Advertisement

ಅಪರಾಧ ತಡೆಗೆ ಚಿತ್ತಾಕರ್ಷಕ ಜಾಗೃತಿ ಬರಹ

06:43 PM Mar 12, 2021 | Team Udayavani |

ಸಿಂಧನೂರು: ಕಳ್ಳತನ ಸೇರಿದಂತೆ ಇತರ ಅಪರಾಧಗಳನ್ನು ನಿಯಂತ್ರಿಸಲು ಗೋಡೆ ಬರಹಗಳ ಮೊರೆ ಹೋಗಿರುವ ಪೊಲೀಸ್‌ ಇಲಾಖೆ ಜಾಗೃತಿ ಮಂತ್ರ ಪಠಿಸಿದೆ. ಇಲ್ಲಿನ ಶಹರ ಪೊಲೀಸ್‌ ಠಾಣೆಯ ಗೋಡೆಗಳು ಚಿತ್ತಾಕರ್ಷಕ ಬರಹಗಳ ಮೂಲಕ ಜನರನ್ನು ಗಮನ ಸೆಳೆಯಲಾರಂಭಿಸಿದ್ದು, ಗೋಡೆ ಮೇಲಿನ ಸ್ಲೋಗನ್‌ಗಳು ಹಲವು ಸಂದೇಶ ಬಿತ್ತರಿಸುತ್ತವೆ. ಪೊಲೀಸ್‌ ಠಾಣೆ ಪ್ರವೇಶಿಸುವ ಮುನ್ನವೇ ಗೋಡೆಯತ್ತ ಗಮನ ಹರಿಸಿದರೆ, ಯಾವ್ಯಾವ ಅಪರಾಧಕ್ಕೆ ಏನೇನು ಶಿಕ್ಷೆ ಎನ್ನುವುದು ಸೇರಿದಂತೆ ಕಾನೂನಿನ ಮಾಹಿತಿ ಕಣ್ಣಿಗೆ ರಾಚುತ್ತದೆ. ಬೃಹತ್‌ ಕಟ್ಟಡದಲ್ಲಿ ಹೊಸ ಪೊಲೀಸ್‌ ಠಾಣೆ ಆರಂಭವಾದ ನಂತರ ಇದೇ ಮೊದಲ
ಬಾರಿಗೆ ಗೋಡೆಗಳನ್ನು ಚಿತ್ರ ಸಮೇತ ಆಕರ್ಷಕ ಬಣ್ಣಗಳಿಂದ ಸಿಂಗರಿಸಲಾಗಿದೆ.

Advertisement

ಏನೇನು ಮಾಹಿತಿ?: ಮನೆ ಕಳ್ಳತನ ತಡೆಯುವುದಕ್ಕೆ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಸರಗಳ್ಳತನ ತಡೆಯುವುದು ಹೇಗೆ? ಎಟಿಎಂ ಪಿನ್‌ಗಳನ್ನು ಹಂಚಿಕೊಳ್ಳದಂತೆ ಚಿತ್ರಗಳಲ್ಲಿ ತಿಳಿಸಲಾಗಿದ್ದು, ಜತೆಗೆ ಇದಕ್ಕಾಗಿ ಪೊಲೀಸ್‌ ನೆರವು ಪಡೆಯುವ ಕುರಿತು ವಿಳಾಸವನ್ನು ತಿಳಿಸಲಾಗಿದೆ. ತ್ರಿಬಲ್‌ ರೈಡಿಂಗ್‌ ಮಾಡಿದರೆ ಬೀಳುವ ದಂಡ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಪೊಲೀಸರು ಹಾಕುವ ಕೇಸ್‌ನ ಬಗ್ಗೆಯೂ ತಿಳಿಸಲಾಗಿದೆ.

ಪಾರ್ಕಿಂಗ್‌ ಸ್ಥಳ ಉಲ್ಲಂಘಿಸಿ ವಾಹನ ನಿಲುಗಡೆ, ಸಂಚಾರಿ ನಿಯಮ ಪಾಲನೆಯಲ್ಲಿ ಲೋಪಗಳಾದಾಗ ಪೊಲೀಸ್‌ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಚಿತ್ರ ಸಮೇತ ತಿಳಿಸಿ ಹೇಳುವ ಪ್ರಯತ್ನ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 5ರಿಂದ 10 ಸಾವಿರ ರೂ.ವರೆಗೆ ದಂಡ ಬೀಳುತ್ತದೆಂಬ ಫಲಕವಂತು ವಿಶೇಷ ಆಕರ್ಷಣೆಯಾಗಿದೆ.

