Advertisement

“ಕಾಮಗಾರಿ ಪ್ರಗತಿ-ಡಿಸಿಗೆ ತತ್‌ಕ್ಷಣ ವರದಿ ಕೊಡಿ’

08:55 AM Mar 17, 2018 | Team Udayavani |

ಉಡುಪಿ: ಸರಕಾರದಿಂದ ಮಂಜೂರಾತಿ ದೊರೆತು ಪ್ರಾರಂಭಿಸಲಾಗಿರುವ ಕಾಮಗಾರಿಗಳ ಪ್ರಗತಿಯ ಸಂಪೂರ್ಣ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ತತ್‌ಕ್ಷಣವೇ ಕಳುಹಿಸಿ ಕೊಡುವಂತೆ ವಿವಿಧ ಇಲಾಖೆಗಳ ಎಂಜಿನಿಯರ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಸೂಚಿಸಿದ್ದಾರೆ.

Advertisement

ಅವರು ಶುಕ್ರವಾರ ಎಂಜಿನಿಯರ್‌ಗಳ ಜೊತೆ ನಡೆಸಿದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.”ಕಾಮಗಾರಿ ಪ್ರಾರಂಭಗೊಂಡಿದೆ’ ಎಂದು ಉಲ್ಲೇಖೀಸಿ ವಸ್ತುಸ್ಥಿತಿಯ ವರದಿಯನ್ನು ಡಿಸಿಯವರಿಗೆ ಕೊಡಿ. ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಕಾಮಗಾರಿಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಈಗಾಗಲೇ ಪ್ರಾರಂಭಿಸಿರುವ ಕಾಮಗಾರಿಗಳನ್ನು ಮುಂದುವರಿಸಲು ಅಡ್ಡಿಯಾಗುವುದಿಲ್ಲ. ಆದ ಕಾರಣ ಬಾಕಿ ಇರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ ಅದರ ಪ್ರಗತಿ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಸಲ್ಲಿಸದಿದ್ದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಸಚಿವರು ನೀಡಿದರು.

ಕುಡಿಯುವ ನೀರು ಸರಬರಾಜು ಕುರಿತಂತೆ, ಬೇಸಗೆಯಲ್ಲಿ ಯಾವುದೇ ತೊಂದರೆ ಆಗದಂತೆ ಅಗತ್ಯ ಸಿಬಂದಿ ಮತ್ತು ಸಾಮಗ್ರಿಗಳನ್ನು ಸಿದ್ದವಾಗಿಟ್ಟುಕೊಳ್ಳಿ. ದೂರು ಬಂದ ತತ್‌ಕ್ಷಣ ಕಾರ್ಯಪ್ರವೃತ್ತರಾಗಿ ಎಂದು ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿನ ಕೊಳಗೇರಿಗಳಲ್ಲಿ 30 ಕೋ.ರೂ. ವೆಚ್ಚದಲ್ಲಿ 500 ಮನೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್‌ ಆಗಿದೆ. ಕೂಡಲೇ ಕಾಮಗಾರಿ ಆರಂಭಿಸುವುದಾಗಿ ಸ್ಲಂ ಬೋರ್ಡ್‌ ಅಧಿಕಾರಿಗಳು ತಿಳಿಸಿದರು. ಮಲ್ಪೆಯಿಂದ ಉಡುಪಿ, ಮಣಿಪಾಲವಾಗಿ ಹಾದು ಹೋಗುವ ರಾ.ಹೆ. 169ಎ ವಿಸ್ತರಣೆ ಕಾಮಗಾರಿ ಡಿಪಿಆರ್‌ ಅನ್ನು ಕೇಂದ್ರ ಒಪ್ಪಿಕೊಂಡಿದ್ದು, ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿದೆ. ಉಡುಪಿ- ಮಣಿಪಾಲ ರಸ್ತೆಗಳಲ್ಲಿ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾ.ಹೆ. ಅಧಿಕಾರಿಗಳು ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್‌, ವಾರಾಹಿ ಯೋಜನೆಯ ಕಾರ್ಯನಿರ್ವಾಹಕ ಎಂಜನಿಯರ್‌ ಕೃಷ್ಣ ರಾವ್‌ ಉಪಸ್ಥಿತರಿದ್ದರು. 

5 ವರ್ಷ-5,465 ಕಾಮಗಾರಿ; 825.25 ಕೋಟಿ ವ್ಯಯ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಾಸಕತ್ವದ ಅವಧಿಯಲ್ಲಿ (2013ರ ಮೇ 8ರಿಂದ 2018ರ ಮಾ. 10ರ ವರೆಗೆ) 825.25 ಕೋ.ರೂ. ವೆಚ್ಚದಲ್ಲಿ 5,465 ವಿವಿಧ ಕಾಮಗಾರಿಗಳು ಮಂಜೂರಾಗಿದ್ದು, ಅದರಲ್ಲಿ 565.62 ಕೋ.ರೂ. ವೆಚ್ಚದಲ್ಲಿ 4,890 ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿದೆ. 140.13 ಕೋ.ರೂ. ವೆಚ್ಚದ 370 ಕಾಮಗಾರಿಗಳು ಪ್ರಗತಿಯಲ್ಲಿವೆ. 119.60 ಕೋ.ರೂ. ವೆಚ್ಚದ 205 ಕಾಮಗಾರಿಗಳು ಪ್ರಾರಂಭಿಸಲು ಬಾಕಿ ಇವೆ ಎಂದು ತಿಳಿಸಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು, ಶೀಘ್ರದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಎಂಜಿನಿಯರ್‌ಗಳಿಗೆ  ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next