Advertisement

ಕೇರಳದಲ್ಲಿ ಮಳೆ ಅಬ್ಬರ; ಐದು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

10:54 AM May 16, 2022 | Team Udayavani |

ತಿರುವನಂತಪುರ: ಕೇರಳದ ಹಲವು ಜಿಲ್ಲೆಗಳಲ್ಲಿ ರವಿವಾರದಂದು ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಶನಿವಾರ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಈ ಮಳೆ ಇನ್ನೂ ಐದು ದಿನಗಳ ಕಾಲ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ರವಿವಾರ ಕೇರಳಕ್ಕೆ ಎಚ್ಚರಿಸಿದೆ. ಐದು ಜಿಲ್ಲೆಗಳಿಗೆ ಸೋಮವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

“ಅರೇಬಿಯನ್‌ ಸಮುದ್ರದಿಂದ ದಕ್ಷಿಣ ಭಾರತದ ಕರಾವಳಿ ಭಾಗದ ಕಡೆಗೆ ಬಲವಾದ ಮಾರುತಗಳು ಬೀಸುತ್ತಿದ್ದು, ಕರ್ನಾಟಕದ ಕರಾವಳಿ ಭಾಗ, ಕೇರಳ, ತಮಿಳುನಾಡು ಮತ್ತು ಮಾಹೆ ಪ್ರದೇಶಗಳಲ್ಲಿ ಮೇ 16ರವರೆಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ’ ಎಂದು ರವಿವಾರ ಐಎಂಡಿ ಎಚ್ಚರಿಸಿದೆ. ಈ ಪ್ರದೇಶಗಳಲ್ಲಿ 64ಮಿ.ಮೀ.ನಿಂದ 204.4ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದೇ ಹಿನ್ನೆಲೆ ಎರ್ನಾಕುಲಂ, ಇಡುಕ್ಕಿ, ತೃಶ್ಶೂರ್‌, ಕೋಯಿಕೋಡ್‌ ಮತ್ತು ಕಣ್ಣೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಈ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವರಾಗಿರುವ ಕೆ.ರಂಜನ್‌ ತಿಳಿಸಿದ್ದಾರೆ. “ಗುಡ್ಡಗಾಡು ಪ್ರದೇಶಗಳಿರುವ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿರುವುದರಿಂದಾಗಿ ಅಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಿಶೇಷ ನಿರ್ದೇಶನ ನೀಡಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮ ರೀತಿಯಲ್ಲಿ ಗಮನಿಸಲು ಆಪತ್ತು ವಿಶ್ಲೇಷಕರಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್‌ ಅವರು ಶನಿವಾರವೇ ಸಭೆ ನಡೆಸಿದ್ದು, ವಿಪತ್ತು ನಿರ್ವಹಣ ಸಿದ್ಧತೆಗಳನ್ನು ತೀವ್ರಗೊಳಿಸಲು ಸೂಚಿಸಿದ್ದರು. ಎಲ್ಲ ನಗರಗಳಲ್ಲಿ ಕಂಟ್ರೋಲ್‌ ರೂಂಗಳನ್ನು ಆರಂಭಿಸಲಾಗಿದ್ದು, ಆವಶ್ಯಕತೆ­ಯಿದ್ದರೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲು ತಿಳಿಸಲಾಗಿದೆ. ಜಲಾವೃತ ಪ್ರದೇಶಗಳಿಂದ ನೀರನ್ನು ತೆಗೆಯಲೆಂದು ಪಂಪಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕೇರಳದ 5 ಜಿಲ್ಲೆಗಳಿಗೆ ರವಿವಾರವೂ ರೆಡ್‌ ಅಲರ್ಟ್‌ ಘೋಷಿಸಲಾಗಿತ್ತು.

ಕೊಚ್ಚಿಯಲ್ಲಿ ಅವಾಂತರ: ರವಿವಾರ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ನಗರದ ಬಹುತೇಕ ಭಾಗಗಳು ಜಲಾವೃತವಾಗಿದ್ದವು. ನಗರದ ಸರಕಾರಿ ಬಸ್‌ ನಿಲ್ದಾಣವೂ ಸಂಪೂರ್ಣ ಜಲಾವೃತವಾಗಿದ್ದ­ರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು. ಇನ್ನೊಂದೆಡೆ ಎರ್ನಾಕುಲಂ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಜನಜೀವನಕ್ಕೆ ಅಡ್ಡಿಯಾಗಿದೆ. ಹಲವು ಮನೆಗಳು ಜಲಾವೃತವಾದ ಹಿನ್ನೆಲೆ, 2 ಗಂಜಿ ಕೇಂದ್ರಗಳನ್ನು ತೆರೆದು 9 ಕುಟುಂಬಗಳಿಗೆ ಆಶ್ರಯ ನೀಡಲಾಗಿದೆ.

