ಕಲಬುರಗಿ: ಹೆರಿಗೆ ಸಮಯದಲ್ಲಿ ಶಿಶು ಹಾಗೂ ತಾಯಿ ಮರಣ ತಪ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮತ್ತಷ್ಟು ಸುಧಾರಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು. ಅಫಜಲಪುರ ತಾಲೂಕಿನ ಗೊಬ್ಬುರ ಬಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾದರಿ ಹೆರಿಗೆ ಕೋಣೆ ಉದ್ಘಾಟನೆ ನೆರವೇರಿಸಿ, ಮಾದರಿ ಹೆರಿಗೆ ಕೋಣೆಗಳು ಸುರಕ್ಷತಾ ಹೆರಿಗೆಗೆಸಹಾಯವಾಗಲಿವೆ.
ಹೆರಿಗೆ ಸುರಕ್ಷಿತಗೊಂಡಲ್ಲಿ ಶಿಶು-ತಾಯಿ ಮರಣ ತಪ್ಪಲಿದೆ. ಹೀಗಾಗಿ ಈ ನಿಟ್ಟಿನಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಮಾದರಿ ಹೆರಿಗೆ ಕೋಣೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಸುರಕ್ಷತಾ ಹೆರಿಗೆ ಬಗ್ಗೆ ಆರೋಗ್ಯ ಕಾರ್ಯಕರ್ತರು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.
ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಇನ್ನಷ್ಟು ಆರೋಗ್ಯ ಸೇವೆ ದೊರಕಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಾಲೂಕಾ ಕೇಂದ್ರ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಡಯಾಲಿಸಿಸ್ ವಾರಕ್ಕೊಮ್ಮೆ ಮಾಡಿಸುವುದು ಅಗತ್ಯವಿರುತ್ತದೆ.
ಹೀಗಾಗಿ ರೋಗಿಗಳು ತೀವ್ರ ತೊಂದರೆಗೆ ಒಳಗಾಗುವುದನ್ನು ಗಮನಿಸಿ ಅನುಕೂಲವಾಗಲೆಂದು ಡಯಾಲಿಸಿಸ್ ಕೇಂದ್ರವನ್ನು ಎಲ್ಲ ತಾಲೂಕಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಮುಂದಾಗಲಾಗಿದೆಎಂದು ಹೇಳಿದರು. ತಾಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಸಹ ಸ್ಥಾಪಿಸಲು ಮುಂದಾಗಲಾಗಿದೆ. ತೀವ್ರ ಘಟಕ ಸ್ಥಾಪನೆಯಾದರೆ ಕೃತಕ ಉಸಿರಾಟ ಒದಗಿಸಲು ಸಾಧ್ಯವಾಗುತ್ತದೆ. ಈ ಎರಡು ಸೇವೆಗಳು ಆಸ್ಪತ್ರೆಗಳಲ್ಲಿ ಕಾರ್ಯರೂಪಕ್ಕೆ ಬಂದರೆ ಬಡವರಿಗೆ ಮತ್ತಷ್ಟು ಉನ್ನತ ವೈದ್ಯಕೀಯ ಸೇವೆ ದೊರೆಯಲುಸಾಧ್ಯವಾಗುತ್ತದೆ ಎಂದು ಹೇಳಿದರು.
ಮೇಲ್ದರ್ಜೆಗೆ: ಗೊಬ್ಬುರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ ಮಾತನಾಡಿ, ಜಿಲ್ಲೆಯಲ್ಲಿಯೇ ಗೊಬ್ಬುರ ಬಿ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಎಂಬುದಾಗಿ ಖ್ಯಾತಿ ಪಡೆದಿರುವುದು ಸೇವೆಗೆ ಹಿಡಿದ ಕನ್ನಡಿಯಾಗಿದೆ.
ಇದು ಹೆಮ್ಮೆಯಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಸಿದ್ದು ಸಿರಸಗಿ, ತಾಲೂಕಾ ಪಂಚಾಯಿತಿ ಅಧ್ಯಕ್ಷೆ ರುಕ್ಮಿàಣಿ ಜಮಾದಾರ, ತಾಲೂಕಾ ಪಂಚಾಯಿತಿ ಸದಸ್ಯ ಮಹಾದೇವ ರಾಠೊಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಎಸ್ ಪಡಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ, ವೈದ್ಯಾಧಿಕಾರಿಗಳಾದ ಅಂಬಾರಾಯ ರುದ್ರವಾಡಿ, ಡಾ| ಸಂತೋಷ ಪಾಟೀಲ, ಡಾ| ಅಬ್ದುಲ್ ಅಜೀಜ ಮುಂತಾದವರಿದ್ದರು.