Advertisement

ವಿಶ್ವಕಪ್‌, ಏಷ್ಯಾಕಪ್‌ಗೆ ಮಹತ್ವದ ಅಭ್ಯಾಸ: ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಮುಖಾಮುಖಿ

11:44 PM Jul 26, 2023 | Team Udayavani |

ಬ್ರಿಜ್‌ಟೌನ್‌ (ಬಾರ್ಬಡಾಸ್‌): ಭಾರತ-ವೆಸ್ಟ್‌ ಇಂಡೀಸ್‌ ತಂಡಗಳು ಟೆಸ್ಟ್‌ ಸರಣಿ ಬಳಿಕ ಏಕದಿನ ಸಂಘರ್ಷಕ್ಕೆ ಇಳಿಯಲಿವೆ. ಗುರುವಾರ ಇಲ್ಲಿ 3 ಪಂದ್ಯಗಳ ಸರಣಿಗೆ ಚಾಲನೆ ಲಭಿಸಲಿದೆ. ಮುಂಬರುವ ಏಷ್ಯಾ ಕಪ್‌ ಹಾಗೂ ವರ್ಷಾಂತ್ಯದ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಇದೊಂದು ಮಹತ್ವದ ಸರಣಿ ಆಗಿದೆ.

Advertisement

ಸಿಡಿದಾರೇ ಸೂರ್ಯ?
ಎರಡೂ ಏಕದಿನ ತಂಡಗಳು ವಿಭಿನ್ನವಾಗಿದೆ. ಭಾರತ ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ಚಹಲ್‌, ಉಮ್ರಾನ್‌ ಮಲಿಕ್‌ ಮೊದಲಾದವರ ಫಾರ್ಮನ್ನು ಗಂಭೀರವಾಗಿ ಪರಿಗಣಿಸಲಿದೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್‌ ಅಗರ್ಕರ್‌ ಇದಕ್ಕಾಗಿಯೇ ವೆಸ್ಟ್‌ ಇಂಡೀಸ್‌ಗೆ ಬಂದಿಳಿದಿದ್ದಾರೆ.

“ಭಾರತದ ಎಬಿಡಿ”, 360 ಬ್ಯಾಟರ್‌ ಎನಿಸಿ ಕೊಂಡಿರುವ ಸೂರ್ಯಕುಮಾರ್‌ ಸಿಡಿದು ನಿಲ್ಲಬೇಕಾದ ಅಗತ್ಯವಿದೆ. ಅವರು ಏಕದಿನದಲ್ಲಿ ಟಿ20 ಫಾರ್ಮ್ ಪುನರಾವರ್ತಿಸುವಲ್ಲಿ ವಿಫ‌ಲರಾಗಿ ದ್ದಾರೆ. ಆಸ್ಟ್ರೇಲಿಯ ವಿರುದ್ಧ “ಗೋಲ್ಡನ್‌ ಡಕ್‌” ಹ್ಯಾಟ್ರಿಕ್‌ ಸಂಕಟ ಅನುಭವಿಸಿದ್ದರು. ಗಾಯಾಳು ಶ್ರೇಯಸ್‌ ಅಯ್ಯರ್‌ ಅವರ 4ನೇ ಕ್ರಮಾಂಕದಲ್ಲಿ ಆಡಲಿರುವ ಸೂರ್ಯ ಪಾಲಿಗೆ ಇದೊಂದು ಅಗ್ನಿಪರೀಕ್ಷೆ. ಕ್ಲಿಕ್‌ ಆದರೆ ತಂಡದಲ್ಲಿ ಮುಂದುವರಿದಾರು. ಇಲ್ಲವಾದರೆ ಅಯ್ಯರ್‌ಗೆ ಜಾಗ ಬಿಡಬೇಕಾದ ಸ್ಥಿತಿ ಎದುರಾಗಬಹುದು.

ರೇಸ್‌ನಲ್ಲಿ ಸ್ಯಾಮ್ಸನ್‌
ಕೀಪಿಂಗ್‌ ವಿಭಾಗದಲ್ಲಿ ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌ ನಡುವೆ ಸ್ಪರ್ಧೆ ಇದೆ. ಮುಂದಿನ ದಿನಗಳಲ್ಲಿ ಕೆ.ಎಲ್‌. ರಾಹುಲ್‌ ಮತ್ತು ರಿಷಭ್‌ ಪಂತ್‌ ಪುನರಾಗಮನವಾದರೆ ಇವರಿಬ್ಬರು ಸ್ಥಾನ ಉಳಿಸಿಕೊಳ್ಳುವುದು ಸವಾಲಾಗಬಹುದು. ಟೆಸ್ಟ್‌ನಲ್ಲಿ ಗಮನ ಸೆಳೆದ ಕಾರಣ ಇಶಾನ್‌ ಕಿಶನ್‌ ಏಕದಿನದಲ್ಲಿ ಕೀಪಿಂಗ್‌ ನಡೆಸುವ ಸಾಧ್ಯತೆ ಹೆಚ್ಚು. ಆಗ 4ನೇ ಕ್ರಮಾಂಕಕ್ಕೆ ಸೂರ್ಯಕುಮಾರ್‌ ಮತ್ತು ಸ್ಯಾಮ್ಸನ್‌ ನಡುವೆ ಪೈಪೋಟಿ ಕಂಡು ಬರುವುದರಲ್ಲಿ ಅನುಮಾನವಿಲ್ಲ.

