ಹಾಸನ: ಹಾಸನ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ಪಾವತಿಯಾಗಬೇಕಾಗಿರುವ ಗ್ರಂಥಾಲಯ ಕರವನ್ನು ವಸೂಲು ಮಾಡಿ ಜಿಲ್ಲೆಯ ಗ್ರಂಥಾಲಯಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಆರ್.ಗಿರೀಶ್ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ 2020-21ನೇ ಸಾಲಿನ ಹಾಸನ ಜಿಲ್ಲಾ ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರಗಳ ಆಯವ್ಯಯ ಸಭೆಯಲ್ಲಿ ಮಾತನಾಡಿದರು.
ಮೂಲ ಸೌಕರ್ಯ ಕಲ್ಪಿಸಿ: ಹೊಸದಾಗಿ ನಿರ್ಮಾಣ ವಾಗುತ್ತಿರುವ ಸಕಲೇಶಪುರ ಹಾಗೂ ಆಲೂರು ಶಾಖಾ ಗ್ರಂಥಾಲಯಗಳಲ್ಲಿ ಕಟ್ಟಡಗಳ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಓದುಗರಿಗೆ ಒದಗಿಸಬೇಕು. ಗ್ರಂಥಾಲಯಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಹಾಸನ ನಗರ ಗ್ರಂಥಾಲಯದಲ್ಲಿ ಓದುಗರಿಗೆ ವೈ ಫೈ. ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಗ್ರಂಥಾಲಯಗಳಿಗೆ ಕಟ್ಟಡ ನಿರ್ಮಿಸಿ: ಸಭೆಯಲ್ಲಿ ಹಾಜರಿದ್ದ ಜಿಪಂ ಸದಸ್ಯ ಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿಗಳಿಗೆ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಶೇಕಡಾವಾರು ಮೀಸಲಿಟ್ಟು ಗ್ರಂಥಾಲಯ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಂದಾಜು ಆದಾಯ ರೂ. 1.10 ಕೋಟಿ ಹಾಗೂ ಅಂದಾಜು ಖರ್ಚು 99.53 ಲಕ್ಷ ರೂ.ಗಳ ವಿವರಣಾ ಪಟ್ಟಿಯ ಪರಿಶೀಲನೆ, ನಗರ ಗ್ರಂಥಾಲಯ ಪ್ರಾಧಿಕಾರದ ಅಂದಾಜು ಆದಾಯ 1.43 ಕೋಟಿ ರೂ. ಹಾಗೂ ಅಂದಾಜು ಖರ್ಚು 1.35 ಕೋಟಿ ರೂ.ಗಳ ವಿವರಣೆ ಗಳನ್ನು ಪರಿಶೀಲಿಸಿ ಸಭೆಯಲ್ಲಿ ಅನುಮೋದಿಸಲಾಯಿತು ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಮ್ಮ, ಪಟ್ಟಣ ಪಂಚಾಯಿತಿ ಸದಸ್ಯ ಶಿವಣ್ಣ, ಜಿಲ್ಲಾ ಹಾಗೂ ಹಾಸನ ನಗರ ಗ್ರಂಥಾಲಯ ಪ್ರಾಧಿಕಾರ ಕಾರ್ಯದರ್ಶಿ ಸಿ.ಜೆ. ವೆಂಕಟೇಶ್ ಮತ್ತಿತರರು ಹಾಜರಿದ್ದರು.