ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ “ನೇರ ಪಾವತಿ’ ಜಾರಿ ಗೊಳಿಸಲು ವಿಕಾಸ ಸೌಧದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನೌಕರರ ಸಂಘದ ಪ್ರತಿನಿಧಿಗಳು, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ಅದನ್ನು ಆದಷ್ಟು ಬೇಗನೆ ಜಾರಿಗೊಳಿಸುವಂತೆ ಆಗ್ರಹಿಸಲಾಗಿದೆ.
ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗ ಸಂಚಾಲಕ ಬಿ.ಕೆ. ಅಣ್ಣಪ್ಪ ಕಾರೆಕಾಡು ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಕಾರ್ಮಿಕರ ದೀರ್ಘ ಕಾಲದ ಹೋರಾಟಕ್ಕೆ ಫಲ ದೊರೆತಿದೆ ಎಂದರು.
ಅನಗತ್ಯವಾಗಿ ಏಜೆನ್ಸಿಗಳ ಶೋಷಣೆಗೆ ಸಿಲುಕಿಸುವ ಗುತ್ತಿಗೆ ಪದ್ಧತಿಯ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ಪಾವತಿಗೆ ತರಲು ಅಗತ್ಯ ಪ್ರಸ್ತಾವನೆ ಸಿದ್ಧಪಡಿಸುವಂತೆ ನಗರಾಭಿವೃದ್ಧಿ ಕಾರ್ಯದರ್ಶಿ ಡಾ| ಅಜಯ್ ನಾಗಭೂಷಣ್ ಅವರಿಗೆ ಸಚಿವರು ನೀಡಿರುವ ಸೂಚನೆಗೆ ಸಂಘದ ಪ್ರತಿನಿಧಿಗಳು ಸಭೆಯಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೆ ಪ್ರಸ್ತಾವನೆ ಹೆಸರಿನಲ್ಲಿ ಕಾಲಹರಣ ಬೇಡ. ಪ್ರಸ್ತಾವಿತ ವಿಷಯ ಸಂಬಂಧಿಸಿದ ಪ್ರಸ್ತಾವನೆ ಹಣಕಾಸು ಇಲಾಖೆಯ ಲ್ಲಿದೆ. ಹೊರಗುತ್ತಿಗೆ ನೌಕರರ ಮಾಹಿತಿ ನಗರಾಭಿವೃದ್ಧಿ ಇಲಾಖೆಯ ಬಳಿ ಇದೆ. ಆದ್ದರಿಂದ ನೇರಪಾವತಿಗೆ ವಿಳಂಬಿಸಬಾರದು ಎಂದು ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದರು.
ಮಂಗಳೂರು ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ, ಮುಖಂಡರಾದ ಕಿರಣ್ ದೇವಾಡಿಗ, ಕಿರಣ್ ನಾಯ್ಕ, ಬಾಲ ಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.