Advertisement

ರಾಜ್ಯಗಳ ಮೂಲಕ ಸಿಎಎ ಜಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

08:27 PM Nov 08, 2022 | Team Udayavani |

ನವದೆಹಲಿ: “ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅತಿ ಪ್ರಮುಖ ವಿಚಾರವಾಗಿದೆ.

Advertisement

ಅಧಿಕಾರದಲ್ಲಿರುವ ಪಕ್ಷವು ಅತ್ಯಂತ ಸೂಕ್ಷ್ಮವಾಗಿ ಎಲ್ಲವನ್ನೂ ನಿಭಾಯಿಸಬೇಕಾಗುತ್ತದೆ. ನಾವು ರಾಜ್ಯಗಳ ಮುಖಾಂತರ ಸಿಎಎಯನ್ನು ಜಾರಿಗೆ ತರುತ್ತಿದ್ದೇವೆ.’

ಹೀಗೆಂದು ಹೇಳಿರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ. ಹಿಮಾಚಲ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಪೌರತ್ವ ಕಾಯ್ದೆಯನ್ನು ನಾವು ಒಂದೊಂದೇ ರಾಜ್ಯದಲ್ಲಿ ಜಾರಿಗೆ ತರುತ್ತಿದ್ದೇವೆ. ಹಿಮಾಚಲದ ಪ್ರಣಾಳಿಕೆಯಲ್ಲೂ ಅದನ್ನು ಸೇರಿಸಿದ್ದೇವೆ. ಸಮಾಜ, ರಾಜ್ಯ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಜನರು ಬಿಜೆಪಿಗೆ ಮತ ಚಲಾಯಿಸಬೇಕು’ ಎಂದಿದ್ದಾರೆ.

ನಮ್ಮ ಪಕ್ಷ ಯಾವತ್ತೂ ಉಚಿತ ಕೊಡುಗೆಗಳನ್ನು ಘೋಷಿಸುವುದಿಲ್ಲ. ಜನರಿಗೆ ಆಮಿಷಗಳನ್ನು ಒಡ್ಡುವುದಿಲ್ಲ, ಬದಲಿಗೆ ಜನರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನವರು ನಂತರದ ಪರಿಣಾಮಗಳನ್ನು ಚಿಂತಿಸದೇ ಆಶ್ವಾಸನೆಗಳನ್ನು ನೀಡುತ್ತಾರೆ. ಅದಕ್ಕೇ ಅವರನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದೂ ನಡ್ಡಾ ಹೇಳಿದ್ದಾರೆ.

ಅಭ್ಯರ್ಥಿಗಳ ಆಸ್ತಿ ಗಣನೀಯ ಹೆಚ್ಚಳ:
ಹಿಮಾಚಲದಲ್ಲಿ ಮತ್ತೆ ಚುನಾವಣೆ ಎದುರಿಸುತ್ತಿರುವ ಹಾಲಿ ಶಾಸಕರ ಪೈಕಿ ಶೇ.84ರಷ್ಟು ಮಂದಿಯ ಆಸ್ತಿಪಾಸ್ತಿ ಕಳೆದ 5 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 58 ಶಾಸಕರು ಸಲ್ಲಿಸಿರುವ ಅಫಿಡವಿಟ್‌ನ ವಿವರಗಳೇ ಇದನ್ನು ಸ್ಪಷ್ಟಪಡಿಸಿದೆ. 58ರ ಪೈಕಿ 49 ಶಾಸಕರ ಆಸ್ತಿಪಾಸ್ತಿಯ ಮೊತ್ತವು ಶೇ.5ರಿಂದ ಶೇ.1,167ರಷ್ಟು ಏರಿಕೆಯಾಗಿದೆ. ಶೇ.9ರಷ್ಟು ಶಾಸಕರ ಆಸ್ತಿ ಮೌಲ್ಯ ಮಾತ್ರ ಇಳಿಕೆ ಕಂಡಿದೆ.

