ಊರಿಗೆ ಹೋಗುವ ಬಸ್ಸಿಗೆ ಇನ್ನು ಐದೇ ನಿಮಿಷ. ಅಷ್ಟರಲ್ಲಿ ಈ ಕೆಲಸ ಮಾಡಿ ಮುಗಿಸೋಣವೆಂದು ಪೋಸ್ಟಾಫೀಸಿಗೆ ಧಾವಿಸಿದ್ದೆ. ಎರಡು ಸಾಲು ಗೀಚಿ ಇವತ್ತು ಡಬ್ಬಕ್ಕೆ ಹಾಕಿದರೆ ನಾಳೆಯ ಟಪ್ಪಾಲಿನಲ್ಲಿ ಗೆಳೆಯನಿಗೆ ತಲುಪುತ್ತೆ , ತಡವಾದರೆ ಅನಗತ್ಯ ತೊಂದರೆ. ಅವಸರವಸರವಾಗಿ ಐವತ್ತು ಪೈಸೆ ಕೊಟ್ಟು “ಬಿಲ’ದಲ್ಲಿ ಅಂಚೆಕಾರ್ಡು ಪಡೆದು ಕಚೇರಿಯ ಮೂಲೆಯಲ್ಲಿರುವ ಮೇಜಿನತ್ತ ನಡೆದೆ. ಮೇಜಿನ ಅಂಚಿನಲ್ಲಿ ಅಂಟಿನ ಡಬ್ಬ ಇತ್ತು. ಎಲ್ಲರೂ ಅದೇ ಮೇಜಿನ ಮೇಲೆ ಕಾಗದವನ್ನು ಅಂಟಿಸಿ ಅಂಟಿಸಿ ಆ ಮೇಜಿನ ಯಾವ ಭಾಗದಲ್ಲಿ ಬೆರಳಿಟ್ಟರೂ ಅಂಟು. ಎಷ್ಟೊಂದು ಮಂದಿಯ ಭಾವನೆಗಳನ್ನು ಬೆಸೆದ ಅಂಟು ಇದು! ನಾನು ಮೇಜಿನ ಒಂದು ಮೂಲೆಯಲ್ಲಿ ಕಾರ್ಡಿಟ್ಟು ಜೇಬಿನಿಂದ ಪೆನ್ನು ತೆಗೆದು ಬರೆಯಬೇಕೆನ್ನುವಷ್ಟರಲ್ಲಿ…
ಜೇಬಿನಲ್ಲಿ ಪೆನ್ನಿಲ್ಲ ! ಚೀಲದಲ್ಲೆಲ್ಲ ತಡಕಾಡಿದೆ. ಬರುವಾಗ ಎಲ್ಲಿಯೋ ಬಿದ್ದುಹೋಗಿರಬೇಕು. ಮನೆಯಲ್ಲಿ ಜೇಬಿಗೆ ಹಾಕಿದ್ದು ಸ್ಪಷ್ಟ ನೆನಪಿದೆ. ದಿಢೀರ್ ಪತ್ರ ಬರೆಯುವವರಿಗೆ, ಪತ್ರದ ಮೇಲೆ ವಿಳಾಸ ಬರೆಯುವವರಿಗೆ ಅನುಕೂಲವಾಗಲೆಂದು ಮೇಜಿನ ಕಾಲಿಗೆ ಫೋಸ್ಟಾಫೀಸಿನವರೇ ಒಂದು ಹಳೆಯ ಕಂದು ಬಣ್ಣದ ಮರದ ಪೆನ್ನನ್ನು ಕಟ್ಟಿ ಬಿಡುತ್ತಾರೆ. ಆದರೆ ಇಲ್ಲಿ ಅದೂ ಇಲ್ಲ. ಪೋಸ್ಟಾಫೀಸಿನವರೆಗೆ ಬಂದೂ ಹಿಂದೆ ಹೋಗುವುದೆಂದರೆ… ಅದೂ ಮರೆಗುಳಿಯಾದ ನನಗೆ ಪತ್ರ ಬರೆಯಲು ನೆನಪಾದದ್ದೇ ಪುಣ್ಯ. ಅಲ್ಲದೆ, ಇವತ್ತು ಡಬ್ಬದಲ್ಲಿ ಕಾಗದ ಹಾಕದಿದ್ದರೆ…
ಯಾರಲ್ಲಿ ಪೆನ್ನು ಕೇಳ್ಳೋಣ! ಎಲ್ಲರೂ ತುಂಬಾ ಬಿಝಿಯಾಗಿ ಕಾಣುತ್ತಿದ್ದರು. ನಾನು ಕೇಳಿದ ಬಳಿಕ ಅವರು ಕೊಡದಿದ್ದರೆ ನನ್ನ ಅಭಿಮಾನಕ್ಕೆ ಭಂಗ. ಕೆಲವರು ಪೆನ್ನು ಕೊಟ್ಟು ಅದರ ಟಾಪನ್ನು ತಮ್ಮಲ್ಲೇ ಉಳಿಸಿಕೊಂಡು ಕೊಂಚ ನಮ್ಮನ್ನು ಶಂಕೆಯಿಂದಲೇ ಕಾಣುತ್ತಾರೆ. ಅದೂ ಒಂಥರಾ ಅನ್ನಿಸುತ್ತದೆ. ಪೆನ್ನಿಗೂ ತತ್ವಾರವೇ ಎಂದು ಕೊಂಕುದೃಷ್ಟಿಯಿಂದ ನೋಡುವವರಿಲ್ಲದಿಲ್ಲ.
