇತಿ ನೀಡಲಾಗಿದೆ. ತಜ್ಞರಿಂದ ಮಾರ್ಗ ದರ್ಶನ ನೀಡಲಾಗಿದೆ. ಎರಡು ಬಾರಿ ವಿಚಾರ ಸಂಕಿರಣ ನಡೆಸಲಾಗಿದೆ. ನೋಡಲ್‌ ಅಧಿಕಾರಿ, ಟಾಸ್ಕ್ಫೋರ್ಸ್‌ ಸಹ ರಚಿಸಿ ಕಾರ್ಯೋನ್ಮುಖರಾಗಿದ್ದೇವೆ. ಹೀಗಾಗಿ ಎನ್‌ಇಪಿ ಅನುಷ್ಠಾನದಲ್ಲಿ ಗೊಂದಲ ಎದ್ದು ಕಾಣುತ್ತಿಲ್ಲ.
3 ಎನ್‌ಇಪಿ ಅನುಷ್ಠಾನದ ಅನಂತರ ವಿದ್ಯಾರ್ಥಿಗಳು ಪಠ್ಯೇತರ ಚಟು ವಟಿಕೆಯಲ್ಲಿಯೂ ತಮ್ಮನ್ನು ತೊಡಗಿಸಿ ಕೊಳ್ಳಲಿದ್ದಾರೆ. ಕೌಶಲ ಆಧಾರಿತ ಶಿಕ್ಷಣ ಪದ್ಧತಿ ಇದಾಗಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಮತ್ತು ಆದ್ಯತೆಯ ವಿಷಯಗಳಲ್ಲಿ ಅಧ್ಯಯನ ಮಾಡಬಹುದು. ಆ ವಿಷಯದಲ್ಲಿಯೇ ವಿಶೇಷ ಪರಿಣತಿ ಪಡೆದು ಉನ್ನತಿ ಸಾಧಿಸಲು ಮತ್ತು ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಅನು ಕೂಲ ಆಗಲಿದೆ. ಮೇಜರ್‌ ಮತ್ತು ಮೈನರ್‌ ಪದ್ಧತಿ ಇದ್ದು, ಆದ್ಯತೆ ಮೇರೆಗೆ ವಿಷಯ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಎರಡು ಮೇಜರ್‌ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
4ಎನ್‌ಇಪಿ ಅನುಷ್ಠಾನದಿಂದ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ವಿಷಯದಲ್ಲಿ ಪ್ರಭುತ್ವ ಸಾಧಿಸಲು ಮತ್ತು ಆ ವಿಷಯದಲ್ಲಿ ಕೌಶಲ ವನ್ನು ಗಟ್ಟಿ ಮಾಡಿಕೊಳ್ಳಬಹುದು. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೂ ನೆರವಾ ಗಲಿದೆ. ವೃತ್ತಿ ಆಧಾರಿತ, ಕೌಶಲ ಆಧಾರಿತ ಶಿಕ್ಷಣ ಪದ್ಧತಿ ಇದಾಗಿದ್ದು, ನೈತಿಕತೆ, ಸಾಮಾಜಿಕ ಜವಾಬ್ದಾರಿ ಮತ್ತು ಸ್ವಾಭಿಮಾನದ ಬದುಕಿಗೆ ಆಧಾರ ವಾಗಲಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.
5 ಮೂರು ವರ್ಷವೂ ಎಕ್ಸಿಟ್‌ಗೆ ಅವಕಾಶ ನೀಡಿರುವುದೇ ಡ್ರಾಪ್‌ಔಟ್‌ ತಗ್ಗಿಸಲು. ಯಾವುದೇ ವಿದ್ಯಾರ್ಥಿ ಎರಡು ಸೆಮಿಸ್ಟರ್‌ ಮುಗಿಸಿದರೆ ಸರ್ಟಿಫಿಕೆಟ್‌, ನಾಲ್ಕು ಸೆಮಿಸ್ಟರ್‌ ಮುಗಿಸಿದರೆ ಡಿಪ್ಲೊಮಾ ಮತ್ತು ಆರು ಸೆಮಿಸ್ಟರ್‌ ಪೂರ್ಣಗೊಳಿಸಿದರೆ ಸ್ನಾತಕ ಪದವಿ ಪ್ರಮಾಣ ಪತ್ರ ಸಿಗಲಿದೆ. ಯಾವುದೇ ಎರಡು ಸೆಮಿಸ್ಟರ್‌ ಅನಂತರ ಬೇರೆ ಕೋರ್ಸ್‌ ಓದುವುದಕ್ಕೂ ಅನುಕೂಲವಿದೆ. ಇದರಿಂದ ವಿದ್ಯಾರ್ಥಿ ತನ್ನ ಆಸಕ್ತಿಯ ವಿಷಯ, ಕೋರ್ಸ್‌, ಆದ್ಯತೆಯ ಪ್ರಯೋಜನ ಪಡೆಯಬಹುದು.

