ಬೆಂಗಳೂರು: ಕಂಪ್ಯೂಟಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದ ಹೊಸ ಅನ್ವೇಷಣೆ ಎನಿಸಿರುವ “ಬ್ಲಾಕ್‌ಚೈನ್’ ತಂತ್ರಜ್ಞಾನವನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲು ಗಂಭೀರ ಚಿಂತನೆ ನಡೆಸಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ನಗರದಲ್ಲಿ ಜ.19ರಿಂದ ಮೂರು ದಿನ “ಬ್ಲಾಕ್‌ಚೈನ್ ಹ್ಯಾಕಥಾನ್’ ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮುಖ್ಯವಾಗಿ ದಾಖಲೆಗಳ ಸಂರಕ್ಷಣೆ, ವಿಶ್ವಾಸಾರ್ಹತೆ ಹೆಚ್ಚಿಸುವ ಜತೆಗೆ ತಕ್ಷಣವೇ ಮಾಹಿತಿ ಪಡೆಯಲು ಬ್ಲಾಕ್‌ಚೈನ್ ತಂತ್ರಜ್ಞಾನ ಸಹಕಾರಿಯಾಗಲಿದೆ. ಲೆಕ್ಕಪತ್ರ, ಭೂದಾಖಲೆ, ಗುತ್ತಿಗೆ ನಿರ್ವಹಣೆ, ಷೇರು ಮಾರುಕಟ್ಟೆ ಮತ್ತು ಇತರೆ ಹೂಡಿಕೆಗೆ ಸಂಬಂಧಪಟ್ಟಂತೆ ತ್ವರಿತ ಮಾಹಿತಿ ಪಡೆಯಲು ಈ ತಂತ್ರಜ್ಞಾನ ಅಳವಡಿಕೆಗೆ ಅವಕಾಶವಿದೆ.
ಈ ಕುರಿತು ಮಾಹಿತಿ ನೀಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಬ್ಲಾಕ್‌ಚೈನ್ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯವಿದೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬ್ಲಾಕ್‌ಚೈನ್ ಬಳಕೆಗೆ ಚಿಂತಿಸಿದ್ದು, ಈ ಬಗ್ಗೆ ಚರ್ಚಿಸಲು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾಲೋಚನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆಯಲ್ಲಿ ಬಳಕೆ: ಇಲಾಖೆಗಳ ನಡುವೆ ಸಮನ್ವಯ, ಯೋಜನೆ ಅನುಷ್ಠಾನದಲ್ಲಿನ ಅನಧಿಕೃತ ವಿಳಂಬಗಳಿಗೆ ಕಡಿವಾಣ, ತ್ವರಿತ ಅನುಮೋದನೆ ನೀಡುವ ವ್ಯವಸ್ಥೆ ಜಾರಿಗೂ ಬ್ಲಾಕ್‌ಚೈನ್ ಸಹಕಾರಿ ಎಂಬ ಮಾಹಿತಿ ಇದೆ. ಸದ್ಯ ಕಂದಾಯ, ಅರಣ್ಯ, ನಗರಾಭಿವೃದ್ಧಿ, ಪ್ರವಾಸೋದ್ಯಮ, ಕೃಷಿ, ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಈ ತಂತ್ರಜ್ಞಾನ ಅಳವಡಿಕೆ ಸಾಧ್ಯತೆ ಬಗ್ಗೆ ಚರ್ಚಿಸಲಾಗುವುದು.
ಕಂದಾಯ ಇಲಾಖೆಯಲ್ಲಿ ಆಸ್ತಿ ನೋಂದಣಿ, ಅರಣ್ಯ ಇಲಾಖೆಯಲ್ಲಿ ಟಿಂಬರ್ ಸಾಗಣೆ, ಮೇಲ್ವಿಚಾರಣೆ, ಆಯ್ದ ಕಾಡು, ತೋಟಗಳನ್ನು ಗುರುತಿಸಲು, ಖಾತರಿಪಡಿಸಿಕೊಳ್ಳಲೂ ಸಹಕಾರಿಯಾಗಲಿದೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಅಗತ್ಯವಿದ್ದರೆ ನೀತಿ ರಚನೆ: ಈ ಸಮಾಲೋಚನಾ ಕಾರ್ಯಕ್ರಮದ ಬಳಿಕ ಫೆಬ್ರವರಿಯಲ್ಲಿ ಮತ್ತೂಂದು ಸುತ್ತಿನ ಬ್ಲಾಕ್‌ಚೈನ್ ಕಾನ್‌ಕ್ಲೇವ್ ನಡೆಸಿ ಈ ತಂತ್ರಜ್ಞಾನದ ಪರಿಣಾಮಕಾರಿ ಅಳವಡಿಕೆ ಸಾಧ್ಯವೇ ಎಂಬ ಬಗ್ಗೆ ಚರ್ಚಿಸಲಾಗುವುದು. ಅಗತ್ಯವೆನಿಸಿದರೆ ಬ್ಲಾಕ್‌ಚೈನ್ ತಂತ್ರಜ್ಞಾನ ಬಳಕೆ ಸಂಬಂಧ ನೀತಿ ರೂಪಿಸುವ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು.
ಒಟ್ಟಾರೆ ಈ ಸುಧಾರಿತ ತಂತ್ರಜ್ಞಾನದ ಪ್ರಯೋಜನವನ್ನು ಆಡಳಿತದಲ್ಲಿ ಬಳಸಿಕೊಳ್ಳಲು ಚಿಂತಿಸಲಾಗಿದೆ. ಜತೆಗೆ ನವೋದ್ಯಮಿಗಳು, ಅನ್ವೇಷಿಗಳಿಗೂ ತಂತ್ರಜ್ಞಾನದ ನೆರವು ಒದಗಿಸಿ ಪ್ರೋತ್ಸಾಹಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.