Advertisement

ಗಡಿ ಜಿಲ್ಲೆಯಲ್ಲಿ ಕನ್ನಡ ಸಮರ್ಪಕ ಅನುಷ್ಠಾನಗೊಳಿಸಿ

03:02 PM Oct 06, 2018 | Team Udayavani |

ಯಾದಗಿರಿ: ಜಿಲ್ಲೆಯ ಗಡಿ ಭಾಗದ ಸಾಕಷ್ಟು ಹಳ್ಳಿ ಹೆಸರಿನ ಕೊನೆಯಲ್ಲಿ ಪಲ್ಲಿ ಎಂಬುದಿದೆ. ಗ್ರಾಮದ ಹೆಸರಿನಲ್ಲಿಯೇ ತೆಲುಗು ಪ್ರಭಾವವಿದೆ ಎಂಬುದು ಗೊತ್ತಾಗುತ್ತದೆ. ಶೀಘ್ರವೇ ಪಲ್ಲಿಗಳನ್ನು ಹಳ್ಳಿಗಳಾಗಿ ಪರಿರ್ವತಿಸಿ ಕನ್ನಡೀಕರಣಗೊಳಿಸಬೇಕು ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಶರಣು ಗದ್ದುಗೆ ಒತ್ತಾಯಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗಡಿ ಭಾಗದ ಶಾಲೆಗಳಿಗೆ ಮುಂಚಿತವಾಗಿ ಕನ್ನಡ ಪುಸ್ತಕಗಳನ್ನು ಸರಬರಾಜು ಮಾಡಲು ಆದ್ಯತೆ ನೀಡಬೇಕು. ಸಿಬಿಎಸ್‌ಸಿ ಮತ್ತು ಐಸಿಎಸ್‌ ಪಠ್ಯಕ್ರಮದಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಅಳವಡಿಸಬೇಕು ಎಂದು ಹೇಳಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಮಾತನಾಡಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ವಿಭಾಗ ತೆರೆಯಲಾಗುವುದು ಎಂದು ಹೇಳಿದರು.

ಕನ್ನಡದ ಬಗ್ಗೆ ಜಾಗೃತಿ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳಲು ಹೆಚ್ಚುವರಿ ಅನುದಾನ ಮತ್ತು ಹಿಂದುಳಿದ ಜಿಲ್ಲೆಯಾಗಿದೆ. ಹಾಗಾಗಿ ವಿಶೇಷ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.  ಡಾ| ಸರೋಜಿನಿ ಮಹಿಷಿ ವರದಿ ಅನ್ವಯ ಎಲ್ಲ ಸರ್ಕಾರಿ-ಖಾಸಗಿ ಸಂಸ್ಥೆಗಳ ಕಾರ್ಖಾನೆ, ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರಿಗೆ ಕಡ್ಡಾಯವಾಗಿ ಮೀಸಲಾತಿ ನೀಡಬೇಕು. ಈ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಮ್ಯಾಗೇರಿ ಅವರಿಗೆ ಸೂಚಿಸಲಾಯಿತು.

ಸಮಿತಿ ಇನ್ನೋರ್ವ ಸದಸ್ಯ ಸಿ.ಎಂ. ಪಟ್ಟೇದಾರ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬಳಕೆ ಸಮರ್ಪಕ ಅನುಷ್ಠಾನ ಆಗುತ್ತಿರುವ ಮತ್ತು ಆಗದಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಿತಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

Advertisement

ಕನ್ನಡ ಭಾಷೆ, ನೆಲ ಕುರಿತು ಪ್ರತಿ ಮಾಹೆ ಒಂದು ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕನ್ನಡ ಜಾಗೃತಿ ಸಮಾವೇಶ ಹಾಗೂ ಇನ್ನಿತರ ಕನ್ನಡಪರ ಕಾರ್ಯಕ್ರಮಗಳನ್ನು ಕಾಲೇಜು ಮತ್ತು ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ಏರ್ಪಡಿಸುವ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜತೆ ಚರ್ಚಿಸುವ ಬಗ್ಗೆ ಸಮಿತಿ ಸದಸ್ಯ ನೀಲಕಂಠ ಬಡಿಗೇರ ಸೇರಿದಂತೆ ಹಲವರು ಒತ್ತಾಯಿಸಿದರು.

ಮತ್ತೋರ್ವ ಸದಸ್ಯ ಅಯ್ಯಣ್ಣ ಹುಂಡೇಕಾರ ಮಾತನಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರ ಕೊರತೆ ಇದ್ದಲ್ಲಿ ತಕ್ಷಣ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆ ನಿರೀಕ್ಷಕ ಶಿವಶಂಕರ ಬಿ. ತಳವಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next