ಕಲಿಕಾ ವಿಧಾನವೂ ಬದಲಾವಣೆ
1ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದಲ್ಲಿ ಎನ್‌ಇಪಿ-2020 ಅನುಷ್ಠಾನಕ್ಕೆ ಸಂಬಂಧಿ ಸಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರಿಕುಲಮ್‌ ಸ್ಟ್ರಕ್ಚರ್‌, ಕರಿಕುಲಮ್‌ ಡಿಸೈನ್‌ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಲಾಗಿದೆ. ಎನ್‌ಇಪಿಗೆ ಸಂಬಂ ಧಿಸಿದಂತೆ ವಿವಿಯಲ್ಲಿ ಈಗಾಗಲೇ ಪಠ್ಯಕ್ರಮ ಸಿದ್ಧಪಡಿಸಿ ಕೊಳ್ಳಲಾಗಿದ್ದು ಸಿಂಡಿಕೇಟ್‌ನಿಂದ ಅನುಮೋದನೆಯನ್ನೂ ಪಡೆಯಲಾಗಿದೆ.

2ವಿಎಸ್‌ಕೆ ವಿವಿ ವ್ಯಾಪ್ತಿಯಲ್ಲಿ ಎನ್‌ಇಪಿಗೆ ಸಂಬಂಧಿ ಸಿದಂತೆ ವಿವಿ, ಕಾಲೇಜುಗಳಲ್ಲಿ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಕಾರ್ಯಾಗಾರಗಳನ್ನು ಆಯೋ ಜಿಸಿ ಜಾಗೃತಿ ಮೂಡಿಸುವ ಮೂಲಕ ವಿದ್ಯಾರ್ಥಿ, ಉಪನ್ಯಾಸಕರಲ್ಲಿನ ಗೊಂದಲಗಳನ್ನು ನಿವಾರಿಸಲಾಗಿದೆ. ಜತೆಗೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.

Advertisement

3ಎನ್‌ಇಪಿ ಆಧಾರಿತ ಬೋಧನೆ ಮತ್ತು ಪಠ್ಯಕ್ರಮದಲ್ಲಿ ಹಲವು ಬದಲಾವಣೆಗಳು ಆಗಲಿವೆ. ನೂತನ ಪಠ್ಯಕ್ರಮದಿಂದ ಹೊಸ ಹೊಸ ವಿಷಯಗಳು ಬರಲಿವೆ. ಹೊಸ ವಿಷಯಗಳಿಂದ ಕಲಿಯಲು ಸಾಕಷ್ಟು ಅವಕಾಶಗಳಿದ್ದು, ಕಲಿಕಾ ವಿಧಾನವೂ ಬದಲಾವಣೆಯಾಗಲಿದೆ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ.

