Advertisement

ನಾಳೆಯಿಂದ ಜಿಲ್ಲೆಯಲ್ಲಿ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ

12:45 PM Feb 19, 2018 | Team Udayavani |

ಮೈಸೂರು: ಪಡಿತರ ಚೀಟಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಮಂಗಳವಾರದಿಂದ ಜಿಲ್ಲೆಯಾದ್ಯಂತ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಂದೀಪ್‌ ಡಿ. ತಿಳಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೂ ಪಡಿತರ ಚೀಟಿಗಾಗಿ 1,32,404 ಲಕ್ಷ ಮಂದಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದು, ಈಗಾಗಲೇ 88,140 ಫ‌ಲಾನುಭವಿಗಳಿಗೆ ಅಂಚೆ ಮೂಲಕ ಪಡಿತರ ಚೀಟಿ ವಿತರಿಸಲಾಗಿದೆ.

ಉಳಿದಂತೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವ 44,266 ಮಂದಿಗೆ ಇನ್ನೂ ಪಡಿತರ ಚೀಟಿ ವಿತರಣೆ ಮಾಡಬೇಕಿದೆ. ಹೀಗಾಗಿ ಬಾಕಿಯಿರುವ ಅರ್ಜಿದಾರರಿಗೆ ಪಡಿತರ ಚೀಟಿ ಪಡೆಯಲು ವಿಳಂಬವಾಗುತ್ತಿರುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಆಹಾರ ಇಲಾಖೆ ವತಿಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲೆಲ್ಲಿ ಕಾರ್ಯಕ್ರಮ: ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ಫ‌ಲಾನುಭವಿಗಳಿಗೆ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್‌ಗಳಲ್ಲಿ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ.

ಹೊಸ ಪಡಿತರ ಚೀಟಿ ಪಡೆಯಲು ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ತಮ್ಮ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಂದು ತಮ್ಮಲ್ಲಿರುವ ಅರ್ಜಿ ಸ್ವೀಕೃತಿ, ಕುಟುಂಬದ ಆದಾಯ ಪ್ರಮಾಣಪತ್ರ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ಸಂಖ್ಯೆಯೊಂದಿಗೆ ಗ್ರಾಮ ಪಂಚಾಯತಿ ಕಚೇರಿಗೆ ತೆರಳಿ ಪಡಿತರ ಚೀಟಿ ಪಡೆಯಬಹುದಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಕುಟುಂಬದ ಯಾವುದೇ ಒಬ್ಬ ಸದಸ್ಯರು ಹಾಜರಾಗಿ ಬೆರಳಚ್ಚು ನೀಡಿ, ಕಾರ್ಡ್‌ ಪಡೆಯಬಹುದು ಎಂದರು.

Advertisement

ಅರ್ಜಿದಾರರಿಗೆ ಅವಕಾಶ: ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಈಗಾಗಲೇ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಸ್ಥಳದಲ್ಲಿ ಪಡಿತರ ಚೀಟಿ ಪಡೆಯಲು ಅವಕಾಶವಿದ್ದು, ಹೊಸದಾಗಿ ಅರ್ಜಿ ಸ್ವೀಕರಿಸುವುದಿಲ್ಲ.

ಹೀಗಾಗಿ ಅರ್ಜಿ ಸಲ್ಲಿಸದಿರುವವರು ಗ್ರಾಮಪಂಚಾಯಿತಿ ಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಖಾಸಗಿ ಪೋಟೋ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅದರ ಸ್ವೀಕೃತಿ ಪತ್ರ ಹಾಗೂ ಇನ್ನಿತರ ದಾಖಲೆಗಳೊಂದಿಗೆ ಆಹಾರ ನಿರೀಕ್ಷಕರನ್ನು ಬೇಟಿ ಮಾಡಿ ಹೊಸ ಕಾರ್ಡ್‌ ಪಡೆಯಬಹುದು ಎಂದ ಅವರು, ಈ ಕಾರ್ಯಕ್ರಮದಲ್ಲಿ ಸ್ಥಳದಲ್ಲೇ ಪಡಿತರ ಚೀಟಿ ಪಡೆಯಲು ಅರ್ಜಿದಾರರು ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಮಂಗಳವಾರ ದಿಂದ ಮಾರ್ಚ್‌ 15ರವರೆಗೆ ತಕ್ಷಣ ಪಡಿತರ ಚೀಟಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ಪಡಿತರ ಚೀಟಿ ಪಡೆಯಲು ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವವರು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕಿದೆ. ನಿಗದಿತ ದಿನದಂದು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ, ಸಮೀಪದ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಕಚೇರಿಗೆ ತೆರಳಿ ರೇಷನ್‌ ಕಾರ್ಡ್‌ ಪಡೆಯಬಹುದು.
-ಡಾ.ಕಾ. ರಾಮೇಶ್ವರಪ್ಪ, ಉಪ ನಿರ್ದೇಶಕ, ಆಹಾರ ಇಲಾಖೆ.

Advertisement

Udayavani is now on Telegram. Click here to join our channel and stay updated with the latest news.

Next