ಹೊಸದಿಲ್ಲಿ: ಮುಂದಿನ ದಿನಗಳಲ್ಲಿ ದೇಶದಲ್ಲಿ ಮತ್ತೆ ಮೂರು ಬುಲೆಟ್ ಟ್ರೈನ್ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರವಿವಾರ 2024ರ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಪಿಎಂ ಮೋದಿ, ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಕ್ಕೆ ಬುಲೆಟ್ ಟ್ರೈನ್ ನೀಡುವುದಾಗಿ ಹೇಳಿದ್ದಾರೆ.
“ಇಂದು ಅಹಮದಾಬಾದ್ ಮುಂಬೈ ಬುಲೆಟ್ ರೈಲಿನ ಕಾಮಗಾರಿ ಭರದಿಂದ ಸಾಗುತ್ತಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ. ಅದೇ ರೀತಿ ಉತ್ತರ ಭಾರತದಲ್ಲಿ ಒಂದು ಬುಲೆಟ್ ರೈಲು, ದಕ್ಷಿಣ ಭಾರತದಲ್ಲಿ ಒಂದು ಬುಲೆಟ್ ರೈಲು ಮತ್ತು ಪೂರ್ವ ಭಾರತದಲ್ಲಿ ಒಂದು ಬುಲೆಟ್ ರೈಲು ಓಡಲಿದೆ. ಇದಕ್ಕಾಗಿ ಸಮೀಕ್ಷಾ ಕಾರ್ಯವೂ ಶೀಘ್ರದಲ್ಲೇ ಆರಂಭವಾಗಲಿದೆ,’’ ಎಂದು ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಬಿಜೆಪಿಯ ‘ಸಂಕಲ್ಪ ಪತ್ರ’ ಅನಾವರಣಗೊಳಿಸಿದ ಬಳಿಕ ಪ್ರಧಾನಿ ಹೇಳಿದರು.
508-ಕಿಮೀ ಉದ್ದದ ಮುಂಬೈ-ಅಹಮದಾಬಾದ್ ಕಾರಿಡಾರ್ ನ ಭಾಗವಾಗಿರುವ ಮಹಾರಾಷ್ಟ್ರದ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳಲ್ಲಿ ಬುಲೆಟ್ ರೈಲು ಕೆಲಸ ಪ್ರಾರಂಭವಾಗಿದೆ ಎಂದು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಘೋಷಿಸಿದ ಕೆಲವೇ ದಿನಗಳಲ್ಲಿ ಮೋದಿ ಈ ಹೇಳಿಕೆಗಳು ಬಂದಿವೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ ನ ಒಟ್ಟು ವೆಚ್ಚವನ್ನು 1.08 ಲಕ್ಷ ಕೋಟಿ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರವು ಎನ್‌ಎಚ್‌ಎಸ್‌ಆರ್‌ಸಿಎಲ್ ಗೆ 10,000 ಕೋಟಿ ರೂಪಾಯಿಗಳನ್ನು ಪಾವತಿಸಬೇಕಿದ್ದರೆ, ಯೋಜನೆಯಲ್ಲಿ ಒಳಗೊಂಡಿರುವ ಎರಡು ರಾಜ್ಯಗಳಾದ ಗುಜರಾತ್ ಮತ್ತು ಮಹಾರಾಷ್ಟ್ರಗಳು ತಲಾ 5,000 ಕೋಟಿ ರೂ. ಪಾವತಿಸಲಿದೆ.
ಇದೇ ವೇಳೆ, ಬಿಜೆಪಿ ವಂದೇ ಭಾರತ್ ರೈಲುಗಳನ್ನು ದೇಶದ ಮೂಲೆ ಮೂಲೆಗೆ ವಿಸ್ತರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.