4ಎನ್‌ಇಪಿ ಅನುಷ್ಠಾನದ ಅನಂತರ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ಕಲಿಕೆ, ಬಹುಶಿಸ್ತಿಯ, ಕೌಶಲಾಧಾರಿತ, ಮೌಲ್ಯಾಧಾರಿತ ಕಲಿಕಾ ಪ್ರಕ್ರಿಯೆಗಳು ಕಂಡುಬರಲಿವೆ. ಎನ್‌ಇಪಿ 2020ರ ಅನುಷ್ಠಾನದಿಂದ ಉಪನ್ಯಾಸಕರ ಕೊರತೆ ಉಂಟಾಗುವುದಿಲ್ಲ. ಬದಲಾಗಿ ಬೇಡಿಕೆ ಹೆಚ್ಚಾಗಲಿದೆ.
5 ವೈಯಕ್ತಿಕವಾಗಿ ಹೇಳಬೇಕೆಂದರೆ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಬರುವುದಿಲ್ಲ. ಈ ಮೊದಲು ಪದವಿಯಲ್ಲಿ ಫೇಲ್‌ ಆದರೂ ಮುಂದಿನ ವರ್ಷಕ್ಕೆ ಪ್ರವೇಶ ನೀಡಲಾಗುತ್ತಿತ್ತು. ಇದರಿಂದ ಫೇಲ್‌ ಆದ ವಿಷಯಗಳನ್ನು ಮುಂದಿನ ವರ್ಷ ಪಾಸ್‌ ಮಾಡಿದರಾಯಿತು ಎಂಬ ನಿರ್ಲಕ್ಷÂ ವಿದ್ಯಾರ್ಥಿಗಳದ್ದಾಗಿತ್ತು. ಇದೀಗ ನೂತನ ಎನ್‌ಇಪಿ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳು ಜಾಗೃತರಾಗುತ್ತಾರೆ. ಪ್ರತೀ ವರ್ಷವೂ ಹೆಚ್ಚು ಆಸಕ್ತಿಯಿಂದ ಓದಿ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುತ್ತಾರೆ. ಇದರಿಂದ ನಿಧಾನವಾಗಿ ಡ್ರಾಪ್‌ಔಟ್‌ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.

ಕೃಷಿ ವಿವಿಗಳಿಗೆ ಸವಾಲು
1ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕಳೆದ ಒಂದು ವರ್ಷದಿಂದಲೇ ಈ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಂಡಿಯನ್‌ ಕೌನ್ಸಿಲ್‌ ಅಗ್ರಿಕಲ್ಚರ್‌ ರಿಸರ್ಚ್‌ಗೆ ಮಾಹಿತಿ ನೀಡಲು ನಮ್ಮ ವಿವಿ ವ್ಯಾಪ್ತಿಯ ಎಲ್ಲ ಡೀನ್‌ಗಳಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ತಿಳಿಸಲಾಗಿತ್ತು. ಐಸಿಎಆರ್‌ನ 7ನೇ ಡೀನ್‌ ಕಮಿಟಿ ಪಠ್ಯಕ್ರಮದ ಕುರಿತು ಪರಿಶೀಲನೆ ನಡೆಸಿದ್ದು, ಇನ್ನೂ ಅಂತಿಮಗೊಳಿಸಿಲ್ಲ. ನಮ್ಮ ವಿವಿಯಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು.

2 ಗೊಂದಲಗಳು ಎನ್ನುವುದಕ್ಕಿಂತ ಸುಧಾರಿತ ಪಠ್ಯ ಅಥವಾ ಪರಿಷ್ಕೃತ ಪಠ್ಯ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಎನ್‌ಇಪಿ ಓದುವುದು ಬಹುತೇಕ ಈ ವರ್ಷ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳೇ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಡಿ ಕೆಲಸ ಮಾಡಿದ ಬೋಧಕ ಸಿಬಂದಿ ಕೊಂಚ ಆತಂಕಗೊಂಡಿದ್ದು, ಐಸಿಎ ಆರ್‌ನಿಂದ ನಿರ್ದೇಶನಗಳು ಬರುವವರೆಗೆ ಸಹನೆಯಿಂದ ಕಾಯುವಂತೆ ತಿಳಿಸಲಾಗಿದೆ. ಕಾಶ್ಮೀರದಲ್ಲಿ ಕೃಷಿ ಪದ್ಧತಿಗೂ, ರಾಯಚೂರಿನ ಕೃಷಿ ಪದ್ಧತಿಗೂ ವ್ಯತ್ಯಾಸವಿದೆ. ಅಲ್ಲದೇ ಹೊಸ ಶಿಕ್ಷಣ ನೀತಿಯಡಿ ಶೇ.30ರಷ್ಟು ವಿನಾಯಿತಿ ಇದ್ದು, ನಮಗೆ ಬೇಕಾದ ರೀತಿಯಲ್ಲಿ ಪಠ್ಯ ಮತ್ತು ಪ್ರಾಯೋಗಿಕ ತರಗತಿ ರೂಪಿಸಿ
ಕೊಳ್ಳಲು ಅವಕಾಶವಿದೆ.