Advertisement

ಶೇ.43 ಹೆಚ್ಚುವರಿ ಮಳೆ: ಭಾರತದ ದಕ್ಷಿಣ ಭಾಗದಲ್ಲಿ ಮಾ.1ರಿಂದ ಮೇ 14ರ ವರೆಗೆ 109 ಮಿ.ಮೀ. ಮಳೆಯಾಗಿದೆ. ಇದು ಅಂದಾಜು ಮಳೆಗಿಂತ ಶೇ.43 ಹೆಚ್ಚಿದೆ. ಈ ಅವಧಿಯಲ್ಲಿ ಕೇರಳದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಮೊದಲೇ ಅಂದಾಜಿಸಿದ್ದ ಪೂರ್ವ ಮುಂಗಾರು ಮಳೆ ಪ್ರಮಾಣದಲ್ಲಿ ಈಗಾಗಲೇ ಕರ್ನಾಟಕವು ಶೇ.82 ಮಳೆ ಕಂಡಿದೆ. ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಶೇ.79, ಕೇರಳದಲ್ಲಿ ಶೇ.73, ಪುದುಚೇರಿಯಲ್ಲಿ ಶೇ.59, ಲಕ್ಷದ್ವೀಪದಲ್ಲಿ ಶೇ.39 ಮತ್ತು ತಮಿಳುನಾಡಿನಲ್ಲಿ ಶೇ.21 ಪೂರ್ವ ಮುಂಗಾರಿನ ಮಳೆಯಾಗಿದೆ.

ಅಂಡಮಾನ್‌ ನಿಕೋಬಾರ್‌ಗೆ ಮುಂಗಾರು ಪ್ರವೇಶ
ಪ್ರತೀ ವರ್ಷಕ್ಕಿಂತ ಈ ವರ್ಷ ಬಹುಬೇಗನೆ ಆಗಮಿಸಿರುವ ಮುಂಗಾರು ರವಿವಾರವೇ ಅಂಡಮಾನ್‌ ನಿಕೋಬಾರ್‌ ದ್ವೀಪ ಮತ್ತು ಆಗ್ನೇಯ ಬಂಗಾಲ ಕೊಲ್ಲಿಗೆ ಕಾಲಿಟ್ಟಿದೆ. ದಿನಕಳೆದಂತೆ ಮುಂಗಾರು ಬಿರುಸಾಗಲಿದ್ದು, ಈ ಪ್ರದೇಶಗಳಲ್ಲಿ ಮುಂದಿನ 5 ದಿನಗಳ ಕಾಲ 64.55ಮಿ.ಮೀ.ನಿಂದ 115.4ಮಿ.ಮೀ. ಮಳೆಯಾಗಲಿದೆ ಎಂದು ಐಎಂಡಿ ರವಿವಾರ ಎಚ್ಚರಿಸಿದೆ.

ಅಸ್ಸಾಂನಲ್ಲಿ ಭೂಕುಸಿತ, ರೈಲು ಸೇವೆ ಸ್ಥಗಿತ
ಅಸ್ಸಾಂನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯು­ ತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ. ದಿಮಾ ಹಸಾವೋ ಜಿಲ್ಲೆಯಲ್ಲಿ ರವಿವಾರ ಉಂಟಾದ ಭೂಕುಸಿತ ದಿಂದಾಗಿ ಬರಾಕ್‌ ಕಣಿವೆ ಪ್ರದೇಶ ರೈಲು ಮತ್ತು ವಾಹನ ಸಂಚಾರ ಸ್ಥಗಿತ­ಗೊಂಡಿತ್ತು. 76ಕಿ.ಮೀ ರೈಲು ಮಾರ್ಗದಲ್ಲಿ 26 ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದ­ರಿಂದಾಗಿ 17 ರೈಲುಗಳ ಸಂಚಾರ ನಿಷೇಧಿಸಲಾಗಿತ್ತು. ಅದಾಗಲೇ ಹಳಿಗಿಳಿದಿದ್ದ ಎರಡು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದ್ದು, ಅದರಲ್ಲಿದ್ದ 2,645 ಜನರನ್ನು ಬಸ್‌, ಹೆಲಿಕಾಪ್ಟರ್‌ಗಳನ್ನು ಬಳಸಿ ಸ್ಥಳಾಂತರ ಮಾಡಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next