Advertisement

ಕಾಂಗ್ರೆಸ್‌ ನಾಯಕ ಬಿಜೆಪಿ ಸೇರ್ಪಡೆ
ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ಗೆ ಆಘಾತ ಎದುರಾಗಿದೆ. ಹಿರಿಯ ಶಾಸಕ ಮೋಹನ್‌ಸಿನ್ಹ ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಬುಡಕಟ್ಟು ಸಮುದಾಯದ ಪ್ರಭಾವಿ ನಾಯಕರಾದ ಅವರು, 10 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ, ಗುಜರಾತ್‌ನ ಜುನಾಗಡ ಜಿಲ್ಲೆಯಲ್ಲಿ ರೋಡ್‌ ಶೋ ನಡೆಸಿದ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌, “ಬಿಜೆಪಿಯು ರಾಜ್ಯವನ್ನು 27 ವರ್ಷಗಳ ಕಾಲ ಆಳಿದೆ. ಈಗ ನಮಗೊಂದು ಅವಕಾಶ ಕೊಡಿ. ಆಪ್‌ ನಿಮಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸಿಲ್ಲ ಎಂದಾದರೆ ಮತ್ತೆಂದಿಗೂ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ’ ಎಂದು ವಾಗ್ಧಾನ ಮಾಡಿದ್ದಾರೆ.

ಹಿಮಾಚಲದಲ್ಲಿ ಇಂದು ಖರ್ಗೆ ಪ್ರಚಾರ
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. 2 ದಿನಗಳ ಕಾಲ ಇಲ್ಲಿರುವ ಅವರು ಶಿಮ್ಲಾ, ನಾಲಾಗಡದಲ್ಲಿ ಬುಧವಾರ ಪ್ರಚಾರ ಮಾಡಲಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೇರಿದ ಬಳಿಕ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವುದು ಇದೇ ಮೊದಲು.

135 ಮಂದಿಯನ್ನು ಬಲಿಪಡೆದ ಮೊರ್ಬಿ ತೂಗುಸೇತುವೆ ದುರಂತ ಸಂಬಂಧ ಯಾರೊಬ್ಬರೂ ಕ್ಷಮೆಯೂ ಕೇಳಲಿಲ್ಲ, ಯಾರೊಬ್ಬರೂ ರಾಜೀನಾಮೆಯನ್ನೂ ನೀಡಲಿಲ್ಲ. ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತೇವೆ ಎಂಬ ಬಿಜೆಪಿಯ ಅಹಂಕಾರವೇ ಇದಕ್ಕೆ ಕಾರಣ.
– ಪಿ.ಚಿದಂಬರಂ, ಕಾಂಗ್ರೆಸ್‌ ಹಿರಿಯ ನಾಯಕ

ಬಿಜೆಪಿ ನಾಯಕರ 8 ದಿನಗಳ ಪ್ರವಾಸ ಶುರು
ಮಂಗಳವಾರದಿಂದ ಗುಜರಾತ್‌ನ ವಿವಿಧ ಅಸೆಂಬ್ಲಿ ಕ್ಷೇತ್ರಗಳಿಗೆ ಬಿಜೆಪಿಯ ಕೇಂದ್ರ ಸಚಿವರು ಪ್ರವಾಸ ಮಾಡಲಿದ್ದಾರೆ. 8 ದಿನಗಳ ಕಾಲ ನಡೆಯಲಿರುವ ಪ್ರವಾಸ ನ.15ರಂದು ಮುಕ್ತಾಯವಾಗಲಿದೆ. ಮನೆ ಮನೆ ಪ್ರಚಾರ, ವೃತ್ತಿಪರರ ಜತೆ ಸಂವಾದ ಮಾತ್ರವಲ್ಲದೇ, ಗುಜರಾತ್‌ನ ಅಭಿವೃದ್ಧಿಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವ್ಯಾಪಾರಿಗಳು, ಎಸ್‌ಸಿ-ಎಸ್‌ಟಿ ಸಮುದಾಯ, ಮಹಿಳೆಯರು, ಯುವಜನರಿಂದ ಸಲಹೆ ಪಡೆಯಲಿದ್ದಾರೆ. ಒಟ್ಟು 1 ಕೋಟಿ ನಾಗರಿಕರಿಂದ ಸಲಹೆ ಪಡೆಯುವುದು ಬಿಜೆಪಿಯ ಉದ್ದೇಶವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next