3ಬಹಳ ಗುರುತರ ಬದಲಾವಣೆಗಳು ಆಗುವುದು ನಿಶ್ಚಿತ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಡಿ ಪದವಿ ಓದುತ್ತಿದ್ದ ಮಕ್ಕಳು ಈಗ ಹೊಸ ಶಿಕ್ಷಣ ಪದ್ಧತಿಗೆ ಒಗ್ಗಿಕೊಳ್ಳಬೇಕಿದೆ. ಬಿಎಸ್ಸಿ ಅಗ್ರಿ ಓದಲು ಬಂದ ವಿದ್ಯಾರ್ಥಿ 2ನೇ ವರ್ಷ ಮೆಡಿಕಲ್‌ ಓದಲು ಹೋಗಬಹುದು. ಅಲ್ಲದೇ ನಮ್ಮ ಕೃಷಿ ಶಿಕ್ಷಣದಲ್ಲಿ ದಿಢೀರ್‌ ಬದಲಾವಣೆ ಕಷ್ಟ ಸಾಧ್ಯ. ಅಲ್ಲದೇ ಈಗ ನಾವು ಪಠ್ಯ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು 2+1, 1+1, 0+1, 1+0 ಆಧಾರದಡಿ ಕಲಿಸುತ್ತೇವೆ. ಎನ್‌ಇಪಿಯಲ್ಲಿ ಇದು ಬದಲಾಗಬಹುದು. ದೇಶದಲ್ಲಿ 74 ಕೃಷಿ ವಿವಿಗಳಿದ್ದು, ಸುಮಾರು 375ಕ್ಕೂ ಹೆಚ್ಚು ಕಾಲೇಜ್‌ಗಳಿವೆ. ಎಲ್ಲ ಡೀನ್‌ಗಳ ಸಭೆ ಶೀಘ್ರವೇ ನಡೆಯಲಿದ್ದು, ಎದುರಾಗುವ ಸಮಸ್ಯೆಗಳ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂಬ ಮಾಹಿತಿ ಇದೆ.

4ಪ್ರತಿಭಾವಂತ ವಿದ್ಯಾರ್ಥಿ ತನಗೆ ಹಿಡಿತ ಇರುವ ವಿಷಯವನ್ನು ಓದಲು ಆಯ್ಕೆ ನೀಡುವುದರಿಂದ ಈ ಪದ್ಧತಿ ಖಂಡಿತ ಶಿಕ್ಷಣ ವ್ಯವಸ್ಥೆ ಯನ್ನು ಸುಧಾರಿಸಲಿದೆ. ಮನೆಯವರ ಒತ್ತಡಕ್ಕೆ ಮಣಿದೋ, ಇಲ್ಲ ಉದ್ಯೋಗಾ ವಕಾಶ ಹೆಚ್ಚು ಎನ್ನುವ ಕಾರಣಕ್ಕೆ ಮಕ್ಕಳು ಇಷ್ಟವಿಲ್ಲದ ಕೋರ್ಸ್‌ ಓದುತ್ತಾರೆ. ಕೊನೆಗೆ ವಿಷಯ ತಲೆಗೆ ಹತ್ತದೆ ಹಿಂದುಳಿಯುತ್ತಾರೆ. ಆದರೆ, ಇಲ್ಲಿ ಒಂದು ವರ್ಷದೊಳಗೆ ತನಗೆ ವಿಷಯ ಅರ್ಥವಾಗದಿದ್ದರೆ 2ನೇ ವರ್ಷ ಬೇರೆ ವಿಷಯಕ್ಕೆ ಹೋಗಬಹುದು. ಇನ್ನು ಉಪನ್ಯಾಸಕ ಕೊರತೆ ಕಾಡುವುದಿಲ್ಲ.
5ಸಾಮಾನ್ಯವಾಗಿ ನಮ್ಮ ವಿವಿಗೆ ಬರುವ ಮಕ್ಕಳು ಮೆರಿಟ್‌ ಆಧಾರದಲ್ಲಿಯೇ ಆಯ್ಕೆಯಾಗಿರುತ್ತಾರೆ. ಅವರಲ್ಲಿ ಮೆಡಿಕಲ್‌ ಸಿಕ್ಕಿಲ್ಲ ಎನ್ನುವ ಬೇಸರದಿಂದ ಬರುವವರೂ ಇರುತ್ತಾರೆ. ಎರಡನೇ ವರ್ಷವೂ ಮೆಡಿಕಲ್‌ ಓದಲು ಅವಕಾಶ ಸಿಕ್ಕರೆ ಕೆಲವರು ಬಿಟ್ಟು ಹೋಗಬಹುದು. ಹಾಗಂತ ಡ್ರಾಪ್‌ ಔಟ್‌ ಪ್ರಮಾಣ ಹೆಚ್ಚಾಗಿರಲು ಸಾಧ್ಯವಿಲ್ಲ.

