ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯ ಕಂಬಳ ಕ್ರೀಡೆಗೆ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಕಂಬಳ ಉತ್ಸವದಲ್ಲಿ ಸುಧಾರಣೆ, ಪ್ರೋತ್ಸಾಹ, ಕೋಣ ತಳಿಗಳ ಸಂರಕ್ಷಣೆ, ಕಂಬಳ ಓಟಗಾರರ ಜೀವನ ಮಟ್ಟ ಸುಧಾರಣೆಗೆ ಯೋಜನೆಗಳು ಸಹಿತ ಕೆಲವು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಾಂತೀಯ ಅಧ್ಯಕ್ಷ ಡಾ| ಎಸ್. ಕೆ. ಮಿತ್ತಲ್ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ.
ಕಂಬಳ ಕ್ರೀಡೆ ಆಯೋಜಕರು ನೀಡಿರುವ ಮನವಿ, ಸಲಹೆ ಹಾಗೂ ಶಿಫಾರಸ್ಸುಗಳನ್ನು ವಿವಿಧ ಕಾರ್ಯಯೋಜನೆಗಳ ಮೂಲಕ ಪರಿಗಣಿಸಲು ಯೋಗ್ಯವಾಗಿದ್ದು ಇವುಗಳನ್ನು ಅನುಷ್ಠಾನಗೊಳಿಸಬಹುದಾಗಿದೆ ಎಂದು ಮಿತ್ತಲ್ ಸರಕಾರಕ್ಕೆ ಸಲ್ಲಿಸಿ ರುವ ವರದಿಯಲ್ಲಿ ತಿಳಿಸಿದ್ದಾರೆ.
ಮಿತ್ತಲ್ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರು ಪಶು ಸಂಗೋಪನಾ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಕಂಬಳ ಸಮಿತಿ ಹಾಗೂ ಉತ್ಸವ ಆಯೋಜಕರೊಂದಿಗೆ ಸಭೆ ನಡೆಸಿದ್ದು ವಿವಿಧ ಅಂಶಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಸಮಗ್ರ ವರದಿಯೊಂದನ್ನು ತಯಾರಿಸಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್, ಪಶುಸಂಗೋಪನ ಸಚಿವ ಪ್ರಭು ಚೌಹಾಣ್, ಕ್ರೀಡಾ ಸಚಿವ ನಾರಾಯಣ ಗೌಡ ಅವರಿಗೆ ಸಲ್ಲಿಸಿ ಸರಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ
ಮೂಡುಬಿದಿರೆ, ಬೈಂದೂರು, ಮಿಯಾರ್ ಹಾಗೂ ಪೈವಳಿಕೆಗಳಲ್ಲಿ ಕಂಬಳ ಓಟಗಾರರ ತರಬೇತಿ ಕೇಂದ್ರ, ಕಂಬಳ ಅಕಾಡೆಮಿ ಸ್ಥಾಪನೆ, ಕಂಬಳ ಓಟಗಾರರ ಮತ್ತು ಕೋಣಗಳ ಫಿಟ್‌ನೆಸ್ ತರಬೇತಿ ಕೇಂದ್ರಗಳು, ಕಂಬಳ ಕೋಣಗಳಿಗಾಗಿ ಗೋಮಾಳ, ಶೆಡ್, ಕಂಬಳ ಆಯೋಜನೆಗೆ ಸಕಾಲದಲ್ಲಿ ಅನುಮತಿ, ಕಂಬಳ ಪ್ರಾಧಿಕಾರ ಸ್ಥಾಪನೆ, ವಿಮೆ ಸಹಿತ ಹಲವು ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಹಾಗೂ ಪದಾಧಿಕಾರಿಗಳು ಹಾಗೂ ವಿವಿಧ ಕಂಬಳ ಆಯೋಜಕರು ಪೂರಕ ಮಾಹಿತಿಗಳನ್ನು ಒದಗಿಸಿದ್ದರು ಎಂದು ಸಮಿತಿಯ ನಿಕಟಪೂರ್ವ ಪ್ರ.ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ತಿಳಿಸಿದ್ದಾರೆ.