ಬೆಂಗಳೂರು: ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಹೇರಿದ್ದು ತುರ್ತು ಪರಿಸ್ಥಿತಿಯಲ್ಲ, ಅದು ಸರ್ವಾಧಿಕಾರ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಹೇಳಿದ್ದಾರೆ.
ಸಾಹಿತ್ಯ ಸಂಗಮ ವತಿಯಿಂದ ಭಾನುವಾರ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಆರ್‌ಎಸ್‌ಎಸ್‌ನ ಪ್ರಚಾರಕರಾಗಿದ್ದ ದಿವಂಗತ ನ.ಕೃಷ್ಣಪ್ಪ ಅವರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ’ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ಎಲ್ಲರೂ ಹೇಳುತ್ತಾರೆ. ತುರ್ತು ಪರಿಸ್ಥಿತಿ ಎಂಬುದು ರಾಜಕೀಯ ಪರಿಭಾಷೆ. ನಿಜವಾದ ಅರ್ಥದಲ್ಲಿ ಅದು ಸರ್ವಾಧಿಕಾರದ ಹೇರಿಕೆಯಾಗಿತ್ತು. ತಮಗಾಗದವರು, ತಮ್ಮ ವಿರುದ್ಧ ಮಾತನಾಡುವವರನ್ನು ಜೈಲಿನಲ್ಲಿಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನವರು ತೆರೆ ಮರೆಯಲ್ಲಿ ಜನರು ಮತ್ತು ಪ್ರಮುಖರ ಜತೆ ಸಂವಹನ ಮಾಡದೇ ಇದ್ದರೆ ದೇಶದ ಪರಿಸ್ಥಿತಿ ಕರಾಳವಾಗಿರುತ್ತಿತ್ತು ಎಂದರು.
ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ರಾಜಕೀಯವಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಚಿಂತನೆ ಮಾಡುತ್ತಿದ್ದರು. ಈ ಚಿಂತನೆಗಳೆಲ್ಲವೂ ಒಟ್ಟಾದರೆ ಪರಿಸ್ಥಿತಿ ತಮಗೆ ವ್ಯತಿರಿಕ್ತವಾಗುತ್ತದೆ ಎಂದು ತುರ್ತು ಪರಿಸ್ಥಿತಿ ಹೇರಿದವರು ಅಂಥವರನ್ನು ಜೈಲಿನಲ್ಲಿಟ್ಟಿದ್ದರು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪ್ರಚಾಕರು ಸೇರಿದಂತೆ ಪ್ರಮುಖರು ಜೈಲಿನಲ್ಲಿದ್ದವರ ಮಧ್ಯೆ ಸಂವಹನಕ್ಕೆ ಪ್ರಯತ್ನಿಸಿದರು. ಇದರ ಪರಿಣಾಮ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬರುವಂತಾಯಿತು ಎಂದರು.
ಮತ್ತೆ ಇಂದಿರಾ ಪ್ರಧಾನಿಯಾಗಲು ಕಾರಣರಾದ ಎಡಪಂಥೀಯರು: ಆದರೆ, ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿದ್ದ ಮೂವರು ಎಡಪಂಥೀಯ ಸಮಾಜವಾದಿಗಳು ತಮ್ಮ ಕೆಲಸ ಶುರುಮಾಡಿದ್ದರು. ಒಂದೋ ಆರ್‌ಎಸ್‌ಎಸ್ ಬಿಡಬೇಕು, ಇಲ್ಲವೇ ಮಂತ್ರಿಸ್ಥಾನ ಬಿಡಬೇಕು ಎಂದು ಒತ್ತಡ ಹೇರಲಾರಂಭಿಸಿದರು. ಇದರ ಪರಿಣಾಮ ಸರ್ಕಾರ ಉರುಳಿ ಮತ್ತೆ ಇಂದಿರಾಗಾಂಧಿ ಪ್ರಧಾನಿಯಾಗುವಂತಾಯಿತು. ನಂತರ ದೇಶಕ್ಕೆ ಏನಾಯಿತೋ ಗೊತ್ತಿಲ್ಲ ಎಂದು ಹೇಳಿದರು.
ಈ ವಿದ್ಯಮಾನದ ಬಳಿಕ ನ.ಕೃಷ್ಣಪ್ಪ ಅವರು ಶಿಕ್ಷಣಕ್ಕೆ ಶಕ್ತಿ ತುಂಬಬೇಕು ಎಂಬ ನಿಟ್ಟಿನಲ್ಲಿ ಗುರುಕುಲ ಪ್ರಬೋಧಿನಿ ಎಂಬ ಶಾಲೆ ಆರಂಭಿಸಿದರು. ಇಂದಿಗೂ ಈ ಗುರುಕುಲ ಮಕ್ಕಳಿಗೆ ಬದುಕಿನ ಶಿಕ್ಷಣ ನೀಡುತ್ತಿದೆ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವವರು ಈ ಗುರುಕುಲಕ್ಕೆ ಹೋಗಿ ಅಲ್ಲಿನ ಸ್ಥಿತಿಗತಿ ನೋಡಿ ಸಂಶೋಧನೆ ನಡೆಸಿದರೆ ದೇಶಕ್ಕೆ ಅತ್ಯುತ್ತಮ ಶಿಕ್ಷಣ ಸಿಗುತ್ತದೆ. ಆ ನಿಟ್ಟಿನಲ್ಲಿ ಆಡಳಿತ ನಡೆಸುವವರು ಕೆಲಸ ಮಾಡಬೇಕು ಎಂದರು.