ಸಿಪಿಐ ಅವರಿಂದಲೇ ಹಣ ವ್ಯಯ: ಇದಕ್ಕಾಗಿ ಸರಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ವೈಯಕ್ತಿಕವಾಗಿ ಕಲಾವಿದರನ್ನು ಕರೆಯಿಸಿ ಸಿಪಿಐ ಜಿ.ಚಂದ್ರಶೇಖರ ಅವರು, ಬಣ್ಣ ಹಾಗೂ ಕಲಾವಿದರ ವೇತನ ವೆಚ್ಚ ಭರಿಸಿದ್ದಾರೆ. ಬಳ್ಳಾರಿಯ ಕಲಾವಿದರನ್ನು ಕರೆಯಿಸಿ ಅವರಿಂದ ಹಂತ-ಹಂತವಾಗಿ ಚಿತ್ರ ಬಿಡಿಸಲಾಗಿದ್ದು, ಶಹರ ಠಾಣೆಯ ಕಾಂಪೌಂಡ್‌ ಗೋಡೆಗಳು ಬಣ್ಣ-ಬಣ್ಣದಿಂದ ಅಲಂಕೃತಗೊಂಡು ಸಂದೇಶ ವಾಹಕಗಳ ರೂಪು ಪಡೆದಿವೆ. ಎರಡನೇ ಹಂತದಲ್ಲಿ ಸಂಚಾರಿ ಪೊಲೀಸ್‌ ಠಾಣೆಯನ್ನು ಆಯ್ದುಕೊಳ್ಳಲಾಗಿದ್ದು, ಅಲ್ಲಿಯೂ ಜಾಗೃತಿ ಚಿತ್ರಬರಹ ದಾಖಲಿಸುವ ಕೆಲಸ ನಡೆದಿದೆ.

ಅಪರಾಧ ತಡೆಗೆ ನೆರವು: ನಗರದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಳೆದ ಎರಡು ತಿಂಗಳಲ್ಲಿ 300 ಪ್ರಕರಣಗಳು ಪತ್ತೆಯಾಗಿವೆ. ಸಂಚಾರಿ ನಿಯಮ ಉಲ್ಲಂಘನೆ, ಮೊಬೈಲ್‌ ಸಂಭಾಷಣೆಯೊಂದಿಗೆ ವಾಹನ ಚಾಲನೆ ಸೇರಿ ಇತರ ಲೋಪ ಗುರುತಿಸಲಾಗಿದೆ. ವಾಹನಗಳ ಸಂಖ್ಯೆ ಆಧರಿಸಿ ಮಾಲೀಕರನ್ನು ಗುರುತಿಸಿ ಅವರಿಗೆ ನೋಟಿಸ್‌ ಕಳಿಸಲಾಗಿದ್ದು, ಈವರೆಗೂ 150 ಜನ 70 ಸಾವಿರ ರೂ. ಹೆಚ್ಚಿನ ದಂಡ ಕಟ್ಟಿದ್ದಾರೆ. ಅಪರಾಧ
ತಡೆ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಜಾಗೃತಿಯ ಮಂತ್ರ ಪಠಿಸಲಾರಂಭಿಸಿದ್ದು, ನಗರದ ಮೂಲೆ ಮೂಲೆಯ ಮೇಲೂ ಕ್ಯಾಮೆರಾಗಳ ಮೂಲಕ ಕಣ್ಣಿಡಲಾರಂಭಿಸಿದೆ.

Advertisement

ಪೊಲೀಸರಿಗೆ ಸರಗಳ್ಳನ ಸುಳಿವು
ಡಿ.27ರಂದು ಆದರ್ಶ ಕಾಲೋನಿಯ ಸಾಯಿ  ಬಾಬಾ ದೇವಸ್ಥಾನದ ಹಿಂದೆ ಸರಗಳ್ಳತನ ನಡೆದಿತ್ತು. ಸುಮಂಗಲಾ ತೌಡು ಮಲ್ಲಪ್ಪ ಎನ್ನುವವರು ಒಣಗಲು ಹಾಕಿದ ಬಟ್ಟೆಯನ್ನು ತೆಗೆದುಕೊಂಡು ಮನೆಯೊಳಕ್ಕೆ ಹೋಗುವ ಸಂದರ್ಭದಲ್ಲಿ 5 ತೊಲೆ ಬಂಗಾರ ಚೈನ್‌ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು. ಸಿಸಿ ಕ್ಯಾಮೆರಾದ ಸಹಾಯದಿಂದ ಕಳ್ಳನ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಅಪರಾಧ ತಡೆಗಟ್ಟುವ ಉದ್ದೇಶದೊಂದಿಗೆ ಗೋಡೆಗಳಿಗೆ ಚಿತ್ರ ಬರೆಯಿಸಿ, ಜಾಗೃತಿ ಬರಹ ನಮೂದಿಸಲಾಗಿದೆ. ಮುಖ್ಯರಸ್ತೆಯಲ್ಲಿ ಹಾದು ಹೋಗುವ ಜನ ಇವುಗಳನ್ನು ಗಮನಿಸಿದಾಗ, ಅವರಲ್ಲಿ ಕಾನೂನಿನ ಜಾಗೃತಿ ಬರುವ ನಿರೀಕ್ಷೆಯಿದೆ.
ಜಿ.ಚಂದ್ರಶೇಖರ,
ಸಿಪಿಐ, ಸಿಂಧನೂರು ವೃತ್ತ

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next