ಇದನ್ನೂ ಓದಿ:ಐಪಿಎಲ್‌ ಕ್ವಾಲಿಫೈಯರ್‌-1: 9ನೇ ಸಲ ಫೈನಲ್‌ ತಲುಪಿದ ಚೆನ್ನೈ

ತೋಟಗಾರಿಕೆ ವಿವಿಗೆ ಹೊಸದೇನಲ್ಲ
1. ರಾಷ್ಟ್ರದ ಕೃಷಿ ಮತ್ತು ತೋಟಗಾರಿಕೆ ವಿವಿ ವ್ಯಾಪ್ತಿಯಲ್ಲಿ ಕಳೆದ ಐದಾರು ವರ್ಷಗಳಿಂದಲೇ ಎನ್‌ಇಪಿ ಇದೆ. ಹೊಸದಾಗಿ ಮತ್ತೆ ಸಿದ್ಧತೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ.

2 ವಿವಿ ವ್ಯಾಪ್ತಿಯಲ್ಲಿ ಈಗಾಗಲೇ ಎನ್‌ಇಪಿ ಶಿಕ್ಷಣ ಪದ್ಧತಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವು ದರಿಂದ ವಿದ್ಯಾರ್ಥಿಗಳು, ಉಪನ್ಯಾಸಕರಲ್ಲಿ ಯಾವುದೇ ಗೊಂದಲವಿಲ್ಲ. ಉಳಿದ ಬಿಎ, ಬಿ.ಇಡಿ, ಬಿಎಸ್ಸಿ ಶಿಕ್ಷಣ ಪದ್ಧತಿಯಂತೆ ನಮ್ಮಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ.

3ಕಳೆದ ಐದಾರು ವರ್ಷಗಳಿಂದ ಎನ್‌ಇಪಿ ಅಡಿಯಲ್ಲೇ ಶಿಕ್ಷಣ-ಪ್ರಾಯೋಗಿಕ ಚಟುವಟಿಕೆ ನಡೆಸಲಾಗುತ್ತಿದೆ. ಅಲ್ಲದೇ ಐಸಿಎಆರ್‌ನಿಂದ ಹೊಸ ಪಠ್ಯಕ್ರಮ ರಚನೆಗೆ ಹೊಸ ಕಮಿಟಿ ರಚನೆಗೊಂಡಿದೆ. ಈ ಕಮಿಟಿ ನೀಡುವ ನಿರ್ದೇಶನದ ಪ್ರಕಾರ ಮುಂದಿನ ಪಠ್ಯಕ್ರಮ ನಿರ್ಧಾರಗೊಳ್ಳಲಿದೆ.

4ನಮ್ಮ ವಿವಿಯಲ್ಲಿ ಉಪನ್ಯಾಸಕರು, ಸಿಬಂದಿ ಕೊರತೆ ಇರುವುದು ನಿಜ. ಆದರೆ ಎನ್‌ಇಪಿ ಪದ್ಧತಿಯಡಿಯೇ ಈಗಾಗಲೇ ವಿವಿಯ ವ್ಯಾಪ್ತಿಯಲ್ಲಿ ಪ್ರ್ಯಾಕ್ಟಿಕಲ್‌ ಬೇಸ್‌ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಮ್ಮದು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಡಿ ಬರುತ್ತಿರುವುದರಿಂದ ಅತೀ ಹೆಚ್ಚು ಸ್ಕಿಲ್‌ ಡೆವಲಪ್‌ಮೆಂಟ್‌ ಮತ್ತು ಪ್ರ್ಯಾಕ್ಟಿಕಲ್‌ಗೆ ಆದ್ಯತೆ ಇರುತ್ತದೆ. ಹೀಗಾಗಿ ಉಪನ್ಯಾಸಕರ ಕೊರತೆ ಇದ್ದರೂ ಅದು ಸಮಸ್ಯೆಯಾಗಿ ಪರಿಣಮಿಸುವುದಿಲ್ಲ.