ರೋಹಿತ್‌ ಶರ್ಮ ಜತೆ ಶುಭಮನ್‌ ಗಿಲ್‌ ಓಪನಿಂಗ್‌ ಬರುವ ಕಾರಣ ರುತುರಾಜ್‌ ಗಾಯ ಕ್ವಾಡ್‌ ಕಾಯಬೇಕಾಗಬಹುದು. ಹಾಗೆಯೇ ಉಪನಾಯಕ ಹಾರ್ದಿಕ್‌ ಪಾಂಡ್ಯ ಐಪಿಎಲ್‌ ಬಳಿಕ ಆಡಿಲ್ಲ. ಅನಂತರದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇರುವುದರಿಂದಲೂ ಪಾಂಡ್ಯ ಅವರ ಆಲ್‌ರೌಂಡ್‌ ಪ್ರದರ್ಶನ ನಿರ್ಣಾಯಕವಾಗಬೇಕಿದೆ.

Advertisement

ಅನುಭವಿ ವೇಗಿಗಳಿಲ್ಲ
ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವಿಗಳಿಲ್ಲ. ಉಮ್ರಾನ್‌ ಮಲಿಕ್‌ ಅವರಿಗೆ ಮತ್ತೂಂದು ಅವಕಾಶ ನೀಡಲಾಗಿದೆ. 7 ಪಂದ್ಯಗಳಿಂದ 13 ವಿಕೆಟ್‌ ಉರುಳಿಸಿದ ಸಾಧನೆ ಇವರದು. ಸಿರಾಜ್‌ ಬೌಲಿಂಗ್‌ ನೇತೃತ್ವ ವಹಿಸಲಿದ್ದಾರೆ. ಉನಾದ್ಕತ್‌, ಮುಕೇಶ್‌ ಕುಮಾರ್‌, ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಉಳಿದ ಪ್ರಮುಖರು.

ಸ್ಪಿನ್‌ ವಿಭಾಗದಲ್ಲಿ ಚಹಲ್‌ ಕೂಡ ತಮ್ಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಳೆದ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಚಹಲ್‌ ಬದಲು ಕುಲದೀಪ್‌ ಅವಕಾಶ ಪಡೆದಿದ್ದರು.

ಭಾರತ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ರುತುರಾಜ್‌ ಗಾಯಕ್ವಾಡ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ (ಉಪನಾಯಕ), ಶಾರ್ದೂಲ್‌ ಠಾಕೂರ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಜೈದೇವ್‌ ಉನಾದ್ಕತ್‌, ಮೊಹಮ್ಮದ್‌ ಸಿರಾಜ್‌, ಉಮ್ರಾನ್‌ ಮಲಿಕ್‌, ಮುಕೇಶ್‌ ಕುಮಾರ್‌.

ವೆಸ್ಟ್‌ ಇಂಡೀಸ್‌: ಶೈ ಹೋಪ್‌ (ನಾಯಕ), ರೋವನ್‌ ಪೊವೆಲ್‌ (ಉಪನಾಯಕ), ಅಲಿಕ್‌ ಅಥನಾಝ್, ಯಾನಿಕ್‌ ಕರಿಯ, ಕೇಸಿ ಕಾರ್ಟಿ, ಡೊಮಿನಿಕ್‌ ಡ್ರೇಕ್ಸ್‌, ಶಿಮ್ರನ್‌ ಹೆಟ್‌ಮೈರ್‌, ಅಲ್ಜಾರಿ ಜೋಸೆಫ್, ಬ್ರ್ಯಾಂಡನ್‌ ಕಿಂಗ್‌, ಕೈಲ್‌ ಮೇಯರ್, ಗುಡಕೇಶ್‌ ಮೋಟಿ, ಜೇಡನ್‌ ಸೀಲ್ಸ್‌, ರೊಮಾರಿಯೊ ಶೆಫ‌ರ್ಡ್‌, ಕೆವಿನ್‌ ಸಿಂಕ್ಲೇರ್‌, ಒಶೇನ್‌ ಥಾಮಸ್‌.

Advertisement

Udayavani is now on Telegram. Click here to join our channel and stay updated with the latest news.

Next