ನಾನು ವಾಚ್ ನೋಡಿದೆ. ಬಸ್ಸಿಗೆ ಇನ್ನು ಎರಡೇ ನಿಮಿಷ. ಪೋಸ್ಟಾಫೀಸಿನ ನೌಕರನ ಬಳಿ ಹೋಗಿ “ಪೆನ್ನು ಕೊಡ್ತೀರಾ?’ ಎಂದು ಕೇಳಿದರೆ, ಅವನು ಉದ್ಧಟತನದಿಂದ ಪೆನ್ನು ಕೂಡಾ ತರೋಕಾಗಲ್ವ ಎಂದು ಗಟ್ಟಿಯಾಗಿ ಹೇಳಿ ಇದ್ದವರೆದುರಿಗೆ ಮರ್ಯಾದೆ ಕಳೆದರೆ… ಎಂದು ಅಂಜಿ ಸುಮ್ಮನಿದ್ದೆ. ನಾನು ಚಡಪಡಿಸುತ್ತ ನಿಂತಿದ್ದರೆ, ಮೇಜಿನ ಇನ್ನೊಂದು ಮೂಲೆಯಲ್ಲಿ ಯಾರಿಗೋ ಏನನ್ನೋ ಬರೆದು ಅಂಟು ಹಚ್ಚಿ , ಅದರ ಮೇಲೆ ಅಂಗೈಯಲ್ಲಿ ಗುದ್ದಿ ಕತ್ತು ಎತ್ತಿದ ವ್ಯಕ್ತಿ ನನ್ನನ್ನೇ ನೋಡುತ್ತ, “ಪೆನ್ ಏನಾದರೂ ಬೇಕಾ?’ ಎಂದಿತು.
ನಾನು “ಹೌದು’ ಎನ್ನುತ್ತ ಕೈ ಮುಂದೆ ನೋಡಿದೆ.
ಎರಡು ಸಾಲು ಬರೆದು ಅವನಿಗೆ ಪೆನ್ನು ಮರಳಿ ಕೊಟ್ಟು , ಕಾರ್ಡನ್ನು ಅಂಚೆಡಬ್ಬಕ್ಕೆ ತುರುಕಿಸಿ ಹೊರಬರುವಷ್ಟರಲ್ಲಿ ನನ್ನ ಬಸ್ ಕೂಡಾ ಬಂದಿತ್ತು.
ಬಸ್ಸಿನಲ್ಲಿ ಕುಳಿತದ್ದೇ ಅಂಚೆಕಾರ್ಡಿನಲ್ಲಿ ಹೆಸರು-ವಿಳಾಸ ಸರಿಯಾಗಿ ಬರೆದಿದ್ದೇನೆ ಎಂದು ನೆನಪಿಸಿಕೊಂಡು ಸಮಾಧಾನ ಪಟ್ಟುಕೊಂಡೆ.
ಅಂದ ಹಾಗೆ, ಪರಿಚಯವೇ ಇಲ್ಲದೆ ಪೆನ್ನು ಕೊಟ್ಟವನಿಗೂ ಹೆಸರು-ವಿಳಾಸ ಇರಬಹುದಲ್ಲ , ನಾನೇಕೆ ಅದನ್ನು ಕೇಳಲಿಲ್ಲ ಅಂತನ್ನಿಸಿತು. ಅವನೆಲ್ಲಾದರೂ ಅಲ್ಲೇ ನಿಂತಿರಬಹುದು, ಅವನನ್ನೊಮ್ಮೆ ಸುಮ್ಮನೆ ನೋಡಿ ಬಿಡೋಣ ಎಂದು ಒಂದು ರೀತಿಯ ನಿವ್ಯಾìಜ ಪ್ರೀತಿಯಿಂದ ಬಸ್ಸಿನಿಂದಲೇ ಪೋಸ್ಟಾಫೀಸಿನತ್ತ ಕತ್ತು ನಿರುಕಿಸಿ ನೋಡಿದೆ. ಅವನಂಥ ನೂರಾರು ಮಂದಿ ಅಲ್ಲಿ ಓಡಾಡುತ್ತಿರುವಂತೆ ಭಾಸವಾಯಿತು. ಅವನನ್ನು ಗುರುತಿಸುವುದಾದರೂ ಹೇಗೆ?
ವಿಜಯ