5ನಮ್ಮ ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲೂ ಐಸಿಎಆರ್‌ ರಚಿಸಿದ ಪಠ್ಯಕ್ರಮ ಇರುತ್ತದೆಯಾದರೂ ಬಹುತೇಕ ಪ್ರ್ಯಾಕ್ಟಿಕಲ್‌ ಬೇಸ್‌ ಶಿಕ್ಷಣ ಹೆಚ್ಚುತ್ತದೆ. ಅಲ್ಲದೇ ನಮ್ಮ ಎಲ್ಲ ಕೋರ್ಸ್‌ಗಳು ನಾಲ್ಕು ವರ್ಷದ್ದಾಗಿದ್ದು, ಪ್ರ್ಯಾಕ್ಟಿಕಲ್‌ ಬೇಸ್‌ ಹೆಚ್ಚಿರುವುದರಿಂದ ನಮ್ಮಲ್ಲಿ ಡ್ರಾಪ್‌ಔಟ್‌ ಆಗುವುದಿಲ್ಲ. ಈ ವರೆಗೆ ಆ ರೀತಿ ಆಗಿಲ್ಲ.

ಪರಿಪೂರ್ಣ ವ್ಯಕ್ತಿತ್ವಕ್ಕೆ ಸಹಕಾರಿ
1. ಕನ್ನಡ ವಿಶ್ವವಿದ್ಯಾನಿಲಯ ಸಂಶೋಧನೆಗೆ ಸೀಮಿತವಾಗಿದ್ದರಿಂದ ಆರಂಭದಿಂದಲೂ ಸಂಗೀತ, ಕಲೆ ಇನ್ನಿತರ ಕೌಶಲಾಧಾರಿತ ಶಿಕ್ಷಣವನ್ನು ಕಲಿಸಿಕೊಡಲಾಗುತ್ತಿದೆ. ಎನ್‌ಇಪಿ ಶಿಕ್ಷಣ ನಿಯಮಗಳಂತೆ ಸೆಮಿಸ್ಟರ್‌ ಪದ್ಧತಿಯನ್ನು ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಯಲ್ಲಿನ ಸಂಪನ್ಮೂಲಗಳನ್ನೇ ಬಳಸಿಕೊಂಡು ಕೌಶಲಾಧಾರಿತ ಶಿಕ್ಷಣವನ್ನು ಕಲಿಸಲಾಗುವುದು. ಕಂಪ್ಯೂಟರ್‌, ಗ್ರಂಥಾಲಯ, ಭಾಷಾಂತರ ಸೇರಿ ಇನ್ನಿತರ ವಿಷಯಗಳ ಕುರಿತು ವಿದ್ಯಾರ್ಥಿ ಗಳ ಆಸಕ್ತಿಗನುಗುಣವಾಗಿ ಕಲಿಸಿಕೊಡಲಾ ಗುತ್ತಿದ್ದು, ಇದಕ್ಕೆ ವಿವಿಯಲ್ಲಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಪಠ್ಯಕ್ರಮ ಸಹ ಸಿದ್ಧಗೊಳಿಸಲಾಗಿದೆ.

2 ವಿವಿಯಲ್ಲಿ ಟಾಸ್ಕ್ಫೋರ್ಸ್‌ ರಚಿಸಲಾ ಗಿದ್ದು, ವಿವಿ ಕುಲಪತಿಗಳು ಅಧ್ಯಕ್ಷರಾಗಿ, ಡೀನ್‌, ವಿಷಯವಾರು ಉಪನ್ಯಾಸಕರು ಇರುತ್ತಾರೆ. ಜತೆಗೆ ಹೆಲ್ಪ್ಲೈನ್‌ಗೆ ನೋಡಲ್‌ ಅ ಧಿ ಕಾರಿಗಳಿದ್ದು, ಇವರು ವಿದ್ಯಾರ್ಥಿ- ಉಪ ನ್ಯಾಸ ಕರಲ್ಲಿರುವ ಗೊಂದಲಗಳನ್ನು ನಿವಾರಿಸಲಿ ದ್ದಾರೆ. ಈ ನಿಟ್ಟಿನಲ್ಲಿ ಉಪನ್ಯಾಸಕರಿಗೆ ಕಾರ್ಯಾಗಾರಗಳನ್ನು ನಡೆಸಿ ತರಬೇತಿ ನೀಡಲಾಗಿದೆ.

