Advertisement

ರಾಜ್ಯದಲ್ಲಿ ಸಿಕ್ಕಿಂ ಮಾದರಿ ಸಾವಯವ ಬೇಸಾಯ ಅಳವಡಿಸಿ

08:20 PM Feb 18, 2020 | Lakshmi GovindaRaj |

ಚಾಮರಾಜನಗರ: ಸಿಕ್ಕಿಂ ರಾಜ್ಯದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಸಾವಯವ ಬೇಸಾಯವನ್ನು ಅಳವಡಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಕೋಡಿಮೋಳೆ ರಾಜಶೇಖರ್‌ ಒತ್ತಾಯಿಸಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಯವ ಬೇಸಾಯದಿಂದ ಉತ್ತಮ ಆಹಾರ ಪದಾರ್ಥಗಳು, ಹೆಚ್ಚಿನ ಲಾಭ ದೊರೆಯುತ್ತದೆ. ಆದರಿಂದ ರಾಜ್ಯದ ಯಾವುದಾದರೊಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸಾವಯವ ಬೇಸಾಯ ಮಾಡಿ ಅದು ಯಶ್ವಸಿಯಾದರೆ ರಾಜ್ಯಾದ್ಯಂತ ವಿಸ್ತರಿಸುವಂತೆ ಮುಖ್ಯಮಂತ್ರಿಗಳಲ್ಲಿ ರಾಜಶೇಖರ್‌ ಆಗ್ರಹಿಸಿದರು.

ರಾಸಾಯನಿಕ ಗೊಬ್ಬರ ಬಳಸಲ್ಲ: ತೋಟಗಾರಿಕೆ ಇಲಾಖೆ ವತಿಯಿಂದ ಸಿಕ್ಕಿಂ ರಾಜ್ಯಕ್ಕೆ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿಕ್ಕಿಂ ರಾಜ್ಯವು ಸಂಪೂರ್ಣವಾಗಿ ಸಾವಯವ ಬೇಸಾಯವನ್ನು ಅಳವಡಿಸಿಕೊಂಡಿರುವುದನ್ನು ಗಮನಿಸಿದೆವು. ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆ ನಾಶಕವನ್ನು ಅವರು ಬಳಸುವುದೇ ಇಲ್ಲ.

ಒಂದು ವೇಳೆ ರಾಸಾಯನಿಕ ಗೊಬ್ಬರ ಬಳಸಿರುವುದು ಕಂಡು ಬಂದರೆ ಒಂದು ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸಿಕ್ಕಿಂ ರಾಜ್ಯದ ಜನರು ಆರೋಗ್ಯವಂತರಾಗಿದ್ದು, ಅಲ್ಲಿನ ಜನರ ವಯೋಮಾನ ಎಲ್ಲ ರಾಜ್ಯದ ಜನರಿಗಿಂತ 10 ವರ್ಷ ಹೆಚ್ಚಾಗಿರುತ್ತದೆ ಎಂದು ತಿಳಿದು ಬಂದಿದೆ ಎಂದರು.

ರಾಸಾಯನಿಕ ಬಳಕೆಯಿಂದ ಕೃಷಿ ವರಮಾನ ಕಡಿಮೆ: ಸಿಕ್ಕಿಂ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಸರ್ಕಾರ ಸಂಪೂರ್ಣವಾಗಿ ಸಾವಯವ ಬೇಸಾಯ ಬೇಸಾಯ ಅಳವಡಿಸಿಕೊಳ್ಳಲು ಕ್ರಾಂತಿಕಾರಿ ತೀರ್ಮಾನ ತೆಗೆದುಕೊಳ್ಳಬೇಕು. ನಮ್ಮ ಜನರು ವಿಷಭರಿತ ಆಹಾರ ಸೇವಿಸಿ ನಿಧಾನವಾಗಿ ನಾಶವಾಗುತ್ತ ಇದ್ದಾರೆ. ನಮ್ಮ ಜಮೀನಿನಲ್ಲಿರುವ ಜೀವಂತ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಕೃಷಿಯಲ್ಲಿ ರಾಸಾಯನಿಕಗಳ ಹೆಚ್ಚು ಬಳಕೆಯಿಂದ ವೆಚ್ಚ ಹೆಚ್ಚಾಗಿ ಕೃಷಿಯ ವರಮಾನ ಕಡಿಮೆಯಾಗುತ್ತಿದೆ ಎಂದರು.

Advertisement

ಕಲಬೆರಕೆ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಿ: ಒಂದು ಕಡೆ ವಾತಾವರಣದ ವೈಪರೀತ್ಯದಿಂದಾಗಿ ಮಳೆಯ ಕೊರತೆ ಮತ್ತು ನಾಶವಾಗುತ್ತಿರುವ ಮಣ್ಣು ಇವುಗಳಿಂದ ಕರ್ನಾಟಕ ಮರುಭೂಮಿಯಾಗುವತ್ತ ಸಾಗಿದೆ. ಕಲಬೆರಕೆ, ವಿಷಯುಕ್ತ ಆಹಾರ ಸೇವನೆಯಿಂದ ನಮ್ಮ ಜನರ ವೈದ್ಯಕೀಯ ವೆಚ್ಚ ಕೂಡ ದುಬಾರಿಯಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಮೊದಲ ಹೆಜ್ಜೆಯಾಗಿ ರಾಜ್ಯದ ಒಂದು ಜಿಲ್ಲೆಯಲ್ಲಾದರೂ ಸಂಪೂರ್ಣವಾಗಿ ಸಾವಯವ ಕೃಷಿ ಮಾಡಬೇಕು.

ಅದರ ಸಾಧಕ-ಬಾಧಕ ಅಧ್ಯಯನ ಮಾಡಿ ಪರಿಶೀಲಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ರಾಜ್ಯಾದ್ಯಂತ ವಿಸ್ತರಣೆ ಮಾಡಬೇಕು. ಕಲಬೆರಕೆ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹಾಪ್‌ಕಾಮ್ಸ್‌ ಮಾಜಿ ನಿರ್ದೇಶಕ ಪುರುಷೋತ್ತಮ್‌, ನಿವೃತ್ತ ಸಬ್‌ಇನ್ಸ್‌ಪೆಕ್ಟರ್‌ ಶಿವಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next