Advertisement

ಹೊಸ ಶಿಕ್ಷಣ ನೀತಿಯಿಂದ ಗುಣಮಟ್ಟ ಹೆಚ್ಚಳ: ಕಾಗೇರಿ

05:37 PM Jun 19, 2022 | Team Udayavani |

ಶಿರಸಿ: ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ. ಹೊಸ ನೀತಿಯಿಂದ ಶೈಕ್ಷಣಿಕ ಕ್ಷೇತ್ರ ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಶನಿವಾರ ನಗರದ ಎಂಇಎಸ್‌ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು. ಹೊಸ ನೀತಿಗೆ ಸಂಸ್ಥೆ ಹೇಗೆ ಹೊಂದಿಕೊಳ್ಳಬೇಕು ಎಂದು ಚಿಂತನೆ ಮಾಡಬೇಕು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವ ಕೆಲಸ ವಿದ್ಯಾಸಂಸ್ಥೆಗಳಿಂದ ಆಗಬೇಕಿದೆ. ಅಂಕಗಳಿಗಷ್ಟೇ ಸೀಮಿತವಾಗದೆ ರಾಷ್ಟ್ರ ದ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಕಲಿಯಬೇಕಿದೆ. ಪ್ರಜಾಪ್ರಭುತ್ವದ ಕಾವಲುಗಾರರು ಯುವಕರು ಆಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಬಲಿಪಶುವಾಗಬಾರದು. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಸಂಸ್ಥೆಯನ್ನು ಮುನ್ನಡೆಸಬೇಕು ಎಂದರು.

1961ರಲ್ಲಿ ಪ್ರಾರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಫಲ ಕೊಡುತ್ತಿದೆ. ಹಿರಿಯರ ಸಹಕಾರದೊಂದಿಗೆ ಮೋಟಿನ್ಸರ ಹೆಗಡೆಯವರು ಸಂಸ್ಥೆಯನ್ನು ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲು ಕಾರಣೀಕರ್ತರಾದರು. ಎಂಇಎಸ್‌ ಶಿಕ್ಷಣ ಸಂಸ್ಥೆಗೆ ತನ್ನದೇ ಆದ ವೈಶಿಷ್ಟ್ಯತೆ ಇದೆ. 4.5 ಸಾವಿರ ವಿದ್ಯಾರ್ಥಿಗಳು ಎಂಇಎಸ್‌ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಖಾಸಗಿ ಕ್ಷೇತ್ರ ಹಾಗೂ ಸರ್ಕಾರಿ ಕ್ಷೇತ್ರ ಸೌಹಾರ್ದಯುತವಾಗಿ ಕೆಲಸಮಾಡಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಎಂಇಎಸ್‌ ಸಂಸ್ಥೆ ಸಮಾಜಕ್ಕೆ ಪೂರಕವಾದ ಕೆಲಸ ಮಾಡುತ್ತಿದೆ. ವ್ಯಾಪಾರಿಕರಣದ ಮನಸ್ಥಿತಿ ಇಲ್ಲದೇ ನಿಸ್ವಾರ್ಥ ಸೇವಾ ಮನೋಭಾವ ದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ಜಾಗ ಸಂಸ್ಥೆಯ ಹೆಸರಿಗೆ ನೋಂದಣಿ ಮಾಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

Advertisement

ಮಾಜಿ ಸಚಿವ ಆರ್‌. ವಿ. ದೇಶಪಾಂಡೆ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮಹತ್ವದ್ದಾಗಿದೆ. ಪ್ರತಿಯೊಬ್ಬ ಪ್ರಜೆಯೂ ವಿದ್ಯಾವಂತರಾಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯ ಪಥದತ್ತ ನಡೆಯಲು ಸಾಧ್ಯ ಎಂದರು.

ಕರ್ನಾಟಕ ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳೆಯುತ್ತಿದೆ. ಸ್ಮರಣ ಶಕ್ತಿ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಗೌರವ, ಶಿಸ್ತು, ಗುರಿ, ಚಾರಿತ್ರ್ಯವಿರಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಾನೆ. ವಿದ್ಯಾರ್ಥಿಗಳೇ ದೇಶದ ಆಸ್ತಿ. ವಿದ್ಯಾರ್ಥಿ ಜೀವನದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು ಜೀವನದ ಪಥವನ್ನೇ ಬದಲಾಯಿಸಿಬಿಡುತ್ತದೆ. ವಿದ್ಯಾರ್ಥಿಗಳ ಗುರಿ ಯಾವಾಗಲೂ ಯಶಸ್ಸಿನತ್ತ ಇರಬೇಕು ಎಂದರು.

ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ 61 ವರ್ಷಗಳಿಂದ ಎಂಇಎಸ್‌ ಸಂಸ್ಥೆ ಸಾಧನೆ ಮಾಡುತ್ತಿದೆ. ಪದವಿಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಒದಗಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ ಎಂಬ ಉದ್ದೇಶದಿಂದ ಈ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಎಸ್‌. ವಿ. ಸಂಕನೂರು, ಉದ್ಯಮಿ ಭೀಮಣ್ಣ ನಾಯ್ಕ, ಸುಧಿಧೀರ್‌ ಭಟ್‌, ಶ್ಯಾಂ ಭಟ್‌, ನಿತೀನ್‌ ಕಾಸರಗೋಡು, ಎಸ್‌.ಪಿ.ಶೆಟ್ಟಿ ಸೇರಿದಂತೆ ಹಲವು ಗಣ್ಯರು ಇದ್ದರು.

ಹಣ, ಜಾತಿ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದೆ. ಚುನಾವಣೆಯ ಸಮಯದಲ್ಲಿ ಸೂಕ್ತ ಅಭ್ಯರ್ಥಿ ಗೆ ಮತ ನೀಡುವ ಅಭಿರುಚಿಯನ್ನು ಹೊಂದುವ ಮನಸ್ಥಿತಿ ಬರಬೇಕು. -ಆರ್‌.ವಿ.ದೇಶಪಾಂಡೆ, ಮಾಜಿ ಮಂತ್ರಿ

ಚುನಾವಣಾ ವ್ಯವಸ್ಥೆ ಬದಲಾವಣೆ ಮಾಡಲು ಯುವಕರಿಂದ ಮಾತ್ರ ಸಾಧ್ಯ. ಚುನಾವಣೆಗಳಲ್ಲಿ ಯುವಕರು ತಪ್ಪದೇ ಮತದಾನ ಮಾಡಬೇಕು. –ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next