ಚಾಮರಾಜನಗರ: ಶಾಲಾ ಪಠ್ಯ ಚಟುವಟಿಕೆ ಗಳ ಜೊತೆ ಪರಿಸರ ಬಗೆಗಿನ ಚಟುವಟಿಕೆ ಗಳಲ್ಲೂ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು. ಪರಿಸರ ಪ್ರೀತಿಯೂ ಶಿಕ್ಷಣದ ಒಂದು ಭಾಗವಾಗುವುದರ ಜೊತೆಗೆ ಮಕ್ಕಳಿಂದ ಆಯಾ ಗ್ರಾಮದಲ್ಲಿ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ರಾಷ್ಟ್ರೀಯ ಹಸಿರು ಪಡೆ (ಇಕೋ ಕ್ಲಬ್) ಅನುಷ್ಠಾನ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು. ಶಾಲೆಯ ಆವರಣದಲ್ಲಿ ಗಿಡ ಮೂಲಿಕೆ ಸಸ್ಯಗಳ ತೋಟ ಬೆಳೆಸಬೇಕು. ರಕ್ಷಣೆಗೆ ಶಾಲಾ ಆವರಣದ ಸುತ್ತಲು ಜೈವಿಕ ಫೆನ್ಸಿಂಗ್ ಗಿಡಗಳಾದ ಜತ್ರೋಪ, ಹೊಂಗೆ, ಸಿಮಾರೂಪ ಬೇವಿನಂತಹ ಸಸಿ ನೆಡಬೇಕು. ಸಾಮಾಜಿಕ ಅರಣ್ಯ ಇಲಾಖೆ ನೆರವು ಪಡೆಯಬೇಕು.
ಸಾರ್ವಜನಿಕರ ಸಹಭಾಗಿತ್ವ ಸಹಕಾರದೊಂದಿಗೆ ಹಸಿರು ಪಡೆ ಯೋಜನೆಯನ್ನು ಎಲ್ಲ ಶಾಲೆಗಳಲ್ಲೂ ಯಶಸ್ವಿಗೊಳಿಸಬೇಕೆಂದರು. ಪಠ್ಯದ ಜೊತೆಗೆ ಪರಿಸರ ಪ್ರೀತಿ, ಸ್ವತ್ಛತೆಯು ಕೂಡ ಶಿಕ್ಷಣವಾಗಿರುತ್ತದೆ. ಶಾಲೆಯಲ್ಲಿ ರಚಿಸಲಾಗಿರುವ ಇಕೋ ಕ್ಲಬ್‌ನಲ್ಲಿ ಮಕ್ಕಳು ಪರಿಸರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಸಮಾಜ, ಸಮುದಾಯದ ಜಾಗೃತಿಗೆ ಮಕ್ಕಳಿಂದ ಉತ್ತೇಜಿಸುವುದರಿಂದ ಪರಿಣಾಮಕಾರಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಚತೆ ಸಂದೇಶ ರವಾನೆಯಾಗಲಿದೆ. ಶಾಲಾ ಮಕ್ಕಳ ಮೂಲಕ ಗ್ರಾಮದ ಜನರಿಗೆ ಅರಿವು ಮೂಡಿಸಬೇಕು ಎಂದರು.
ಪೋಷಕರು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮದ ಜನರ ಸಹಕಾರದೊಂದಿಗೆ ಇನ್ನಷ್ಟು ಹೊಸತನದಿಂದ ಕೂಡಿದ ಪರಿಸರ ಪೂರಕ ಚಟುವಟಿಕೆಗಳು ನಡೆಯಬೇಕು. ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳ ಇಕೋಕ್ಲಬ್‌ನಿಂದ ಅನುಕೂಲವಾಗುವ ಕಾರ್ಯಗಳು ಆಗಬೇಕು. ಶಾಲೆಯ ಹೊರ ಭಾಗದಲ್ಲಿ ಜಾನುವಾರು ಹಾಗೂ ಪಕ್ಷಿಗಳಿಗೆ ನೀರು ಕುಡಿಯಲು ಸಣ್ಣ ಪ್ರಮಾಣದ ನೀರಿನ ತೊಟ್ಟಿಯನ್ನು ನಿರ್ಮಿಸಬೇಕು ಎಂದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಎಸ್. ಜವರೇಗೌಡ ಇತರರಿದ್ದರು.