3ಪಠ್ಯಕ್ರಮಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕೆಂಬ ಉದ್ದೇಶದಿಂದ ವಿವಿ ಗಳೇ ಪಠ್ಯಕ್ರಮ ಮಾಡಿಕೊಳ್ಳುತ್ತವೆ. ಈ ಮೊದಲು ಪದವಿ, ಸ್ನಾತಕೋತ್ತರ ಪದವಿಯಲ್ಲಿ ಒಂದು ವಿಷಯದ ಬಗ್ಗೆ ಮಾತ್ರ ಸವಿಸ್ತಾರವಾಗಿ ಅಭ್ಯಾಸ ಮಾಡಲಾಗುತ್ತಿತ್ತು. ಆದರೆ, ಎನ್‌ಇಪಿ ಶಿಕ್ಷಣದಲ್ಲಿ ಕವಿವಿಯಲ್ಲಿ ಕನ್ನಡ ಕಡ್ಡಾಯವಾಗಿದೆ. ಇನ್ನುಳಿದ ವಿಷಯಗಳನ್ನು ವಿದ್ಯಾರ್ಥಿ ತನ್ನ ಆಸಕ್ತಿ ಆಧರಿಸಿ ಕೌಶಲ ವಿಷಯಗಳನ್ನು ಅಧ್ಯಯನ ಮಾಡುವುದು ಕಡ್ಡಾಯ.

4.ಹಿಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಒಂದೇ ವಿಷಯದ ಬಗ್ಗೆ ಪಾಠ ಮಾಡಲಾಗುತ್ತಿತ್ತು. ಮುಂದಿನ ಮೂರು ವರ್ಷಗಳೂ ಅದೇ ವಿಷಯ ಕಲಿಸಲಾಗುತ್ತಿತ್ತು. ಆದರೆ ಎನ್‌ಇಪಿ ಶಿಕ್ಷಣದಲ್ಲಿ ಎರಡು ಕೌಶಲಾಧಾರಿತ ವಿಷಯಗಳನ್ನು ವಿದ್ಯಾರ್ಥಿಗಳ ಆಸಕ್ತಿಗೆ ಬಿಡಲಾಗಿದೆ. ಅವುಗಳಿಂದ ವಿದ್ಯಾರ್ಥಿಗಳ ಜೀವನ ಬದಲಾವಣೆಯಾಗುವ ಸಾಧ್ಯತೆಯಿದೆ. ಇವುಗಳ ಜತೆಗೆ ಭಾರತ ಸಂವಿಧಾನ, ಪರಿಸರ ವಿಜ್ಞಾನವನ್ನು ಸಹ ಕಡ್ಡಾಯಗೊಳಿಸಿದೆ. ಈ ಪದ್ಧತಿಯಿಂದ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸಿ ಹೊರ ಕಳುಹಿಸಲಾಗುತ್ತದೆ. ವಿವಿಗಳಲ್ಲಿ ಎಲ್ಲ ವಿಷಯಗಳಿಗೂ ಉಪನ್ಯಾ ಸಕರು ಇರುವುದರಿಂದ ಈಗಾಗಲೇ ತರಬೇತಿ ನೀಡಿದ್ದು, ಕೊರತೆಯಾಗಲ್ಲ.

5.ಎನ್‌ಇಪಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುವ ಪ್ರಶ್ನೆಯೇ ಇಲ್ಲ. ಏಕೆಂದರೆ ಇಲ್ಲಿ ತರಗತಿಯಲ್ಲಿ ಕಲಿಯುವುದಕ್ಕಿಂತ ಹೊರಗಡೆ ಕೌಶಲ ಶಿಕ್ಷಣದಲ್ಲಿ ಪಾಂಡಿತ್ಯವನ್ನು ಕಲಿಯುತ್ತಾರೆ. ಅದಕ್ಕೂ ಅಂಕಗಳು ಇರುತ್ತವೆ. ಮೇಲಾಗಿ ಈ ಪದ್ಧತಿಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಒಂದು ವರ್ಷ ಪೂರ್ಣಗೊಳಿಸಿ ಮನೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ, ಹೊರಹೋಗಿ, ಮುಂದಿನ ವರ್ಷ ಪುನಃ ಮುಂದುವರಿಸಲು ಸಹ ಅವಕಾಶವಿದೆ. ಹಾಗಾಗಿ ಎನ್‌ಇಪಿಯಲ್ಲಿ ಫೇಲಿನ‌ ಪ್ರಶ್ನೆಯೇ ಇರಲ್ಲ.

Advertisement

Udayavani is now on Telegram. Click here to join our channel and stay updated with the latest news.

Next